ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಹೆಸರು ಅಂತಿಮ – ಮಾಜಿ ಶಾಸಕ ವಸಂತ ಬಂಗೇರರ ಪತ್ನಿ ಸುಜಿತಾ ವಿ. ಬಂಗೇರರಿಗೆ ಅವಕಾಶ ಇಲ್ಲ?

0

ಬೆಳ್ತಂಗಡಿ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಡಬ ತಾಲೂಕಿನಲ್ಲಿರುವ ಕರ್ನಾಟಕದ ನಂಬರ್ ಒನ್ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅರ್ಚಕರು ಸಹಿತ ಒಂಬತ್ತು ಸದಸ್ಯರನ್ನು ಆಯ್ಕೆ ಮಾಡಲು ಭಾರೀ ಕಸರತ್ತು ನಡೆಸಿದ ನಂತರ ಇದೀಗ ಅಂತಿಮ ಪಟ್ಟಿ ಸಿದ್ಧವಾಗಿದೆ. ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ಪೈಕಿ ಒಂಬತ್ತು ಸದಸ್ಯರನ್ನು ಧಾರ್ಮಿಕ ದತ್ತಿ ಇಲಾಖೆ ಅಂತಿಮಗೊಳಿಸಿದೆ. ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳ್ತಂಗಡಿ ಮತ್ತು ಸುಳ್ಯದ ಕಾಂಗ್ರೆಸ್ ನಾಯಕರು ಶಿಫಾರಸ್ಸು ಮಾಡಿರುವ ಹೆಸರುಗಳನ್ನು ಅಳೆದು ತೂಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾಮ್ ಅಂತಿಮಗೊಳಿಸಿ ಮುಜರಾಯಿ ಖಾತೆಯ ಸಚಿವ ರಾಮಲಿಂಗ ರೆಡ್ಡಿಯವರಿಗೆ ಕಳುಹಿಸಿದ್ದಾರೆ.

ಸುದ್ದಿ ಬಿಡುಗಡೆಗೆ ಲಭ್ಯವಾದ ಮಾಹಿತಿಯ ಪ್ರಕಾರ ಒಕ್ಕಲಿಗ ಗೌಡ ಸಮುದಾಯದ ಅಶೋಕ್ ನೆಕ್ರಾಜೆ ಯೇನೇಕಲ್ಲು ಸುಬ್ರಹ್ಮಣ್ಯ ಕಡಬ ತಾಲೂಕು, ಒಕ್ಕಲಿಗ ಗೌಡ ಸ್ಥಳೀಯ ಪ್ರತಿನಿಧಿಯಾಗಿ ಹರೀಶ್ ಇಂಜಾಡಿ ಸುಬ್ರಹ್ಮಣ್ಯ ಕಡಬ ತಾಲೂಕು, ಬಂಟ ಸಮುದಾಯದ ಜಯಪ್ರಕಾಶ್ ರೈ ಚೊಕ್ಕಾಡಿ ಸುಳ್ಯ, ಮಹಿಳಾ ಸ್ಥಾನದಿಂದ ಲೀಲಾ ಮನಮೋಹನ್ ಅಜ್ಜಾವರ ಸುಳ್ಯ ತಾಲೂಕು, ಪ್ರವೀಣ ಪ್ರಶಾಂತ್ ರೈ ಮರುವಂಜ ಮುಪ್ಪೇರಿಯ ಸುಳ್ಯ ತಾಲೂಕು, ಪರಿಶಿಷ್ಟ ಜಾತಿ ಸಮುದಾಯದ ಡಾ. ಬಿ. ರಘು ಶಾಂತಿನಗರ ೩೪ನೇ ನೆಕ್ಕಿಲಾಡಿ ಪುತ್ತೂರು ತಾಲೂಕು, ಬಿಲ್ಲವ ಸಮುದಾಯದ ಅಜಿತ್ ಕುಮಾರ್ ಪಾಲೇರಿ ಗೋಳಿತ್ತೊಟ್ಟು ಕಡಬ ತಾಲೂಕು ಮತ್ತು ಬ್ರಾಹ್ಮಣ ಸಮುದಾಯದ ಮಹೇಶ್ ಕುಮಾರ್ ಕರಿಕ್ಕಳ ಸುಳ್ಯ ತಾಲೂಕು ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಪೈಕಿ ಜಯಪ್ರಕಾಶ್ ರೈ ಚೊಕ್ಕಾಡಿ, ಡಾ.ರಘು ಬಿ. ಶಾಂತಿನಗರ ಮತ್ತು ಮಹೇಶ್ ಕುಮಾರ್ ಕರಿಕ್ಕಳ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಬಲವಾಗಿ ಕೇಳಿ ಬರುತ್ತಿದೆ. ರಮಾನಾಥ ರೈ ಅವರು ಡಾ. ರಘು ಅವರನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಪರಿಶಿಷ್ಟ ಜಾತಿಯವರಾಗಿರುವ ಡಾ. ರಘು ಅವರನ್ನು ಅಧ್ಯಕ್ಷರನ್ನಾಗಿಸಿದರೆ ಹಿಂದುಳಿದ ಸಮುದಾಯದವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ ಎಂದು ಹೆಸರು ಪಡೆದುಕೊಳ್ಳಬಹುದು ಎಂಬುದು ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ.

