ಮೂಲಭೂತ ಸೌಕರ್ಯಗಳಿಲ್ಲದ ಬಾಂಜಾರುಮಲೆಯಲ್ಲಿ ಅಂಗನವಾಡಿ ಕೇಂದ್ರ ಆರಂಭ

0

ಬೆಳ್ತಂಗಡಿ: ತಾಲೂಕಿನ ಅತ್ಯಂತ ಹಿಂದುಳಿದ ಮತ್ತು ತೀರಾ ದುರ್ಗಮ ಪ್ರದೇಶವಾದ ನೆರಿಯ ಗ್ರಾಮದ ಬಾಂಜಾರುಮಲೆಯಲ್ಲಿ ಅಂಗನವಾಡಿ ಕೇಂದ್ರ ಸ್ಥಾಪನೆಯ ಬಹುಕಾಲದ ಬೇಡಿಕೆ ಈಡೇರಿದೆ. ಬಾಂಜಾರುಮಲೆಯ ಸಮುದಾಯ ಭವನದಲ್ಲಿ ಅಂಗನವಾಡಿ ಕೇಂದ್ರ ಕಾರ್ಯಾರಂಭ ಮಾಡಿದ್ದು ಪ್ರಸ್ತುತ 7 ಮಕ್ಕಳಿದ್ದಾರೆ. ಈ ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿ ಇಬ್ಬರು ಗರ್ಭಿಣಿಯರಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್, ಅಭಿವೃದ್ಧಿ ಅಧಿಕಾರಿ ರಶ್ಮಿ, ಜಿಲ್ಲಾ ನಿರೂಪಣಾಧಿಕಾರಿ ಕುಮಾರ್, ಸಿಡಿಪಿಒ ಪ್ರಿಯಾ ಆಗ್ನೆಸ್ ಮತ್ತು ಮೇಲ್ವಿಚಾರಕಿ ನಾಗವೇಣಿ ಅಂಗನವಾಡಿ ಕೇಂದ್ರ ಉದ್ಘಾಟನೆಯಲ್ಲಿ ಭಾಗವಹಿಸಿದ್ದರಲ್ಲದೆ ಪೋಷಕರ ಸಭೆ ನಡೆಸಿ ಇಲಾಖಾ ಮಾಹಿತಿ ನೀಡಿದ್ದಾರೆ. ಇಲ್ಲಿನ ಜನರು ಅಂಗನವಾಡಿಯಿಂದ ಫಲಾನುಭವಿಗಳಿಗೆ ಸಿಗುವ ಅಗತ್ಯ ಆಹಾರ ಸಾಮಗ್ರಿಗಾಗಿ 40 ಕಿ.ಮೀ. ದೂರದ ಗಂಡಿಬಾಗಿಲು ಅಂಗನವಾಡಿ ಕೇಂದ್ರವನ್ನು ಇದುವರೆಗೆ ಆಶ್ರಯಿಸಿದ್ದರು. ಇದಕ್ಕಾಗಿ ಹೆಚ್ಚಿನ ಖರ್ಚು ಮತ್ತು ಸಮಯದ ವ್ಯಯ ಆಗುತ್ತಿತ್ತು. ಇನ್ನು ಮುಂದಿನ ದಿನಗಳಲ್ಲಿ ಇದೇ ಅಂಗನವಾಡಿ ಕೇಂದ್ರದ ಮೂಲಕ ಅಗತ್ಯ ಆಹಾರ ಸಾಮಾಗ್ರಿ ವಿತರಣೆ ನಡೆಯಲಿದೆ.

ಮೂಲ ಸೌಕರ್ಯಗಳಿಲ್ಲದ ಊರು: ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಬಾಂಜಾರುಮಲೆ ಪ್ರದೇಶದಲ್ಲಿ ಸುಮಾರು ೪೦ರಷ್ಟು ಮನೆ ಮತ್ತು ೧೬೦ ಆಸುಪಾಸು ಜನಸಂಖ್ಯೆ ಇದೆ. ಇಲ್ಲಿ ರಸ್ತೆ ಸಹಿತ ಯಾವುದೇ ಮೂಲ ಸೌಕರ್ಯಗಳಿಲ್ಲ, ವಿದ್ಯುತ್ ವ್ಯವಸ್ಥೆ ಇದ್ದರೂ ಅದು ವರ್ಷದಲ್ಲಿ ಆರು ತಿಂಗಳಿಗೆ ಮಾತ್ರ ಸೀಮಿತವಾಗಿದೆ. ಮೊಬೈಲ್ ನೆಟ್‌ವರ್ಕ್, ದೂರವಾಣಿ ವ್ಯವಸ್ಥೆ ಕೂಡ ಅಷ್ಟಕಷ್ಟೇ. ಇಲ್ಲಿನ ಜನರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಬೇಕಾದರೆ ಸುಮಾರು 30 ಕಿ.ಮೀ. ದುರ್ಗಮವಾದ ಅರಣ್ಯ ಪ್ರದೇಶದ ರಸ್ತೆಯಲ್ಲಿ ಕ್ರಮಿಸಬೇಕು. ಸ್ವಂತ ವಾಹನ ಇದ್ದರಷ್ಟೇ ಸಂಚಾರ ನಡೆಸಬಹುದು.

