

ಬೆಳ್ತಂಗಡಿ: ಸಿಎಂ ಸಿದ್ದರಾಮಯ್ಯರವರ ಬಜೆಟ್ ಪುಸ್ತಕದ ವಾಕ್ಯಕ್ಕೆ ಸಿಮೀತವಾಗಿದೆ. ಬಜೆಟ್ ಅಂಕಿ-ಸಂಖ್ಯೆಗಳ ಆಟವಾಗಿದೆ. ಕಳೆದ ಬಜೆಟ್‌ಗೆ ಹೋಲಿಸಿದರೆ ಗಾತ್ರ ದೃಷ್ಟಿಯಿಂದ ದೊಡ್ಡದಾಗಿದೆಯೇ ಹೊರತು, ಕಳೆದ ವಷದ ಅನುಷ್ಠಾನವೇ ಶೇ.60 ದಾಟಿಲ್ಲ. ಈ ಬಾರಿಯ ಅಧಿವೇಶನದಲ್ಲಿ ಬಜೆಟ್ ಬಗ್ಗೆ ಚರ್ಚೆಯಾಗಿಲ್ಲ. ಕೊನೆಯ ಒಂದು ದಿನ ಬಜೆಟ್ ಬಗ್ಗೆ ಚರ್ಚೆಯಾಯಿತು. ಈ ಬಗ್ಗೆ ಚರ್ಚೆಯಾಗಬಾರದು ಎಂದೇ ಬೇರೆ ಬೇರೆ ವಿಷಯಗಳನ್ನು ಮುಂದೆ ತಂದರು ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಆಕ್ರೋಶ ಹೊರಹಾಕಿದ್ದಾರೆ.
ಅವರು ಮಾ.25ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಕಳೆದ ಮತ್ತು ಈ ಸಲದ ಬಜೆಟ್ ಹೋಲಿಸಿದರೆ ಸಮರ್ಥಿಸಿಕೊಳ್ಳುವ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಸಾಲ ಹೆಚ್ಚಾಗಿದೆ. ಘೋಷಣೆ ಮಾಡಿದ ಸಂಗತಿಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಾರಿ ಸರ್ಕಾರ 1,06,000 ಕೋಟಿ ರೂ ಸಾಲ ತೆಗೆದುಕೊಳ್ಳುವ ಅನಿವಾರ್ಯತೆಗೆ ಬಂದಿದೆ. ಬಿಜೆಪಿ ಸರ್ಕಾರ ಬಿಟ್ಟು ಹೋಗುವಾಗ ಮಿಗತೆ ಬಜೆಟ್ ಕೊಟ್ಟಿದ್ದರು. ಸಿದ್ದರಾಮಯ್ಯ ಮೂರು ಕೊರತೆ ಬಜೆಟ್‌ಗಳನ್ನು ಮಂಡಿಸಿದ್ದಾರೆ. ಈ ಬಾರಿ ಸಾಲದ ಪ್ರಮಾಣ ರೂ. 1,16,000ಗೆ ಏರಿದೆ. ಇದೇ ರೀತಿ ಸಾಗಿದರೆ ಕರ್ನಾಟಕದ ಸಾಲ ರೂ. 10 ಲಕ್ಷ ಕೋಟಿ ದಾಟುತ್ತದೆ. ಸಿದ್ದರಾಮಯ್ಯ ಸರ್ಕಾರದ ಒಬ್ಬ ವ್ಯಕ್ತಿಯ ಮೇಲೆ ಒಂದು ಲಕ್ಷ ಸಾಲದ ಹೊರೆ ಮಾಡುತ್ತಿದೆ. ಒಂದು ಕಡೆಯಲ್ಲಿ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದರೆ ಇನ್ನೊಂದು ಕಡೆ ಸಾಲದ ಸುಳಿಯಲ್ಲಿ ರಾಜ್ಯ ಸಿಲುಕಿಕೊಳ್ಳುತ್ತಿದೆ. ಸರ್ಕಾರ ದಿವಾಳಿ ಅಂಚಿಗೆ ತಲುಪಿದೆ. ಗ್ಯಾರಂಟಿ ಯೋಜನೆಗೆ ಹಣ ಸಂಗ್ರಹಿಸುವುದರಿಂದ ಎಲ್ಲಾ ಇಲಾಖೆಗಳು ಸೊರಗಿ ಹೋಗುತ್ತಿವೆ ಈ ಬಾರಿಯ ಬಜೆಟ್‌ನಲ್ಲಿ ಗುರುನಾರಾಯಣ ನಿಗಮಕ್ಕೆ ಕೇವಲ ರೂ. 