
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾ ಭಾರತಿ ಉಚ್ಚ ಶಿಕ್ಷಾ ಸಂಸ್ಥಾನ ಕರ್ನಾಟಕ ಮತ್ತು ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾರತ್ ಬೋಧ್ ಮಾಲಾ ಉಪನ್ಯಾಸ ಮಾಲಿಕೆಯಲ್ಲಿ “ ಕಲೆಗಳ ದೃಷ್ಟಿಕೋನದಿಂದ ಶಿಕ್ಷಣದ ವ್ಯಾಖ್ಯಾನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರು ಸಂಗೀತ ಮತ್ತು ನೃತ್ಯ, ಪರಿಸರದಿಂದ ಸಿಕ್ಕಿರುವಂತಹದು. ಪ್ರತಿಯೊಂದು ಧ್ವನಿಯೂ ಕಲಾವಿದನಿಗೆ ಸಂಗೀತದಂತೆ ಕಾಣುತ್ತದೆ. ಮರಗಳು ಮತ್ತು ನದಿಗಳ ಚಲನೆ ಕಲಾವಿದನಿಗೆ ನೃತ್ಯವಾಗಿ ಕಾಣುವುದರೊಂದಿಗೆ ಏಕಾಗ್ರತೆ ಲಭಿಸುತ್ತದೆ ಹಾಗು ನವರಸಗಳು, ನೃತ್ಯ, ಸಂಗೀತ ಮತ್ತು ಸಂಭಾಷಣೆಯ ಏರಿಳಿತದ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ ಸಲ್ಡಾನ ವಹಿಸಿ ಭಾಷೆ ಕಲಿಕೆಯಿಂದಾಗಿ ನಟನೆ ಮರೆಯುತ್ತೇವೆ. ಸಂಗೀತ, ನೃತ್ಯ, ಶಿಕ್ಷಕರ ಬೋಧನೆಗೆ ಸಹಾಯಕ. ಶಿಕ್ಷಕರಿಗೆ ನವರಸಗಳ ಬಗ್ಗೆ ಅರಿವಿದ್ದಾಗ ಉತ್ತಮ ಗುರುವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿದುಷಿ ಮಂಜುಳ ಸುಬ್ರಹ್ಮಣ್ಯರ ಶಿಷ್ಯೆ ಅವನಿ ಬೆಳ್ಳಾರೆ ಹಾಗೂ ಕಾಲೇಜಿನ ಉಪನ್ಯಾಸಕರು, ಬಿ.ಎಡ್. ಮತ್ತು ಡಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ಬಿ.ಎಡ್. ಪ್ರಶಿಕ್ಷಣಾರ್ಥಿಗಳಾದ ಪೂಜಶ್ರೀ ಅತಿಥಿ ಪರಿಚಯ ಮಾಡಿ, ಶ್ವೇತಾ ಎಂ.ಎಸ್. ಸ್ವಾಗತಿಸಿ, ಶ್ರವಣ ಕಾರ್ಯಕ್ರಮವನ್ನು ನಿರೂಪಿಸಿದರು. ಹರ್ಷಿತಾ ವಂದಿಸಿದರು.