ಇದಲ್ಲದೆ ಇಲ್ಲಿ ಕಾಡಾನೆ ಸಹಿತ ಕಾಡುಪ್ರಾಣಿಗಳ ಓಡಾಟವೂ ಸಾಕಷ್ಟಿದೆ. ಮಳೆಗಾಲದಲ್ಲಿ ಸೇತುವೆ ಇಲ್ಲದ ಎರಡು ನದಿಗಳನ್ನು ದಾಟಿ ಬರಬೇಕಾಗಿರುವುದು ಸಾಹಸದ ಕೆಲಸವಾಗಿದೆ. ಬಾಡಿಗೆ ವಾಹನಗಳನ್ನೇ ಆಶ್ರಯಿಸಿರುವ ಇಲ್ಲಿನ ಜನತೆ ಯಾವುದೇ ಒಂದು ದಿನಸಿ ವಸ್ತು ಖರೀದಿಗೂ ೩೦ ಕಿ.ಮೀ. ದೂರದ ಚಾರ್ಮಾಡಿ ಅಥವಾ ಕಕ್ಕಿಂಜೆಗೆ ಬರಬೇಕು. ಸಾಕಷ್ಟು ನೀರಿನಾಶ್ರಯ ಇರುವ ಇಲ್ಲಿನ ಹಿಂದುಳಿದ ಕೃಷಿ ಕುಟುಂಬಗಳಿಗೆ ಆಧುನಿಕ ಜಗತ್ತಿನ ಹೆಚ್ಚಿನ ಸೌಕರ್ಯಗಳು ಇನ್ನೂ ಸಿಗದಿರುವುದು ವಿಪರ್ಯಾಸ.

ಶೇ.೧೦೦ ಮತದಾನವಾಗಿತ್ತು: ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಬಾಂಜಾರುಮಲೆ ಮತದಾನ ಕೇಂದ್ರದಲ್ಲಿ ಶೇ.100 ಮತದಾನವಾಗಿದ್ದು ದೇಶವೇ ಗುರುತಿಸುವ ಕಾರ್ಯ ನಡೆದಿತ್ತು. ಹೊರಜಿಲ್ಲೆಗಳಲ್ಲಿರುವ ಇಲ್ಲಿನ ಮಂದಿ ಊರಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದರು. ಇಲ್ಲಿನ ಸೌಕರ್ಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮತದಾನದಲ್ಲಿ ಭಾಗವಹಿಸಿದ್ದ ಮಂದಿಗೆ ಇದೀಗ ಅಂಗನವಾಡಿ ಕೇಂದ್ರವಾಗಿರುವುದು ಸಂತಸ ತಂದಿದೆ. ಇಲ್ಲಿಗೆ ಬೇಕಾಗಿರುವ ಇನ್ನಷ್ಟು ಅಗತ್ಯ ಸೌಕರ್ಯಗಳು ಯಾವಾಗ ದೊರೆಬಹುದು ಎಂಬ ನಿರೀಕ್ಷೆ ಮುಂದುವರೆದಿದೆ.

ಕಟ್ಟಡ ನಿರ್ಮಾಣಕ್ಕೆ ಕ್ರಮ: ಅಂಗನವಾಡಿ ಕೇಂದ್ರಕ್ಕೆ ನಿವೇಶನ ಸಿಗುವ ತನಕ ಇಲ್ಲಿನ ಸಮುದಾಯ ಭವನದಲ್ಲಿ ಕೇಂದ್ರ ಕಾರ್ಯ ನಿರ್ವಹಿಸಲಿದೆ. ನಿವೇಶನಕ್ಕಾಗಿ ಪ್ರಯತ್ನ ನಡೆದಿದ್ದು ನಿವೇಶನ ದೊರಕಿದ ಕೂಡಲೇ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಡಿಪಿಒ ಪ್ರಿಯಾ ಅಗ್ನೆಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here