1 ಲಕ್ಷ ಹಣ ಮಾತ್ರ ಇಟ್ಟಿದ್ದಾರೆ. ನಿಗಮಕ್ಕೆ ದುಡ್ಡು ಇಡಲು ಸರ್ಕಾರದಲ್ಲಿ ಹಣವಿಲ್ಲ. ಪರಿಶಿಷ ಜಾತಿ ಮತ್ತು ಪಂಗಡಕ್ಕೆ ಇಟ್ಟ ಹಣವನ್ನು ಕೂಡ ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗೆ ಹಣ ಇಲ್ಲ ಎಂದು ತೆಲಾಂಗಣ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಗ್ಯಾರಂಟಿ ಯೋಜನೆಯ ಬಗ್ಗೆ ಚರ್ಚೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳುತ್ತಾರೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಯಾಗುತ್ತಿಲ್ಲ. ರೈತರಿಗೆ ಸಾಲವನ್ನು ಏರಿಕೆ ಮಾಡುತ್ತೇವೆ ಎಂದು ಹೇಳಿದರೂ ಮಾಡಿಲ್ಲ ಎಂದು ಕಿಡಿಕಾರಿದರು.
ಸಂವಿಧಾನ ವಿರೋಧವಾಗಿ ಧರ್ಮದ ಆಧಾರದ ಮೇಲೆ ಮೀಸಲಾತಿ ಮಾಡಬಾರದು ಎಂದು ಡಾ. ಬಿ.ಆರ್ ಅಂಬೇಡ್ಕರ್ ಹೇಳಿದರು. ಆದರೆ ಸರ್ಕಾರಿ ಕಾಮಗಾರಿಗಳಲ್ಲಿ ೪ ಶೇಕಡಾ ಮೀಸಲಾತಿಯನ್ನು ಅಲ್ಪಸಂಖ್ಯಾತರ ಎಂಬ ಶಬ್ಧ ಉಪಯೋಗ ಮಾಡಿ ಕೇವಲ ಮುಸ್ಲಿಂಮರಿಗಾಗಿ ಮೀಸಲಾತಿ ಕಾನೂನನ್ನು ಮಾಡಲಾಗಿದೆ. ಒಂದು ಸಮುದಾಯಕ್ಕೆ ರೂ ೪೦೦೦ ಕೋಟಿ ಇಟ್ಟಿದ್ದಾರೆ. ಇದರಲ್ಲಿ ಶಾದಿಭಾಗ್ಯಕ್ಕೆ 50 ಸಾವಿರ, ಇಮಾಮ್‌ಗಳಿಗೆ ಆರು ಸಾವಿರ ಭತ್ಯೆ, ಉರ್ದು ಶಾಲೆಗಳಿಗೆ 150 ಕೋಟಿ, ಸಾಸಂಸ್ಕೃತಿಕ ಕಾರ್ಯಕ್ರಮಕ್ಕೆ 50 ಸಾವಿರ, ಮುಸ್ಲಿಂ ಕಾಲೋನಿಗಳಿಗೆ ಒಂದು ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ. ಇದೊಂದು ಹಲಾಲ್ ಬಜೆಟ್. ಸಮಾಜ ಒಡೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಬೇರೆವರಿಗೆ ಸಿಗುವುದಿಲ್ಲ. ಮುಸ್ಲಿಮರಿಗೆ ಮಾತ್ರ ಸಿಗುತ್ತಿದೆ. ಇದನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ. ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ ಮತ್ತು ಸಾರ್ವಜನಿಕವಾಗಿ ಹೋರಾಟ ಮಾಡುತ್ತೇವೆ ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗಣೇಶ್ ನಾವೂರು, ಸೀತಾರಾಮ ಬೆಳಾಲು, ಚೆನ್ನಕೇಶವ ನಾಯಕ್ ಉಪಸ್ಥಿತರಿದ್ದರು.