ಉಜಿರೆ: ಅರ್ಜುನ ಪ್ರಶಸ್ತಿ ಪುರಸ್ಕೃತೆ ಪೂವಮ್ಮ ಅವರಿಂದ ಎಸ್.ಡಿ.ಎಂ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ – “ಸೋತು ಗೆಲ್ಲುವ ಸಾಧ್ಯತೆಗಳಿಂದ ಅದಮ್ಯ ಆತ್ಮವಿಶ್ವಾಸ” – ಎಂ.ಆರ್. ಪೂವಮ್ಮ

0

ಉಜಿರೆ: ಸೋತು ಗೆಲ್ಲುವ ಸಾಧ್ಯತೆಗಳು ಅದಮ್ಯ ಆತ್ಮವಿಶ್ವಾಸವನ್ನು ಮೂಡಿಸಿ ಬದುಕನ್ನು ಸುಂದರಗೊಳಿಸುತ್ತವೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು, ಓಲಿಂಪಿಯನ್ ಎಂ.ಆರ್ ಪೂವಮ್ಮ ಹೇಳಿದರು. ಎಸ್‌.ಡಿ.ಎಂ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಧ್ವಜಾರೋಹಣ ನಡೆಸಿ, ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಫೆ.19ರಂದು ಚಾಲನೆ ನೀಡಿ ಅವರು ಮಾತನಾಡಿದರು. ಸ್ಪರ್ಧೆಗಳಲ್ಲಿ ಸೋಲು-ಗೆಲುವುಗಳು ಸಾಮಾನ್ಯ. ಹಿನ್ನಡೆಯನ್ನು ಸವಾಲಾಗಿ ತೆಗೆದುಕೊಂಡು ಸತತ ಪ್ರಯತ್ನಗಳ ಮೂಲಕ ಗೆಲುವಿನ ಹಾದಿಯಲ್ಲಿ ಸಾಗಬಹುದು ಎಂದು ಅವರು ಹೇಳಿದರು.

ರತ್ನವರ್ಮ ಕ್ರೀಡಾಂಗಣವು ತಮ್ಮ ವೃತ್ತಿ ಜೀವನದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದರು. ಇಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಕ್ರೀಡಾಜೀವನದ ಆರಂಭದಲ್ಲಿ ಸರಿಯಾದ ಮಾರ್ಗದರ್ಶನ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಗುರುಗಳಾದ ವಸಂತ್ ಹೆಗಡೆ ಅವರು ಮುಖ್ಯಪಾತ್ರ ವಹಿಸಿದ್ದಾರೆ ಎಂದು ಕೃತಜ್ಞತಾಪೂರ್ವಕವಾಗಿ ಪೂವಮ್ಮ ನೆನಪಿಸಿಕೊಂಡರು.

ಕಾಲೇಜಿನ ಪ್ರಾಂಶುಪಾಲ ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸದೃಢತೆಯನ್ನು ಕಾಯ್ದುಕೊಳ್ಳುವ ಮೂಲಕ ಬದುಕಿನ ಯಾವುದೇ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಹೇಳಿದರು.

ವಿದ್ಯಾರ್ಥಿಗಳು ಪ್ರತಿದಿನ ಯಾವುದಾದರೊಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಸದೃಡತೆಯನ್ನು ಸಾಧಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಪೂವಮ್ಮ ಅವರನ್ನು ಸನ್ಮಾನಿಸಲಾಯಿತು.

ಪ್ರೋ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿರುವ ಗಗನ್ ಗೌಡ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಮೇಶ್‌ ಎಚ್. ಉಪಸ್ಥಿತರಿದ್ದರು. ಕ್ರೀಡಾ ಕೂಟದ ಅಂಗವಾಗಿ ವಿದ್ಯಾರ್ಥಿಗಳಿಗೆ ಪಥ ಸಂಚಲನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಂತಿಮ ಬಿ.ಕಾಂ ‘ಸಿ’ ವಿದ್ಯಾರ್ಥಿಗಳು ಪ್ರಥಮ ಬಹುಮಾನ, ಪ್ರಥಮ ಬಿ.ಸಿ.ಎ ‘ಬಿ’ ವಿದ್ಯಾರ್ಥಿಗಳು ದ್ವಿತೀಯ ಮತ್ತು ಬಿ.ವೋಕ್‌ನ ರೀಟೈಲ್ ಆಂಡ್ ಮ್ಯಾನೇಜೇಂಟ್ ತೃತೀಯ ಬಹುಮಾನ ಪಡೆದುಕೊಂಡರು. ಡಾ.ಸುವೀ‌ರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here