

ಧರ್ಮಸ್ಥಳ: ಏ. 3ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟುವಿನಲ್ಲಿ 2024-25 ನೇ ಸಾಲಿನ ಬೇಸಿಗೆ ಶಿಬಿರದ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದ ಖರ್ಚು ಉಗ್ರಾಣದ ಪ್ರಬಂಧಕ ಪುಷ್ಪರಾಜ ಶೆಟ್ಟಿ, ಬಾವಂತಬೆಟ್ಟು ಆಗಮಿಸಿ ಇವರು ಮಾತನಾಡಿ ಬೇಸಿಗೆ ಶಿಬಿರದಲ್ಲಿ ಮೂರು ದಿನಗಳ ಕಾಲ ನಡೆದ ಎಲ್ಲಾ ತರಬೇತಿಗಳ ಉತ್ತಮ ಅಂಶಗಳನ್ನು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಸತ್ಪ್ರಜೆಗಳಾಗಿ ಬೆಳೆಯಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮೂರನೇ ದಿನದ ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿ ಕೂಸಪ್ಪ ಗೌಡ, ಸಹಶಿಕ್ಷಕ ಶ್ರೀ ಧ. ಮಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಉಜಿರೆ ಇವರು ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗಿ ತಮ್ಮ ಬಾಲ್ಯವನ್ನು ವ್ಯರ್ಥ ಮಾಡದೆ ಗ್ರಾಮೀಣ ಆಟಗಳನ್ನು ಆಡುವುದು, ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಂತಾದವುಗಳ ಮೂಲಕ ತಮ್ಮ ಬಾಲ್ಯವನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ಇವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಮೂರು ದಿನದ ಬೇಸಿಗೆ ಶಿಬಿರದ ಚಟುವಟಿಕೆಗಳನ್ನು ನೆನಪಿಸಿ ಎಲ್ಲಾ ಚಟುವಟಿಕೆಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಶಿಬಿರವನ್ನು ಅರ್ಥಪೂರ್ಣವಾಗಿಸಬೇಕು ಎಂಬ ಕಿವಿ ಮಾತನ್ನು ಹೇಳಿದರು.
ಪವನ್ ಕುಮಾರ್ ಇವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಶೀಲಾ ಎನ್. ಧನ್ಯವಾದ ಸಮರ್ಪಿಸಿದರು. ಜಿತೀಕ್ಷ ಕಾರ್ಯಕ್ರಮ ನಿರೂಪಿಸಿದರು. ಮೂರು ದಿನಗಳ ಕಾಲ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಗೀತೆ, ಗೀಗಿ ಪದಗಳು, ಜಾನಪದ ನೃತ್ಯ, ತೆಂಗಿನ ಗರಿಗಳಿಂದ ವಿವಿಧ ಕಲಾ ಕೃತಿಗಳ ರಚನೆ, ಡ್ರಾಯಿಂಗ್ ಶೀಟ್ ಮತ್ತು ಪೇಪರ್ ನಿಂದ ವಿವಿಧ ರೀತಿಯ ಮಾದರಿಗಳ ರಚನೆ ಮುಂತಾದ ತರಬೇತಿಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ನೀಡಿದರು. ಎಲ್ಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.