

ಬೆಳ್ತಂಗಡಿ: ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲು ಇಲ್ಲಿ 26ನೇ ವಾರ್ಷಿಕೋತ್ಸವವನ್ನು ಮಾ. 22ರಂದು ಆಚರಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಸಂಸ್ಥೆಯ ಟ್ರಸ್ಟೀ ಸದಸ್ಯೆ ಮೇರಿ ಯು.ಪಿ. ನೆರವೇರಿಸಿದರು.
ಸಿಯೋನ್ ಪ್ರಾರ್ಥನಾಲಯದಲ್ಲಿ ದಿವ್ಯಬಲಿಪೂಜೆಯನ್ನು ತೋಟತ್ತಾಡಿ ಸೈಂಟ್ ಅಂತೋನಿಯವರ ದೇವಾಲಯದ ಧರ್ಮಗುರು ಜೋಸ್ ಪೂವತ್ತಿಂಗಲ್ ರವರು ನೆರವೇರಿಸಿದರು. ತದನಂತರ ಹಮ್ಮಿಕೊಂಡಿದ್ದ ಸಭಾಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ಜೋಸ್ ಪೂವತ್ತಿಂಗಲ್ ವಾರ್ಷಿಕೋತ್ಸವಕ್ಕೆ ಶುಭಾಶೀರ್ವದಿಸಿ, ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹೇಗೆ ಆಧ್ಯಾತ್ಮಿಕ, ದೈಹಿಕ ಮತ್ತು ಮಾನಸಿಕ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾ, ಸಿಯೋನ್ ಆಶ್ರಮದ ಈ ಸೇವೆ ಶ್ಲಾಘನೀಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಶೋಭಾ ಯು.ಪಿ. ಸಿಯೋನ್ ಅಶ್ರಮ ಬೆಳೆದು ಬಂದ ಹಾದಿಯನ್ನು, ನಿವಾಸಿಗಳ ಕಾರ್ಯಚಟುವಟಿಕೆಗಳನ್ನು ಮತ್ತು ಪ್ರಸ್ತುತ ಕಾರ್ಯವೈಖರಿಗಳ ಬಗ್ಗೆ ತಿಳಿಸಿದರು.
ಸಂಸ್ಥೆಯ ಲೆಕ್ಕಾಧಿಕಾರಿ ಸೌಮ್ಯ ಯು.ಪಿ. ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ವೈದ್ಯಾಧಿಕಾರಿ ಡಾ. ಶಿವಾನಂದ ಸ್ವಾಮಿ ಸಂಸ್ಥೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ. ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕ ಡಾ.ಯು.ಸಿ.ಪೌಲೋಸ್‌ರವರು, ಹಿತೈಷಿಗಳಾದ ಜೋಸೆಫ್ ಪಿ.ಪಿ., ಟ್ರಸ್ಟೀ ಸದಸ್ಯರುಗಳಾದ ಮೇರಿ ಯು.ಪಿ., ಆಶ್ರಮದ ಫಲಾನುಭವಿಗಳಾದ ರಾಜ ಮತ್ತು ರಜನಿದೇವಿ ಶೆಟ್ಟಿಯವರು ವೇದಿಕೆಯನ್ನಲಂಕರಿಸಿದ್ದರು.

ವಾರ್ಷಿಕೋತ್ಸವದ ಅಂಗವಾಗಿ ಆಶ್ರಮ ನಿವಾಸಿಗಳಿಗೆ ಮತ್ತು ಸಿಬ್ಬಂದಿವರ್ಗದವರಿಗೆ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು ಮತ್ತು ಅಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು.
ಸಂಸ್ಥೆಯ ಸಿಬ್ಬಂದಿಗಳಾದ ಮಿಷಾ ಕುರಿಯನ್ ಸ್ವಾಗತಿಸಿದರು. ದಿನಾವತಿ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಸಿಯೋನ್ ಆಶ್ರಮದ ವತಿಯಿಂದ ನೀಡಲಾಯಿತು. ಸಿಂಧು ವಿ. ಎಂ. ವಂದಿಸಿದರು.