ಬೆಳ್ತಂಗಡಿ: ಕಲೆ, ಸಾಂಸ್ಕೃತಿಕ ಅಭಿರುಚಿಯನ್ನು ರೂಢಿಸಿಕೊಳ್ಳುವುದರಿಂದ ಜನ ಮನ್ನಣೆಯನ್ನು ಪಡೆಯುವುದರೊಂದಿಗೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ಮಂಗಳೂರು ಹೇಳಿದರು. ಅವರು ವಾಣಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಾಗ ಸೃಜನಶೀಲರಾಗಲು ಸಾಧ್ಯವಾಗುವುದು. ಹಾಗಾಗಿ ಒಂದಲ್ಲ ಒಂದು ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ವಾಣಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಗೋಪಾಲಕೃಷ್ಣ ಗುಲ್ಲೋಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ನಾಕ್ಸ್ ಟ್ರೀಟ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಜೀವನಕ್ಕೆ ಉತ್ತಮವಾದ ಮಾರ್ಗವನ್ನು ಕಂಡುಕೊಳ್ಳುವಲ್ಲಿ ಸಫಲರಾಗಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ವಿಶ್ವ ಪ್ರಕಾಶ್ ಎಂ ಅಧ್ಯಕ್ಷತೆ ವಹಿಸಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ಆಡಳಿತಾಧಿಕಾರಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಮೀನಾಕ್ಷಿ ಸ್ವಾಗತಿಸಿದರು. ನಮಿತಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಹೇಮಲತಾ ಧನ್ಯವಾದವಿತ್ತರು.