ಉಜಿರೆ: ಮೇ. 27ರಂದು ಜೈನ ಧರ್ಮ ಕೇವಲ ಒಂದು ಮತ ಅಷ್ಟೇ ಅಲ್ಲ. ಅದೊಂದು ಸರಳವಾದ ಜೀವನ ಶೈಲಿ, ಅದೊಂದು ವೈಚಾರಿಕತೆ, ನಾರಕ ತೀರ್ಯಂಚ ಗತಿಗಳಿಂದ ಮುಕ್ತಿ ಪಡೆದು ಮೋಕ್ಷ ಸಾಧನೆಗೆ ಜೈನ ಧರ್ಮ ದಾರಿ ತೋರುತ್ತದೆ ಎಂದು ಧೀಮತಿ ಜೈನ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ ‘ಆಧುನಿಕ ಜೀವನ ಶೈಲಿಯಲ್ಲಿ ಜೈನ ಧರ್ಮದ ಆಚರಣೆಯ ಪ್ರಸ್ತುತತೆ’ ಎಂಬ ವಿಷಯದ ಕುರಿತು ಕ್ಷೇಮವನ ಬೆಂಗಳೂರು ಇದರ ನಿರ್ದೇಶಕಿ ಶ್ರದ್ದಾ ಅಮಿತ್ ಅಭಿಪ್ರಾಯ ವ್ಯಕ್ತಪಡಿಸಿದರು. ಯಾವುದೇ ಧರ್ಮದ ತತ್ವಗಳನ್ನು ವೈಜ್ಞಾನಿಕ ಚಿಂತನೆಗೆ ಒಳಪಡಿಸಿ ಸಮಾಜದ ಒಳಿತಿಗಾಗಿ ಸಕಾರಾತ್ಮಕವಾಗಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯತೆಗಳಲ್ಲಿ ಒಂದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಜತ ಪಿ.ಶೆಟ್ಟಿ ಮಾತನಾಡಿ ಜೈನ ಧರ್ಮದ ನೈಜ ತಿರುಳನ್ನು ಅರ್ಥೈಸಿಕೊಂಡು ಪಾಲಿಸುವುದು ನೆಮ್ಮದಿಯ ಜೀವನಕ್ಕೆ ರಹದಾರಿ. ಜೈನ ಧರ್ಮದ ಮೂಲ ತತ್ವಗಳಾದ ಅಹಿಂಸೆ, ತ್ಯಾಗ, ಅಸ್ಥೇಯ, ಅಪರಿಗ್ರಹ ಹಾಗೂ ಅನೇಕಾಂತವಾದಗಳಲ್ಲಿ ಆಳವಾದ ಜೀವನದ ಸತ್ಯ ಅಡಗಿದೆ, ಅದನ್ನು ಅರಿತಾಗ ಜೀವನ ಸಾರ್ಥಕವಾಗುವುದು ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಗಳಲ್ಲಿ ವಿಶೇಷವಾಗಿ ತೊಡಗಿಸಿಕೊಂಡು ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿರುವ ಶ್ರದ್ಧಾ ಅಮಿತ್ ಅವರನ್ನು ಧೀಮತಿ ಜೈನ ಮಹಿಳಾ ಸಮಾಜದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪೆಹಲ್ಗಾಮ್ ಧಾಳಿಯಲ್ಲಿ ಮಡಿದ ನಾಗರಿಕರು ಹಾಗೂ ಪ್ರತಿಧಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸ್ಮೃತಿ ಜೈನ್ ಪ್ರಾರ್ಥಿಸಿ, ಸ್ಮಿತಾ ಜೈನ್ ಸ್ವಾಗತಿಸಿದರು. ಅಕ್ಷತಾ ಜೈನ್ ಅತಿಥಿಗಳನ್ನು ಪರಿಚಯಿಸಿದರು. ದಿವ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಪ್ರವೀಣ್ ಇಂದ್ರ ಹಾಗೂ ಉಲ್ಲಾಸಿನಿ ಕಂಬಳಿ ಸಹಕರಿಸಿದರು. ಪುನೀತ ಜೈನ್ ವಂದಿಸಿದರು.