

ಬೆದ್ರಬೆಟ್ಟು: ಒಂದು ತಿಂಗಳ ಉಪವಾಸ ವ್ರತಾಚರಣೆ ಪೂರೈಸಿದ ಮುಸ್ಲಿಂ ಸಮುದಾಯದವರು ಶ್ರದ್ಧಾ-ಭಕ್ತಿ, ದಾನ-ಧರ್ಮದ ಸಂಕೇತವಾದ ಪವಿತ್ರ ರಂಜಾನ್ ಹಬ್ಬವನ್ನು ಮಾ.31ರಂದು ಅತ್ಯಂತ ಸಂಭ್ರಮದಿಂದ ರಿಫಾಯ್ಯಾ ಜುಮಾ ಮಸೀದಿ ಬೆದ್ರಬೆಟ್ಟುವಿನಲ್ಲಿ ಆಚರಿಸಿದರು.
ದೇವನ ಉಡುಗೊರೆಯ ಈದುಲ್ ಫಿತ್ ಎಂದೇ ಕರೆಸಿಕೊಳ್ಳುವ ಈ ಹಬ್ಬದ ಅಂಗವಾಗಿ ಸಮುದಾಯದವರು ಶ್ವೇತ ವಸ್ತ್ರಧಾರಿಗಳಾಗಿ ಸ್ಥಳೀಯ ಮಸೀದಿಗೆ ತೆರಳಿ ಕೆಲವೇ ನಿಮಿಷಗಳಲ್ಲಿ ಇಡೀ ಆವರಣ ಭರ್ತಿಯಾಯಿತು. ಬಳಿಕ ಧರ್ಮ ಗುರುಗಳಾದ ಖತೀಬ್ ನೌಷಾದ್ ಸಖಾಫಿ ಈದ್ ಸಂದೇಶ ಪ್ರವಚನ ನೀಡಿದರು. ನಂತರ ಸಾಮೂಹಿಕ ಈದ್ ನಮಾಝ್ ಮಾಡಿ. ಅಲ್ಲಾಹನ ಸ್ಮರಣೆಯೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಪರಸ್ಪರ ಆಲಿಂಗನ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಈದ್ ಎಂದರೆ ಹಬ್ಬ, ಫಿತರ್ ಎಂಬುದು ದಾನದ ಸಂಕೇತವಾಗಿದೆ. ಹೀಗಾಗಿ ರಂಜಾನ್ ದಾನ-ಧರ್ಮಗಳ ಹಬ್ಬ. ವರ್ಷದೊಳಗೆ ದುಡಿದ ಹಣದಲ್ಲಿ ಒಂದಿಷ್ಟನ್ನು ಸಮುದಾಯದ ಉಳ್ಳವರು ಬಡವರಿಗೆ ದಾನ ಮಾಡಿದರು. ಕಳೆದ ಒಂದು ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸಿದ ನೌಷಾದ್ ಸಖಾಫಿಯರವರನ್ನು ಬೀಳ್ಕೊಡಲಾಯಿತು.
ರಿಫಾಯ್ಯಾ ಜುಮಾ ಮಸೀದಿ ಅಧ್ಯಕ್ಷ ಸಲೀಂ ಬೆದ್ರಬೆಟ್ಟು, ಎಸ್.ಎಸ್.ಎಫ್ ಬೆದ್ರಬೆಟ್ಟು ಯೂನಿಟ್ ಪದಾಧಿಕಾರಿಗಳು, ಎಸ್.ವೈ.ಎಸ್ ಪದಾಧಿಕಾರಿಗಳು, ಆಡಳಿತ ಸಮಿತಿ ಪದಾಧಿಕಾರಿಗಳು, ಯುನೈಟೆಡ್ ಅಸೋಸಿಯೇಶನ್ ಪದಾಧಿಕಾರಿಗಳು ಮತ್ತು ಜಮಾತ್ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಆಡಳಿತ ಸಮಿತಿ ಕಾರ್ಯದರ್ಶಿ ಮುಸ್ತಫಾ ಧನ್ಯವಾದ ನೆರವೇರಿಸಿದರು.