

ರಾಘವ ಶರ್ಮ ನಿಡ್ಲೆ
ಬೆಳ್ತಂಗಡಿ: ಭಾರೀ ವಿವಾದ, ಬಣ ರಾಜಕಾರಣಕ್ಕೆ ಕಾರಣವಾಗಿದ್ದ ಕೊಕ್ಕಡದ ಸುಪ್ರಸಿದ್ಧ ಸೌತಡ್ಕ ದೇಗುಲದ ಹೊಸ ವ್ಯವಸ್ಥಾಪನಾ ಸಮಿತಿಯನ್ನೇ ಹೈಕೋರ್ಟ್ ರದ್ದು ಗೊಳಿಸಿದ್ದು, ಸರ್ಕಾರ ಮತ್ತೊಮ್ಮೆ ಎಲ್ಲಾ ಅರ್ಜಿಗಳನ್ನು ಪರಿಗಣಿಸಿ ಹೊಸ ವ್ಯವಸ್ಥಾಪನಾ ಸಮಿತಿ ರಚನೆ ಮಾಡಬೇಕು ಎಂದು ಆದೇಶ ಪ್ರಕಟಿಸಿದೆ.
ಫೆ.18ರಂದು ಪ್ರಕಟಗೊಂಡಿದ್ದ ಆದೇಶದಲ್ಲಿ ತಮ್ಮನ್ನು ಸದಸ್ಯರನ್ನಾಗಿ ಮಾಡಿ, ನಂತರ ಮಾ.3ರಂದು ನೂತನ ಸಮಿತಿ ರಚನೆ ಕುರಿತ ಹೊರಡಿಸಿದ್ದ ಪರಿಷ್ಕೃತ ಆದೇಶದಲ್ಲಿ ತಮ್ಮ ಹೆಸರನ್ನು ಕೈಬಿಟ್ಟದ್ದಕ್ಕೆ ಆಕ್ರೋಶಗೊಂಡಿದ್ದ ಪುತ್ತೂರು ಮೂಲದ ಪ್ರಸಿದ್ಧ ವಕೀಲ ಉದಯಶಂಕರ ಶೆಟ್ಟಿ ಅರಿಯಡ್ಕ, ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದರು. ಅರ್ಜಿ ಪರಿಗಣಿಸಿದ್ದ ನ್ಯಾ. ನಾಗಪ್ರಸನ್ನ ಅವರು, ವ್ಯವಸ್ಥಾಪನಾ ಸಮಿತಿಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಪ್ರತಿವಾದಿ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದ್ದರು. ಮಾರ್ಚ್ ೨೫ರಂದು ವಿಚಾರಣೆ ನಡೆಸಿದ ನ್ಯಾಯಪೀಠ, ಉದಯ ಶಂಕರ ಶೆಟ್ಟಿ ಅವರ ಅರ್ಜಿ ವಿಲೇವಾರಿ ಮಾಡಿ ಕಾನೂನಾತ್ಮಕವಾಗಿ ಹೊಸ ಸಮಿತಿ ರಚನೆ ಮಾಡುವಂತೆ ರಾಜ್ಯ ಧಾರ್ಮಿಕ ಪರಿಷತ್‌ಗೆ ಸೂಚಿಸಿದೆ.
ತಮ್ಮನ್ನು ಸದಸ್ಯತ್ವದಿಂದ ತೆಗೆದು ಹಾಕಿದ್ದಕ್ಕೆ ಕೆಂಡಾಮಂಡಲಗೊಂಡಿದ್ದ ಉದಯ ಶಂಕರ ಶೆಟ್ಟಿ, ನಾನು ಸುಮ್ಮನೆ ಕೂರುವವನಲ್ಲ. ಇದಕ್ಕೆ ಕಾರಣರಾದವರಿಗೆ ಬುದ್ಧಿ ಕಲಿಸಲಿzನೆ ಎಂದು ಸುದ್ದಿ ಬಿಡುಗಡೆ ಪತ್ರಿಕೆಯೊಂದಿಗೆ ತಿಳಿಸಿದ್ದರು. ತಮ್ಮ ಮಾತಿನಂತೆ, ಇಡೀ ಸಮಿತಿಯನ್ನು ರದ್ದುಗೊಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಉದಯ ಶಂಕರ ಅವರ ಪರವಾಗಿ ಹಿರಿಯ ವಕೀಲ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್ ಅವರು ವಾದ ಮಂಡಿಸಿದ್ದರು. ವಕೀಲ ಸುಯೋಗ್ ಹೆರಳೆ ಸಹಕರಿಸಿದ್ದರು.
