

ಬೆಳ್ತಂಗಡಿ: ಮೂಡುಕೋಡಿ ಗ್ರಾಮದ ರೋಯ್ ವರ್ಗೀಸ್ ಮತ್ತು ಅವರ ತಮ್ಮ ರಾಜೇಶ್ ವರ್ಗೀಸ್ ಅವರ ಕೃಷಿ ಜಮೀನಿಗೆ ಸೇರಿದ ಕುಮ್ಕಿ ಸ್ಥಳದ ಅಕ್ರಮ-ಸಕ್ರಮಕ್ಕೆ ಅರ್ಜಿ ನೀಡಲು ತಿಳಿಸಿ ಹಣ ಪಡೆದು ವಂಚಿಸಿರುವ ಆರೋಪದಡಿ ಗ್ರಾಮ ಆಡಳಿತಾಧಿಕಾರಿ ಸುದೇಶ್ ಕುಮಾರ್ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುದೇಶ್ ಕುಮಾರ್ ಸಹಕರಿಸುವ ಭರವಸೆ ನೀಡಿದ್ದರಿಂದ ತಾನು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು ಬಳಿಕ ಅವರು ಲಂಚ ನೀಡಲು ಬೇಡಿಕೆ ಇಟ್ಟಿದ್ದರು. ಅದರಂತೆ ಸುದೇಶ್ ಅವರ ಪತ್ನಿ ಮೀನಾಕ್ಷಿ ಅವರ ಬ್ಯಾಂಕ್ ಖಾತೆಗೆ ಮಾ. 22ರಂದು 80 ಸಾವಿರ ರೂ. ಹಾಗೂ ಬಳಿಕ ಒಟ್ಟು 5 ಸಲ 4,55,000 ರೂ. ವರ್ಗಾಯಿಸಲಾಗಿದೆ. ಜತೆಗೆ ಬೇರೆ ಬೇರೆ ದಿನಗಳಲ್ಲಿ 20 ಸಾ.ರೂ., 5 ಸಾ.ರೂ. ನಗದಾಗಿ ನೀಡಲಾಗಿತ್ತು. ಜತೆಗೆ ಸುದೇಶ್ ಸೂಚನೆಯಂತೆ ಶರಣ್ ಶೆಟ್ಟಿ ಎಂಬವರ ಬ್ಯಾಂಕ್ ಖಾತೆಗೆ ಔತಣ ಕೂಟದ ಬಗ್ಗೆ 15 ಸಾವಿರ ರೂ. ವರ್ಗಾಯಿಸಲಾಗಿದೆ. ಇಷ್ಟಾದ ಬಳಿಕ ಆರೋಪಿ ದೂರುದಾರರಲ್ಲಿ ನೀವು ನೀಡಿರುವ ಅಕ್ರಮ-ಸಕ್ರಮ ಜಮೀನು ಅರಣ್ಯ ಇಲಾಖೆಗೆ ಸೇರಿರುವ ಕಾರಣ ಅದನ್ನು ಮಂಜೂರುಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನೀಡಿದ್ದ ಹಣವನ್ನು ವಾಪಸ್ ನೀಡಲು ಕೇಳಿದ್ದು ಆಗ ತನಗೆ ಯಾವುದೇ ಹಣವನ್ನು ನೀವು ನೀಡಿಲ್ಲ ಎಂದು ತಿಳಿಸಿದ್ದಾರೆ ಎಂದು ರೋಯ್ ವರ್ಗೀಸ್ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವೇಣೂರು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಜೆಯಲ್ಲಿ ತೆರಳಿದ ಸುದೇಶ್: ತನ್ನ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ಮೂಡುಕೋಡಿ ಕರಿಮಣೇಲು ಗ್ರಾಮ ಆಡಳಿತಾಧಿಕಾರಿ ಸುದೇಶ್ ಕುಮಾರ್ ರಜೆಯಲ್ಲಿ ತೆರಳಿದ್ದಾರೆ. ಅವರ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಅಕ್ಷತ್ ಅವರನ್ನು ನಿಯೋಜಿಸಲಾಗಿದೆ. ವಂಚನೆ ಆರೋಪದ ಕುರಿತು ವೇಣೂರು ಠಾಣಾ ಪೊಲೀಸರು ತನಿಖಾ ವರದಿ ಸಲ್ಲಿಸಿದ ಬಳಿಕ ಕಂದಾಯ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.