ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರೋವರ್ಸ್- ರೇಂಜರ್ಸ್ ಘಟಕ, ಎನ್. ಸಿ. ಸಿ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಾಗೂ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಯಿತು.
ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಿ.ಜಿ. ಸುಬ್ಬಾಪುರ ಮಠ ಜಾಗೃತಿ ಮೂಡಿಸಿದರು.
ಪ್ರಾಂಶುಪಾಲ ಸುರೇಶ್ ವಿ. ಅಧ್ಯಕ್ಷತೆಯನ್ನು ವಹಿಸಿ ಮಾದಕ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವವಾಗಿದೆ ಎಂದು ತಿಳಿಸಿದರು. ಎನ್.ಸಿ.ಸಿ ಸಂಯೋಜಕ ಸುಧಾರಾಣಿ, ಪೊಲೀಸ್ ಸಿಬ್ಬಂದಿಗಳಾದ ಶ್ವೇತಾ, ವಿಶ್ವನಾಥ್, ಜಗದೀಶ, ಹನುಮಂತ ಹಾಗೂ ಕಾಲೇಜಿನ ಬೋಧಕ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಯಾದ ರೊನಾಲ್ಡ್ ಪ್ರವೀಣ್ ಕೊರಾಯ ಸ್ವಾಗತಿಸಿದರು. ಯುವರೆಡ್ ಕ್ರಾಸ್ ಘಟಕದ ಸಂಚಾಲಕ ರವಿ ಎಂ.ಎನ್. ವಂದಿಸಿದರು.