ಫೆ.18ರ ಆದೇಶದ ಕುರಿತು ವಿವರಣೆ ನೀಡಿದ್ದ ಸರ್ಕಾರಿ ವಕೀಲರು, ಅದು ಕರಡು ಪ್ರತಿ ಮಾತ್ರ. ಅಧಿಕೃತ ಆದೇಶವಾಗಿರಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಇದನ್ನು ಪ್ರಶ್ನಿಸಿದ್ದ ನ್ಯಾ. ನಾಗಪ್ರಸನ್ನ, ಕೇವಲ ಕರಡು ಪ್ರತಿ ಎನ್ನುವುದಾದರೆ, ಅದು ಪ್ರಕಟವಾಗಿದ್ದು ಹೇಗೆ? ಪತ್ರಿಕೆಗಳಲ್ಲಿ ಬಂದಿದ್ದು ಹೇಗೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ಸಲಹೆ ಒಪ್ಪಿಕೊಂಡ ಪ್ರತಿವಾದಿ ವಕೀಲರು, ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮರು ಪರಿಶೀಲಿಸಿ ಹೊಸ ವ್ಯವಸ್ಥಾಪನಾ ಸಮಿತಿ ರಚನೆ ಮಾಡುತ್ತೇವೆ ಎಂದು ತಿಳಿಸಿದರು.
ಫೆ.18ರ ಸರ್ಕಾರಿ ಆದೇಶದಲ್ಲಿ ಸುಬ್ರಹ್ಮಣ್ಯ ಶಬರಾಯ, ವಿಶ್ವನಾಥ ಪೂಜಾರಿ ಕೊಲ್ಲಾಜೆ, ಸಿನಿ ಗುರುದೇವನ್, ಪ್ರಶಾಂತ್ ರೈ ಗೋಳಿತೊಟ್ಟು, ಉದಯಶಂಕರ ಶೆಟ್ಟಿ ಅರಿಯಡ್ಕ, ಗಣೇಶ್ ಕಾಶಿ, ಲೋಕೇಶ್ವರಿ ವಿನಯಚಂದ್ರ, ಹರಿಶ್ಚಂದ್ರ ಜಿ, ಅರ್ಚಕ ಸತ್ಯಪ್ರಿಯ ಕಲ್ಲೂರಾಯರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಮಾ.೩ರ ಪರಿಷ್ಕೃತ ಆದೇಶದಲ್ಲಿ ಉದಯಶಂಕರ ಶೆಟ್ಟಿ ಮತ್ತು ಪ್ರಶಾಂತ್ ರೈ ಗೋಳಿತೊಟ್ಟುರನ್ನು ಕೈಬಿಟ್ಟು, ತಾಲೂಕಿನ ಎಂತಿಮರ್ ಹೌಸ್‌ನ ಪ್ರಮೋದ್ ಕುಮಾರ್ ಶೆಟ್ಟಿ ಮತ್ತು ಕೊಕ್ರಾಡಿ ಗ್ರಾಮದ ಪ್ರಶಾಂತ್ ಕುಮಾರ್‌ರನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿತ್ತು. ಉದಯ ಶಂಕರ ಶೆಟ್ಟಿ ಮತ್ತು ಪ್ರಶಾಂತ್ ರೈ ಬೆಳ್ತಂಗಡಿ ತಾಲೂಕಿನವರಲ್ಲ. ಹೀಗಾಗಿ ಕೈಬಿಡಲಾಯಿತು. ಯಾರನ್ನೂ ಅವಮಾನ ಮಾಡಲು ಹೀಗೆ ಮಾಡಿಲ್ಲ. ಹೊಸ ಉತ್ಸಾಹಿ ತಂಡ ಕಟ್ಟುವುದು ನಮ್ಮ ಆಶಯ ಎಂದು ತಾಲೂಕು ಕಾಂಗ್ರೆಸ್ ಮುಖಂಡ ಮತ್ತು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಮರ್ಥನೆ ನೀಡಿದ್ದರು.
ಹೊಸ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಆಯ್ಕೆಯಾಗಿದ್ದರು. ಮಾ.4ರಂದು ಹೊಸ ಸಮಿತಿಯ ಪದಗ್ರಹಣ ಸಮಾರಂಭ ಸೌತಡ್ಕ ದೇಗುಲದಲ್ಲಿ ತಾಲೂಕಿನ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರ ಸಮ್ಮುಖದಲ್ಲಿ ನಡೆದಿತ್ತು. ತಹಶೀಲ್ದಾರ್ ಹೊಸ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು.
