

ಉಜಿರೆ: “ದುಶ್ಚಟಗಳಿಂದ ದೂರವಿದ್ದು, ನಮ್ಮ ನಮ್ಮ ಅಸ್ತಿತ್ವ ಕಾಪಾಡಿಕೊಳ್ಳುವುದು ಅವಶ್ಯಕ” ಎಂದು ಅಖಿಲ ಭಾರತ ಜನಜಾಗೃತಿ ವೇದಿಕೆಯ ರಾಜ್ಯ ಸಂಚಾಲಕ ವಿವೇಕ್ ವಿನ್ಸೆಂಟ್ ಪಾಯಸ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಎ.11ರಂದು ನಡೆದ ‘ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ದುಶ್ಚಟಗಳು ಗಂಡುಮಕ್ಕಳ ಮೇಲೆ ಪರಿಣಾಮ ಬೀರಿದರೆ ದುಂದುವೆಚ್ಚ ಹೆಣ್ಣುಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇವೆರಡರಿಂದಲೂ ದೂರವಿದ್ದು, ಉತ್ತಮ ಭವಿಷ್ಯ ಕಟ್ಟಿಕೊಳ್ಳುವುದು ಅತ್ಯಗತ್ಯ ಎಂದು ಅವರು ಕಿವಿಮಾತು ಹೇಳಿದರು.
ಉತ್ತಮ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ದುಶ್ಚಟಗಳಿಂದ ದೂರ ಇರುವಂತೆ ಜಾಗೃತಿ ಮೂಡಿಸುವ ಕೆಲಸದ ಜೊತೆಗೆ ಮಾದಕ ವಸ್ತುಗಳ ಪರಿಣಾಮ, ಅದರ ಆಕರ್ಷಣೆಗೆ ಕಾರಣ, ಕೆಟ್ಟ ವಿಚಾರಗಳ ಕುರಿತ ಆಲೋಚನೆ, ಯೌವನದ ವಿವಿಧ ಸಮಸ್ಯೆ/ಆಕರ್ಷಣೆ ಹಾಗೂ ಅವುಗಳಿಗೆ ಕಾರಣ ಕುರಿತಂತೆ ಜನಜಾಗೃತಿ ಮೂಡಿಸಲಾಗುತ್ತಿದೆ.
ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯಿಂದಾಗಿ ಇಂದು ನಮ್ಮ ಸಮಾಜದ ಎಲ್ಲ ವರ್ಗದ ಜನರ ಕಣ್ಣೀರು ಒರೆಸುವ ಕೆಲಸ ಕೆಲವು ವರ್ಷಗಳಿಂದ ನಡೆದು ಬಂದಿದೆ.
ಧೂಮಪಾನ, ಮದ್ಯಪಾನ ಮತ್ತು ಇತರ ದುಶ್ಚಟಗಳ ಪರಿಣಾಮದ ಕುರಿತು ಅರಿವು ಮೂಡಿಸುವುದರ ಜೊತೆಗೆ ಮದ್ಯಪಾನ ವಿಮುಕ್ತಿ ಕೇಂದ್ರದ ಮೂಲಕ ಅನೇಕ ಜನರ ಜೀವನ ಉತ್ತಮ ರೀತಿಯಲ್ಲಿ ಸಾಗುವಂತೆ ಹೆಗ್ಗಡೆ ಅವರು ನೋಡಿಕೊಳ್ಳುತ್ತಿದ್ದಾರೆ. ವಿವೇಕ್ ವಿನ್ಸೆಂಟ್ ಪಾಯಸ್.
ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐ.ಟಿ.ಐ. ಕಾಲೇಜಿನ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.
ದುಶ್ಚಟಗಳಿಂದ ದೂರವಿರುವುದಾಗಿ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡುವ ಕುರಿತು ಪ್ರಮಾಣ ವಚನ ಸ್ವೀಕರಿಸಲಾಯಿತು. ಅಫೀಜಾ ಕಾರ್ಯಕ್ರಮ ನಿರೂಪಿಸಿದರು.