

ಉಜಿರೆ: ದೊಂಪದಪಲ್ಕೆ ಸ. ಪ್ರಾ. ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಸುರೇಶ್ ಆಚಾರ್ ಮತ್ತು ಶಿಕ್ಷಕಿಯಾಗಿ ಇದೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರ ಪತ್ನಿ ನಿರ್ಮಲ ಮಾ. 31ರಂದು ಸೇವಾ ನಿವೃತ್ತಿ ಹೊಂದಿದರು.
ಸುರೇಶ್ ಆಚಾರ್ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ವೆಂಕಟರಮಣಚಾರ್ಯ ಮತ್ತು ತಾಯಿ ವಾರಿಜ ದಂಪತಿಯ ಪುತ್ರ ಇವರು ಪ್ರಾಥಮಿಕ ಶಿಕ್ಷಣವನ್ನು ಪಡುಬಿದ್ರೆಯ ಶ್ರೀ ಬ್ರಹ್ಮವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಪಡುಬಿದ್ರೆ ಶ್ರೀ ಗಣಪತಿ ಹೈಸ್ಕೂಲ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಪೂರೈಸಿ ಟಿ.ಸಿ.ಹೆಚ್ ಶಿಕ್ಷಣವನ್ನು 1985-86ರಲ್ಲಿ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಮಂಗಳೂರು ಇಲ್ಲಿ ಪೂರೈಸಿರುತ್ತಾರೆ.
1989ರಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೊಡ್ಲಿಪೇಟೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ಬಳಿಕ 1992ರಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕುಶಾಲನಗರ ಇಲ್ಲಿಗೆ ವರ್ಗಾವಣೆ ಹೊಂದಿ ಅಲ್ಲಿ 15 ವರ್ಷ ಕರ್ತವ್ಯ ಪೂರೈಸಿ 22-5-2006ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಂಪದಪಲ್ಕೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ, ಒಟ್ಟು 35 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಮಾ. 31ರಂದು ನಿವೃತ್ತರಾಗಿರುತ್ತಾರೆ.
ಇವರ ನಾಯಕತ್ವದಲ್ಲಿ ಕುಶಾಲನಗರ ಶಾಲೆಯಲ್ಲಿ ಒಂದು ರಂಗಮಂದಿರ ನಿರ್ಮಿಸಿ ಕೊಟ್ಟಿರುತ್ತಾರೆ. ಹಾಗೂ ದೊಂಪದಪಲ್ಕೆ ಶಾಲೆಯಲ್ಲಿಯೂ ದಾನಿಗಳ ಸಹಾಯದಿಂದ ರಂಗಮಂದಿರ ನಿರ್ಮಿಸಿರುತ್ತಾರೆ. ಕರಾಯ, ಕುಪೆಟ್ಟಿ, ಮುಂಡಾಜೆ ಕೇಂದ್ರಗಳ ಕ್ಲಸ್ಟರ್ಗಳಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಿಗೆ ತರಬೇತಿ ನೀಡಿರುತ್ತಾರೆ.
ಇವರ ಪತ್ನಿ ನಿರ್ಮಲ ಇದೆ ಶಾಲೆಯಲ್ಲಿ 19 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಮಾ. 31ರಂದು ರಂದು ನಿವೃತ್ತಿ ಪಡೆದಿರುತ್ತಾರೆ. ಪತಿ-ಪತ್ನಿಯರಿಬ್ಬರೂ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ಒಟ್ಟಿಗೆ ನಿವೃತ್ತಿಯಾಗಿರುತ್ತಾರೆ. ಮಕ್ಕಳಾದ ಸ್ನೇಹ ಎಸ್. ಆಚಾರ್ ಎಂ.ಕಾಂ. ಪದವೀಧರೆಯಾಗಿದ್ದು ಮಗ ಡಾಕ್ಟರ್ ಸಂದೀಪ್ ಎಸ್. ಆಚಾರ್ ಇವರು ಆಯುರ್ವೇದದಲ್ಲಿ ಎಂ.ಡಿ. ಪದವಿ ಪಡೆದಿರುತ್ತಾರೆ.