ಕೊಕ್ಕಡ: ಮಕ್ಕಳಿಗೆ ಎಳವೆಯಲ್ಲಿಯೇ ಸಂಸ್ಕಾರಯುತ ಶಿಕ್ಷಣ ದೊರೆತರೆ ಭವಿಷ್ಯದಲ್ಲಿ ದೇಶ ಸುಭದ್ರಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಸಂಸ್ಕಾರಯುತ ಮಗೂ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪಗೊಳ್ಳಬಹುದು. ಹಾಗಾಗಿ ಶಿಕ್ಷಣದೊಂದಿಗೆ ಸಂಸ್ಕಾರವು ಬಹು ಮುಖ್ಯ ಅಂಗ. ಶಿಬಿರಗಳ ಮೂಲಕ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಸುಂದರವಾದ ಅವಕಾಶವಿದ್ದು, ಎಲ್ಲಾ ಮಕ್ಕಳು ರಜೆಯಲ್ಲಿ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಜಿರೆಯ ಗಣೇಶ್ ಪ್ರಸಾದ್ ಮೋಟರ್ ಡ್ರೈವಿಂಗ್ ಸ್ಕೂಲ್ ನ ಮಾಲಕ ರಾಮದಾಸ್ ಭಂಡಾರ್ಕರ್ ನುಡಿದರು.

ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಇವರ ಸಹಯೋಗದಲ್ಲಿ ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ ಎ.10ರಂದು ಆರಂಭಗೊಂಡ 5ನೇ ತರಗತಿಯಿಂದ 9ನೇ ತರಗತಿವರೆಗಿನ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಶಿಕ್ಷಕಿ ಮನೋರಮರವರು ಮಹಾವೀರ ತೀರ್ಥಂಕರರ ಬಗ್ಗೆ ಸವಿವರವಾಗಿ ತಿಳಿಸಿದರು. ಅಲ್ಲದೆ ಮೊಬೈಲ್ ಪಿಡುಗಿನಿಂದ ದೂರವಾಗಲು ಈ ಬೇಸಿಗೆ ಶಿಬಿರ ಉತ್ತಮವಾಗಿದೆ. ಮಕ್ಕಳು ಇದರಲ್ಲಿ ಪಾಲ್ಗೊಂಡಾಗ ಅವರು ಉತ್ತಮ ಸಂಸ್ಕಾರಯುತ ಮೌಲ್ಯಗಳನ್ನು ತಿಳಿದುಕೊಳ್ಳಲು ಸಹಾಯಕವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ವಹಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಇದರ ಅಧ್ಯಕ್ಷ ಬಾಲಕೃಷ್ಣ ನೈಮಿಷ, ಶ್ರೀರಾಮ ಸೇವಾ ಟ್ರಸ್ಟ್ ನ ಕೋಶಾಧಿಕಾರಿ ಫಣಿರಾಜ್ ಜೈನ್ ಉಪಸ್ಥಿತರಿದ್ದರು.

ಮೊದಲ ದಿನ 57 ಹುಡುಗರು ಹಾಗೂ 45 ಹುಡುಗಿಯರು ಸೇರಿದಂತೆ 102 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದು ಏಳು ತಂಡಗಳಾಗಿ ವಿದ್ಯಾರ್ಥಿಗಳನ್ನು ವಿಭಾಗ ಮಾಡಲಾಯಿತು. ಪ್ರತಿಯೊಂದು ತಂಡಕ್ಕೂ ಸಾಧಕ ಹೆಸರನ್ನಿತ್ತು ಶಿಬಿರದ ಜವಾಬ್ದಾರಿಗಳನ್ನು ಹಂಚಲಾಯಿತು. ಚಂದ್ರಶೇಖರ ಪುತ್ತೂರು ರವರು ಪ್ರಾಚೀನ ಹಾಗೂ ಸಾಂಸ್ಕೃತಿಯ ಭಾರತ ಭೂಪಟ ಪರಿಚಯ, ರೇಣುಕಾ ಸುಧೀರ್ ರವರು ಕಥಾ ಅವಧಿ, ಪ್ರೊ. ಮಧೂರು ಮೋಹನ ಕಲ್ಲೂರಾಯರು ಗಮಕ ಪರಿಚಯ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭವ್ಯ ಪಿ. ಡಿ. ಸ್ವಾಗತಿಸಿದರು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು. ಶಿಬಿರವು ಏ. 14ರವರೆಗೆ ನಡೆಯಲಿದೆ. ವಿಂದ್ಯಾ ಪಿ.ಎಸ್ ವಂದಿಸಿದರು.