ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಏ. 20ರಿಂದ 23ರ ವರೆಗೆ ನಡೆಯುವ ಬ್ರಹ್ಮ ಕಲಶೋತ್ಸವದ ಪೂರ್ವಭಾವಿ ಸಭೆ ಮಾ. 9ರಂದು ಶ್ರೀ ರಾಘವೇಂದ್ರ ಮಠದಲ್ಲಿ ನಡೆಯಿತು. ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ರವರನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಬ್ರಹ್ಮಕಲಶೋತ್ಸವದ ಉಳಿದ ಸಮಿತಿಯ ಸದಸ್ಯರನ್ನು ಆಯ್ಕೆಗೊಳಿಸಲು ಸಭೆ ರಕ್ಷಿತ್ ಶಿವರಾಂ ರವರಿಗೆ ಅಧಿಕಾರ ನೀಡಿತು. ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ಎ.ಕೃಷ್ಣಪ್ಪ ಪೂಜಾರಿ ಪ್ರಸ್ತಾವಿಸಿ, ಶ್ರೀ ರಾಘವೇಂದ್ರ ಮಠ 24 ವರ್ಷದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ ಮಾತನಾಡಿ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕರಿಸಿದ ಮಹನೀಯರನ್ನು ನೆನೆಸಿದರು.

ಉಜಿರೆ ಎಸ್. ಡಿ. ಎಂ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡಗಳನ್ನು ನೆನೆಸಿದರು. ರಕ್ಷಿತ್ ಶಿವರಾಂ ಈ ಬಾರಿಯ ಬ್ರಹ್ಮಕಲಶೋತ್ಸವವನ್ನು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸುವುದಾಗಿ ತಿಳಿಸಿದರು. ಮುಖ್ಯ ಅರ್ಚಕ ರಾಘವೇಂದ್ರ ಬಾಂಗ್ಯಣ್ಣಾಯ ಪೂಜಾ ವಿಧಿ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿಠ್ಠಲ ಶೆಟ್ಟಿ, ಸುಜಿತಾ ವಿ. ಬಂಗೇರ, ಲೋಕೇಶ್ವರಿ ವಿನಯ ಚಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರ, ಮಹಾಬಲ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸುರೇಶ್ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ ವಂದಿಸಿದರು. ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಗಣ್ಯರು, ಅಧ್ಯಕ್ಷರುಗಳು, ಪದಾಧಿಕಾರಿಗಳು, ಸಭೆಯಲ್ಲಿ ಹಾಜರಿದ್ದರು.