

ಬೆಳ್ತಂಗಡಿ: ಕಲ್ಲೇರಿಯಲ್ಲಿ ಖಾಸಗಿ ಕಂಪೆನಿಯ ಎಟಿಎಂ ಕೇಂದ್ರವೊಂದಕ್ಕೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಸೊತ್ತುಗಳನ್ನು ಹಾನಿಗೊಳಿಸಿದ ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಕಲ್ಲೇರಿಯಲ್ಲಿನ ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಇಂಡಿಯಾ ವನ್ ಎಂಬ ಹೆಸರಿನ ಖಾಸಗಿ ಸಂಸ್ಥೆಯ ಎ.ಟಿ.ಎಂ ಕೇಂದ್ರವಿದ್ದು, ಇಲ್ಲಿಗೆ ನುಗ್ಗಿದ ಕಳ್ಳರು ಅಲ್ಲಿನ ಸಿಸಿ ಕೆಮರಾವನ್ನು ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ. ಎ.ಟಿ.ಎಂ ಮೆಷಿನ್ ಅನ್ನು ತೆರೆಯಲು ಯತ್ನಿಸಿದ್ದಾರೆ.
ಈ ಬಗ್ಗೆ ಇಂಡಿಯಾ ವನ್ ಕಾಲ್ ಸೆಂಟರ್‌ನಿಂದ ಕಲ್ಲೇರಿಯ ಎ.ಟಿ.ಎಂ ಕೇಂದ್ರದಲ್ಲಿ ಯಾವುದೋ ಅನುಚಿತ ಕೃತ್ಯ ನಡೆಯುತ್ತಿದೆ ಎಂಬ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಳವು ಯತ್ನ ಪ್ರಕರಣ ನಡೆದಿರುವುದು ಕಂಡುಬಂದಿತ್ತು. ಈ ಬಗ್ಗೆ ಪ್ರಶಾಂತ್ ಡಿ’ಕೋಸ್ಟಾ ಅವರು/ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ವಣವನ್ನು ದಾಖಲಿಸಿ ತನಿಖೆ ಪ್ರಕರಣವನ್ನು ನಡೆಸುತ್ತಿದ್ದಾರೆ.
ಪದೇಪದೆ ಕಳವು ಯತ್ನ: ಖಾಸಗಿ ಎ.ಟಿ.ಎಂ ಕೇಂದ್ರವು ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಪ್ರತೀ ಕೇಂದ್ರದ ಚಲನವಲನಗಳ ಬಗ್ಗೆ ನಿಗಾ ಇರಿಸುವ ವ್ಯವಸ್ಥೆಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಎ.ಟಿ.ಎಂ ಕೇಂದ್ರದ ಒಳ ಹೊಕ್ಕು ಮೆಷಿನ್ ತೆರೆಯಲು ಯತ್ನಿಸಿದರೂ, ಹಣ ತುಂಬಿದ ವಿಭಾಗದ ಬಾಗಿಲು ತೆರೆಯಬೇಕಾದರೆ ಒಟಿಪಿ ಆಧಾರಿತ ವ್ಯವಸ್ಥೆ ಅಳವಡಿಸಿದ್ದ ಪರಿಣಾಮ ಕಳ್ಳರಿಗೆ ಹಣ ಕದಿಯಲು ಆಗಿಲ್ಲ. ಕೆಲ ಸಮಯದ ಹಿಂದೆ ತೆಕ್ಕಾರಿನಲ್ಲಿ ಇದೇ ರೀತಿ ಎ.ಟಿ.ಎಂ ಕೇಂದ್ರದಲ್ಲಿ ಕಳವು ಯತ್ನ ನಡೆದಿದ್ದು ಇದೀಗ ಕಲ್ಲೇರಿಯಲ್ಲಿ ಮತ್ತೆ ಅದೇ ತೆರನಾದ ಕಳವು ಯತ್ನ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.