ಆದರೆ ರಕ್ಷಿತ್ ಶಿವರಾಂ ಸೇಡಿನ ರಾಜಕಾರಣ ಮಾಡಿದ್ದಾರೆ ಎಂದು ಉದಯ ಶಂಕರ ಶೆಟ್ಟಿ ಸಿಟ್ಟಾಗಿದ್ದರು ಮತ್ತು ಪ್ರಶಾಂತ್ ರೈ ಕೂಡ ರಕ್ಷಿತ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಒಟ್ಟಿನಲ್ಲಿ, ಈ ಎಲ್ಲಾ ಬೆಳವಣಿಗೆಗಳು ಸೌತಡ್ಕ ದೇಗುಲದ ವರ್ಚಸ್ಸಿಗೆ ಹಾನಿ ಮಾಡಿದ್ದಲ್ಲದೆ, ಭಕ್ತರಲ್ಲೂ ಗೊಂದಲಗಳನ್ನು ಸೃಷ್ಟಿಸಿತ್ತು. ದೇಗುಲ ವ್ಯವಹಾರಗಳಲ್ಲಿ ರಾಜಕಾರಣ ಹೊಗೆಯಾಡಿದ್ದು ಆಸ್ತಿಕ ವರ್ಗದ ಅಸಮಾಧಾನಕ್ಕೂ ಕಾರಣವಾಗಿತ್ತು.
ನ್ಯಾ. ನಾಗಪ್ರಸನ್ನ ಹೇಳಿದ್ದೇನು: *ಉದಯಶಂಕರ ಶೆಟ್ಟಿ ಮತ್ತು ಪ್ರಶಾಂತ್ ರೈ ಅವರನ್ನು ಕೈಬಿಡಲು ಯಾವುದೇ ಅಧಿಕೃತ ನಿರ್ಣಯ ಮಾಡಲಾಗಿಲ್ಲ
*ಹೀಗಾಗಿ, ಎರಡೂ ಕಡೆಯವರು ವಿನಾಕಾರಣ ಚರ್ಚೆ, ಗಲಾಟೆ ಮಾಡಿಕೊಳ್ಳುವುದು ಬೇಡ
*ಫೆ.18 ಮತ್ತು ಮಾ.೩ರ ಎರಡೂ ಸರ್ಕಾರಿ ಆದೇಶಗಳನ್ನು ರದ್ದು ಮಾಡುತ್ತಿದ್ದೇನೆ
*ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮರುಪರಿಶೀಲಿಸಿ, ಹೊಸ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿ
*ಈ ರೀತಿ ಮಾಡದಿದ್ದರೆ, ಸಮಿತಿ ರಚನೆ ಮಾಡುವುದು, ನಂತರ ಬದಲಾಯಿಸುವುದು ಎಂದು ನೀವು ಪ್ರತಿ ಬಾರಿ ಹೀಗೆಯೇ ಮಾಡುತ್ತಿರುತ್ತೀರಿ.
ಅನ್ಯಾಯ ಸರಿಪಡಿಸಲು ಯತ್ನ: ಕೆಲವರ ಮೇಲೆ ಗಂಟೆ ಕಳ್ಳರೆಂಬ ಆರೋಪವಿದ್ದು, ಸತ್ಯಾಸತ್ಯತೆಯನ್ನು ತಿಳಿದುಕೊಂಡು, ದೇವಸ್ಥಾನಕ್ಕೆ ಆದ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದೇನೆ ಎಂದು ಅರಿಯಡ್ಕ ಉದಯಶಂಕರ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ದೇವಸ್ಥಾನ ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶದೊಂದಿಗೆ ನಾನು ವ್ಯವಸ್ಥಾಪನಾ ಸಮಿತಿ ಸದಸ್ಯತ್ವನಾಗಿ ಸೇವೆ ಮಾಡಲು ಬಯಸಿದ್ದೆ. ನನಗೆ ಅವಕಾಶ ದೊರೆಯದೇ ಇದ್ದರೂ ದೇವಳದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇನೆ ಎಂದವರು ಹೇಳಿದ್ದಾರೆ.
ಮುಂದಿನ ನಡೆ ಕುತೂಹಲ: ಹೊಸದಾಗಿ ರಚನೆಯಾಗಲಿರುವ ಸಮಿತಿಯಲ್ಲಿ ಉದಯಶಂಕರ ಶೆಟ್ಟಿ ಮತ್ತು ಪ್ರಶಾಂತ್ ರೈ ಅವರನ್ನು ಸೇರಿಸುತ್ತಾರೋ ಇಲ್ಲವೋ ಎಂಬ ಕುತೂಹಲವಿದೆ. ಅವರಿಬ್ಬರನ್ನು ತೆಗೆಯಬೇಕು ಎನ್ನುವುದು ರಕ್ಷಿತ್ ಶಿವರಾಂ ವಾದವಾಗಿತ್ತು ಮತ್ತು ಸಚಿವರು ಅದನ್ನು ಪರಿಗಣಿಸಿದ್ದರು. ಆದರೆ, ಹೈಕೋರ್ಟ್ ಆದೇಶದಿಂದ ಸರ್ಕಾರಕ್ಕೆ ಸಣ್ಣ ಮಟ್ಟಿಗೆ ಹಿನ್ನಡೆಯಾಗಿರುವುದಂತೂ ಹೌದು. ಪ್ರಶಾಂತ್ ರೈ ಅವರು ಕಾಂಗ್ರೆಸ್ ಹಿರಿಯ ನಾಯಕ ರಮಾನಾಥ ರೈ ಅವರಿಗೆ ಆಪ್ತರಾಗಿರುವುದರಿಂದ ಮುಂದಿನ ಬೆಳವಣಿಗೆಗಳು ಕುತೂಹಲಕ್ಕೆಡೆಮಾಡಿವೆ. ರದ್ದಾದ ಸಮಿತಿಯಲ್ಲಿ ಸ್ಥಾನ ಪಡೆದಿದ್ದ ಪ್ರಶಾಂತ್ ಕುಮಾರ್ ಅವರು ರಕ್ಷಿತ್ ಶಿವರಾಂ ಆಪ್ತರು ಎನ್ನುವುದೂ ಗಮನಾರ್ಹ.
