ದ. ಕ., ಉಡುಪಿ ಜಿಲ್ಲೆಯ ಬಿಲ್ಲವ ಸಂಘಟನೆಗಳಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಿಗೆ ಮನವಿ

0

ಬೆಳ್ತಂಗಡಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ)ಯಲ್ಲಿ ಬಿಲ್ಲವ ಜಾತಿಯ ಉಪ ನಾಮವಾದ ಪೂಜಾರಿ ಶಬ್ದವನ್ನು ಪ್ರತ್ಯೇಕ ಜಾತಿ ಎಂದು ತಪ್ಪಾಗಿ ಗುರುತಿಸಿರುವುದರ ಬಗ್ಗೆ ಸರಿಪಡಿಸಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸುವಂತೆ ದ. ಕ. ಮತ್ತು ಉಡುಪಿ ಬಿಲ್ಲವ ಸಂಘಟನೆಗಳ ವತಿಯಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ರವರಿಗೆ ಬೆಳ್ತಂಗಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಧರ್ಮಸ್ಥಳ ಶ್ರೀ ರಾಮ ಕ್ಷೇತ್ರದಲ್ಲಿ ಮನವಿ ನೀಡಿದರು.

ಬಿಲ್ಲವರು ತುಳುನಾಡಿನ ಮೂಲ ನಿವಾಸಿಗಳಾಗಿದ್ದು ತಮ್ಮದೇ ಪ್ರಾಚೀನ ಸಂಸ್ಕೃತಿ ಆಚರಣೆ ಸಂಪ್ರದಾಯವನ್ನು ಹೊಂದಿರುವ ಇವರು ದೈವಾರಾಧಕರು, ನಾಗಾರಾಧಕರು, ಭೂತಾರಾಧನೆಯ ಮೂಲ ಪುರುಷರು, ಬಿಲ್ಲವರು ದೈವದ ಆರಾಧಕರಾಗಿ ದೀಕ್ಷಾಬದ್ಧರಾಗಿ ಸೇವಾ ಕಾರ್ಯನಿರ್ವಹಿಸಿಕೊಂಡ ಕಾರಣದಿಂದ ಅವರಿಗೆ ಪೂಜಾರಿ ಎಂಬ ಉಪನಾಮ ಬಂದಿದೆ. ದೈವ ದೇವರುಗಳ ನೇಮ ಪರ್ವ ಆಚರಣೆಗಳಲ್ಲಿ ಬಿಲ್ಲವರಿಗೆ ಬಹಳ ಪ್ರಾಚೀನ ಕಾಲದಿಂದಲೂ ಪ್ರಧಾನ ಪಾತ್ರವಿದೆ ಆದುದರಿಂದ ಬಿಲ್ಲವರನ್ನು ಪೂಜಾರಿಗಳೆಂದು ಕೂಡ ಕರೆಯುತ್ತಾರೆ.

ಆದರೆ ಹೆಚ್. ಕಾಂತರಾಜ ಅಧ್ಯಕ್ಷತೆಯ ಆಯೋಗ ನೀಡಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಶಿಫಾರಸು ಮಾಡಿರುವ ಪರಿಸ್ಕ್ರತ ಮೀಸಲಾತಿ ಪಟ್ಟಿಯಲ್ಲಿ ಬಿಲ್ಲವ ಜಾತಿಯ ಉಪನಾಮವಾದ ಪೂಜಾರಿ ಶಬ್ದವನ್ನು ಪ್ರತ್ಯೇಕ ಜಾತಿಯೆಂದು ತಪ್ಪಾಗಿ ಗುರುತಿಸಿ ಪ್ರತ್ಯೇಕ ಪ್ರತ್ಯೇಕವಾಗಿ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಇಲ್ಲಿ ಬಿಲ್ಲವ ಜಾತಿಯನ್ನು 4.85 ಲಕ್ಷ ಮತ್ತು ಬಿಲ್ಲವ ಉಪನಾಮ ವಾದ ಪೂಜಾರಿ ಶಬ್ದದ ಜನಸಂಖ್ಯೆಯನ್ನು 1.15 ಲಕ್ಷ ಎಂದು ತಪ್ಪಾಗಿ ತೋರಿಸಲಾಗಿದೆ. ವರದಿಯ ಪ್ರಕಾರ ಬಿಲ್ಲವ ಮತ್ತು ಪೂಜಾರಿ ಸೇರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುಸಂಖ್ಯಾತ ಸಮುದಾಯವನ್ನು ನಮ್ಮ ಅಂದಾಜು ಜನಸಂಖ್ಯೆ ಗಿಂತ ತುಂಬಾ ಕಡಿಮೆಯಾಗಿ ತೋರಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಲ್ಲವ ಸಂಘಗಳು ನಿಖರವಾಗಿ ಬಿಲ್ಲವ ಸಮುದಾಯದ ಜಾತಿ ಗಣತಿ ಮಾಡುವಾಗ ನಮ್ಮ ಜನಸಂಖ್ಯೆಯನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು. ಯುವ ಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಲಭ್ಯವಾಗುವ ಮೀಸಲಾತಿ ಪ್ರಮಾಣದ ಹೆಚ್ಚಳವನ್ನು ಬಿಲ್ಲವ ಸಂಘಟನೆಗಳು ಸ್ವಾಗತಿಸುತ್ತವೆ ಹಾಗೂ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದು ಅಂಗೀಕಾರವಾಗುವಂತೆ ಮನವಿ ನೀಡಿದ್ದಾರೆ.

ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಅಧ್ಯಕ್ಷ ಸತ್ಯಜೀತ್ ಸುರತ್ಕಲ್, ಗೋಕರ್ಣನಾಥ್ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್ ಹಾಜರಿದ್ದರು.

LEAVE A REPLY

Please enter your comment!
Please enter your name here