ಖ್ಯಾತ ಕ್ಯಾನ್ಸರ್ ತಜ್ಞರೂ, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ನಾಲ್ಕು ಸಲ ಸ್ಪರ್ಧಿಸಿ ರಾಜಕೀಯವಾಗಿ ಅನುಭವಿಯೂ ಮತ್ತು ಇತರ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರೂ ಆಗಿರುವ ಡಾ. ರಘು ಅವರಿಗೆ ಅವಕಾಶ ನೀಡಬೇಕು ಎಂದು ಅವರ ಅಭಿಮಾನಿಗಳು ಹಲವು ಬಾರಿ ರಮಾನಾಥ ರೈ, ಅಶೋಕ್ ರೈ ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜಯಪ್ರಕಾಶ್ ರೈ ಮತ್ತು ಮಹೇಶ್ ಕರಿಕ್ಕಳ ಅವರ ಪರವಾಗಿಯೂ ಹಲವರು ಮುಖ್ಯಮಂತ್ರಿಯವರ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಬೆಳ್ತಂಗಡಿಯ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಪತ್ನಿ ಸುಜಿತಾ ವಿ. ಬಂಗೇರ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರೂ ಅವರ ಹೆಸರನ್ನು ಪರಿಗಣಿಸಲಾಗಿಲ್ಲ. ಸುಜಿತಾ ಬಂಗೇರ ಅವರು ರಾಜಕೀಯ ನಾಯಕರ ಸಲಹೆ ಮೇರೆಗೆ ಅರ್ಜಿ ಸಲ್ಲಿಸಿದ್ದರು. ಅವರ ಪೊಲೀಸ್ ವೆರಿಫಿಕೇಶನ್ ಕೂಡ ನಡೆದಿತ್ತು. ಕೊನೆಯ ಕ್ಷಣದವದರೆಗೂ ಸುಜಿತಾ ಬಂಗೇರ ಅವರು ಸಮಿತಿ ಸದಸ್ಯರಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಗೆ ಕಳುಹಿಸಿ ಕೊಡಲಾಗಿರುವ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿಲ್ಲ. ಇದು ಚರ್ಚೆಗೆ ಗ್ರಾಸ ಒದಗಿಸಿದೆ.

ರಕ್ಷಿತ್ ಶಿವರಾಂಗೆ ಕೌಂಟರ್ ಕೊಟ್ರಾ ರಮಾನಾಥ ರೈ?
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರ ಪತ್ನಿ ಸುಜಿತಾ ವಿ. ಬಂಗೇರ ಅವರನ್ನು ಹೊರಗಿಡುವ ಮೂಲಕ ಮಾಜಿ ಸಚಿವ ಬಿ. ರಮಾನಾಥ ರೈಯವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಕೌಂಟರ್ ಕೊಟ್ಟರಾ ಎಂದು ರಾಜಕೀಯವಾಗಿ ಚರ್ಚೆ ನಡೆಯುತ್ತಿದೆ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಮಾನಾಥ ರೈ ಅವರ ಆಪ್ತ ಪ್ರಶಾಂತ್ ರೈ ಗೋಳಿತ್ತೊಟ್ಟು ಅವರನ್ನು ಆಯ್ಕೆ ಮಾಡಲಾಗಿತ್ತು. ಅದೇ ರೀತಿ ಪುತ್ತೂರಿನ ಹಿರಿಯ ವಕೀಲ ಉದಯಶಂಕರ ಶೆಟ್ಟಿ ಅರಿಯಡ್ಕ ಅವರನ್ನೂ ಆಯ್ಕೆ ಮಾಡಲಾಗಿತ್ತು. ಆದರೆ ಇವರು ತಾಲೂಕಿನವರಲ್ಲ. ಹೊರಗಿನವರು ಎಂದು ರಕ್ಷಿತ್ ಶಿವರಾಂ ಆಕ್ಷೇಪಿಸಿದ್ದರು. ಅದೇ ಹಿನ್ನೆಲೆಯಲ್ಲಿ ಅರಿಯಡ್ಕ ಉದಯ ಶಂಕರ್ ಶೆಟ್ಟಿ ಅವರನ್ನು ಸಮಿತಿಯಿಂದ ತೆಗೆಯಲಾಗಿತ್ತು. ದೇಗುಲದ ಹಣ ದುರುಪಯೋಗ ಮಾಡಿದ ಆರೋಪದಲ್ಲಿ ಪ್ರಶಾಂತ್ ರೈ ಅವರನ್ನು ಸಮಿತಿಯಿಂದ ಹೊರಗಿಡಲಾಗಿತ್ತು. ಈ ವಿಚಾರ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಹಾಗಾಗಿ ರಕ್ಷಿತ್ ಶಿವರಾಂ ಶಿಫಾರಸ್ಸು ಮಾಡಿರುವ ಸುಜಿತಾ ಬಂಗೇರ ಅವರ ಹೆಸರನ್ನು ಹೊರಗಿಡಲು ರಮಾನಾಥ ರೈ ಪಣ ತೊಟ್ಟಿದ್ದರು. ಅದರಲ್ಲಿ ಯಶಸ್ವಿಯಾದರು ಎಂದು ಚರ್ಚೆಯಾಗುತ್ತಿದೆ. ಆದರೆ ಇನ್ನೂ ಅಧಿಕೃತ ಪಟ್ಟಿ ಹೊರ ಬೀಳದೇ ಇರುವುದರಿಂದ ಯಾರು ಅಂತಿಮವಾಗಿ ಸದಸ್ಯ ಸ್ಥಾನ ಪಡೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here