“ನನ್ನ ಭಾವನೆಗೆ ಪೂರಕವಾಗಿಯೇ ಹೈಕೋರ್ಟ್ ತೀರ್ಪು ಬಂದಿದೆ. ಫೆ.18ರಂದು ಹೊರಡಿಸಿದ್ದ ಆದೇಶದಲ್ಲಿ ನನ್ನನ್ನು ಸಮಿತಿ ಸದಸ್ಯನನ್ನಾಗಿ ಮಾಡಿದ್ದರು. ಆದರೆ, ಮಾ.೩ರ ಆದೇಶದಲ್ಲಿ ನನ್ನ ಹೆಸರು ಕೈಬಿಡಲಾಗಿತ್ತು. ಇದು ಅತೀವ ನೋವುಂಟುಮಾಡಿತ್ತು. ನಿಮ್ಮನ್ನು ಏಕೆ ಸಮಿತಿಯಿಂದ ತೆಗೆದರು ಎಂದು ಹಿತೈಷಿಗಳು ಕೇಳಿದಾಗ ನೋವಾಗಿತ್ತು. ಆದರೆ, ಹೈಕೋರ್ಟ್ ತೀರ್ಪು ನನಗಾದ ಮುಜುಗರ, ನೋವನ್ನು ಇಲ್ಲವಾಗಿಸಿದೆ. ನನಗೆ ನ್ಯಾಯ ಸಿಗದಿದ್ದರೆ, ಸೌತಡ್ಕಕ್ಕೆ ಕಾಲಿಡುವುದಿಲ್ಲ ಎಂದೂ ಮನಸ್ಸಿನಲ್ಲಿ ಹೇಳಿಕೊಂಡಿದ್ದೆ. ಆದರೆ, ತೀರ್ಪಿನಿಂದ ಎಲ್ಲವೂ ನಿವಾರಣೆಯಾಗಿದೆ. ನೋವಿನಲ್ಲಿ ನನ್ನೊಂದಿಗಿದ್ದ ಎಲ್ಲರಿಗೂ ಕೃತಜ್ಞ. ಈ ಬಗ್ಗೆ ನಿರಂತರ ವರದಿ ಮಾಡಿದ್ದ ಸುದ್ದಿ ಬಿಡುಗಡೆ ಪತ್ರಿಕೆಗೂ ಅಭಿನಂದನೆಗಳು” – ಪ್ರಶಾಂತ್ ರೈ ಅರಂತಬೈಲು, ಗೋಳಿತೊಟ್ಟು
“ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ಪಾರದರ್ಶಕವಾದ ಸಮಿತಿ ರಚನೆ ಮಾಡುವ ಅವಕಾಶ ಮತ್ತೊಮ್ಮೆ ಸರ್ಕಾರದ ಮುಂದೆ ಬಂದಿದೆ. ಗಂಟೆ ಹಗರಣದ ಆರೋಪಿಗಳನ್ನು ಹೊಸದಾಗಿ ರಚನೆ ಮಾಡಲಿರುವ ಸಮಿತಿಗೆ ಸೇರಿಸಿಕೊಳ್ಳಬಾರದು ಎಂದು ಮತ್ತೊಮ್ಮೆ ಒತ್ತಾಯಿಸುತ್ತಿದ್ದೇವೆ. ಎಲ್ಲಾ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಬೇಕು. ಕ್ಲೀನ್ ಇಮೇಜ್ ಉಳ್ಳವರನ್ನು ಆಯ್ಕೆ ಮಾಡಿದರೆ ನಮ್ಮ ಸಹಕಾರ ಖಂಡಿತಾ ಇರಲಿದೆ” – ಪ್ರಶಾಂತ್ ಪೂವಾಜೆ, ಹಳೆ ವ್ಯವಸ್ಥಾಪನಾ ಸಮಿತಿ ಸದಸ್ಯ