ಬೆಳ್ತಂಗಡಿ: ಪಿಲ್ಯ ಗ್ರಾಮದ ಅಲೆಕ್ಕಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದಲ್ಲಿ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ವೇಣೂರು ಪೊಲೀಸ್ ಠಾಣಾ ಎಸ್.ಐ. ಆನಂದ ಎಂ. ಮತ್ತು ಸಿಬ್ಬಂದಿಗಳು ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಳಂಜ ಗ್ರಾಮದ ಮೂಡಾಯಿಬೆಟ್ಟು ನಿವಾಸಿ ಸುಂದರ ಪೂಜಾರಿಯವರ ಪುತ್ರ ಪ್ರವೀಣ್ (39), ಅಂಡಿಂಜೆ ಗ್ರಾಮದ ಅಲೆಕ್ಕಿ ಮನೆಯ ಕಾಂತಪ್ಪ ಪೂಜಾರಿಯವರ ಪುತ್ರ ರಮೇಶ್ (38), ಕರಂಬಾರು ಗ್ರಾಮದ ಬೀಡಿನಬೆಟ್ಟು ನಿವಾಸಿ ಜಾಕಬ್ ಲೋಬೋರವರ ಪುತ್ರ ಜೋಯೆಲ್ (26), ಸುಲ್ಕೇರಿಮೊಗ್ರು ಗ್ರಾಮದ ಹೊಸಮಳೆಯ ಬೂಬ ಪೂಜಾರಿಯವರ ಪುತ್ರ ರಾಜೇಶ್ ಪೂಜಾರಿ (40), ಕುದ್ಯಾಡಿ ಗ್ರಾಮದ ಪಂಚರತ್ನ ನಿವಾಸಿ ಚೆನ್ನಪ್ಪ ಪೂಜಾರಿಯವರ ಪುತ್ರ ಅವಿನಾಶ್(36), ಗರ್ಡಾಡಿ ಗ್ರಾಮದ ಹಚ್ಚಾಡಿ ಮನೆಯ ವಸಂತ ದೇವಾಡಿಗರವರ ಪುತ್ರ ತೇಜಸ್(24), ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹೋಮರಬೆಟ್ಟು ಗುರುಕೃಪಾ ನಿವಾಸದ ಬಾಲಯ್ಯರವರ ಪುತ್ರ ಸುಂದರ (46), ಗರ್ಡಾಡಿ ಗ್ರಾಮದ ಮಜಲುಮನೆಯ ವಿಠಲ ಪೂಜಾರಿಯವರ ಪುತ್ರ ಮೇಘರಾಜ್(25) ಮತ್ತು ಬಡಗಕಾರಂದೂರು ಗ್ರಾಮದ ಕೊಳಕೆಮಜಲು ಮನೆಯ ಸದಾನಂದ ದೇವಾಡಿಗರವರ ಪುತ್ರ ಉಮೇಶ್(28) ಆರೋಪಿಗಳು. ವೇಣೂರು ಪೊಲೀಸ್ ಠಾಣಾ ಎಸ್‌ಐ ಆನಂದ ಎಂ. ಅವರು ಹೊಸಂಗಡಿ ಗ್ರಾಮ ಪಂಚಾಯತ್ ಮರುಚುನಾವಣೆಯ ಬಂದೋಬಸ್ತು ಕರ್ತವ್ಯದಲ್ಲಿದ್ದ ವೇಳೆ ಪಿಲ್ಯ ಗ್ರಾಮದ ಅಲೆಕ್ಕಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕದಲ್ಲಿ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಒಂಬತ್ತು ನಗದು ರೂ. 14,900 ಹಾಗೂ ಅಂದಾಜು ಮೌಲ್ಯ 2,600ರೂ. ಬೆಲೆಬಾಳುವ ೫ ವಿವಿಧ ಬಣ್ಣದ ವಿವಿಧ ಗಾತ್ರದ ಹುಂಜಾ ಕೋಳಿ ಹಾಗೂ ಎರಡು ಬಾಲುಕತ್ತಿಯನ್ನು ಸ್ವಾಧೀನ ಪಡಿಸಿ ಠಾಣಾ ಎನ್.ಸಿ. ನಂಬ್ರ 78/25ರಂತೆ ಪ್ರಕರಣ ದಾಖಲಿಸಿ ಬೆಳ್ತಂಗಡಿ ಎ.ಸಿ.ಜೆ.ಎಂ. ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಕೋರಿಕೆ ಪತ್ರ ಸಲ್ಲಿಸಿ ನ್ಯಾಯಾಲಯದ ಅನುಮತಿ ಪಡೆದು ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.