ನೀರಿನಲ್ಲಿ ಬೈಕ್ ಕೊಚ್ಚಿ ಹೋದ ಪ್ರಕರಣ: ರಕ್ಷಿತ್ ಶಿವರಾಂ ಭೇಟಿ

0

ಬೆಳ್ತಂಗಡಿ: ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಸಮೀಪದ ನದಿಯಲ್ಲಿ ಆದಿತ್ಯವಾರ ಯುವಕರೀರ್ವರು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋದ ಘಟನಾ ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಜೂ.17ರಂದು ಭೇಟಿ ನೀಡಿದರು.

ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು ಎಂಬಲ್ಲಿ ಹರಿಯುತ್ತಿರುವ ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ನದಿಯನ್ನು ಬೈಕ್ ಸಮೇತ ದಾಟುವ ಸಂದರ್ಭದಲ್ಲಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅದೃಷ್ಟವಶಾತ್ ಬೈಕ್ ನದಿ ಬದಿಯಲ್ಲಿ ಸಿಲುಕಿದ್ದು ಯುವಕರಿಬ್ಬರು ಯಾವುದೋ ಬಳ್ಳಿಯ ಸಹಾಯದಿಂದ ಸಿನಿಮೀಯ ರೀತಿಯಲ್ಲಿ ಬದುಕುಳಿದಿದ್ದಾರೆ. ಈ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿದ್ದು ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಅರಣ್ಯ ಇಲಾಖೆಯ ಕಾನೂನುಗಳು ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದ ವೀಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರದ ಕೊಂಡಿಯಾಗಿ ಕಾರ್ಯ ನಿರ್ವಹಿಸಲು ರಕ್ಷಿತ್ ಶಿವರಾಂ ಭೇಟಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 9 ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ಪ್ರದೇಶಕ್ಕೆ ಸಂವಿಧಾನಬದ್ದ ಮೂಲಭೂತ ಸೌಕರ್ಯಗಳಾದ ವಿದ್ಯುತ್, ರಸ್ತೆ ಸಂಪರ್ಕವಿಲ್ಲದೆ ಒಂದೂವರೆ ಶತಮಾನಗಳೇ ಕಳೆದಿದೆ. ರಕ್ಷಿತ್ ಶಿವರಾಂ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಪರಿಶಿಷ್ಟ ಪಂಗಡದ ತಾಲೂಕು ಅಧ್ಯಕ್ಷ, ಆದಿವಾಸಿ ಮುಖಂಡ ಜಯಾನಂದ ಪಿಲಿಕಲ, ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಗೌಡ ಸವಣಾಲು, ಉಪಾಧ್ಯಕ್ಷರುಗಳಾದ ಅರುಣ್ ಲೋಬೊ, ವಿನಯ್ ಕುಮಾರ್ ಉಜಿರೆ , ಬೂತ್ ಸಮಿತಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಮೋಹನ್ ರೈ ಸವಣಾಲು, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಪಕ್ಷದ ನಾಯಕರು, ಆದಿವಾಸಿ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here