ಬೆಳ್ತಂಗಡಿ: ಯುವವಾಹಿನಿ ಸಂಘಟನೆ ಯುವಕರಿಗೆ ಸರಿಯಾದ ನಾಯಕತ್ವ ತರಬೇತಿ ನೀಡುತ್ತಿದೆ ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷರೂ ಆಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.
ಶ್ರೀ ಗುರುನಾರಾಯಣ ಸ್ವಾಮಿ ಸಂಘದ ಸಭಾಂಗಣದಲ್ಲಿ ಫೆ. 16ರಂದು ನಡೆದ ಯುವವಾಹಿನಿ ಬೆಳ್ತಂಗಡಿ ಘಟಕದ ೨೦೨೫ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯೋದ್ದೇಶದಂತೆ ಯುವವಾಹಿನಿ ಘಟಕ ಯುವಕರ ಕಣ್ಮಣಿಯಾಗಿ ಬೆಳೆದಿದೆ. ಯುವಕರಿಗೆ ಸರಿಯಾಗಿ ಬೇಕಾದ ತರಬೇತಿಯನ್ನು ಯುವವಾಹಿನಿ ನೀಡುತ್ತಿದೆ ಎಂದರು.
ಬೆಳ್ತಂಗಡಿ ಪ್ರತಿಷ್ಠಿತ ಘಟಕ-ಲೋಕೇಶ್ ಕೋಟ್ಯಾನ್: ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ನೂತನ ಅಧ್ಯಕ್ಷ ಗುರುರಾಜ್ ಗುರಿಪಳ್ಳ ತಂಡಕ್ಕೆ ಪದಪ್ರದಾನ ನೆರವೇರಿಸಿ ಮಾತನಾಡಿ ಸಂಘಟನೆಯ ಮೂಲಕ ಕೆಲಸ ಮಾಡುತ್ತಿರುವ ಯುವವಾಹಿನಿಯಲ್ಲಿ 5000ಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಇತರ ಸಂಘಟನೆಗಳಿಗೆ ಮಾದರಿಯಾಗಿ ಯುವವಾಹಿನಿ ಸಮಾಜ ಸೇವೆ ಮಾಡುತ್ತಿದೆ. ೩೫ ಘಟಕಗಳಲ್ಲಿ ಬೆಳ್ತಂಗಡಿ ಘಟಕ ಪ್ರತಿಷ್ಠಿತ ಘಟಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅರುಣ್ ಮಾಂಜ ಮತ್ತು ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಲನ ಸಮಿತಿಯ ಅಧ್ಯಕ್ಷೆ ಲೀಲಾವತಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚುನಾವಣಾಧಿಕಾರಿಯಾಗಿದ್ದ ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಅಶ್ವತ್ ಕುಮಾರ್ ನೂತನ ಪದಾಧಿಕಾರಿಗಳ ವಿವರ ನೀಡಿದರು. ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ. ಕೆ. ಪ್ರಸಾದ್ ಸ್ವಾಗತಿಸಿದರು. ಯುವವಾಹಿನಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಯಶೋಧರ ಮುಂಡಾಜೆ ವರದಿ ವಾಚಿಸಿದರು. ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷರುಗಳು, ಮಾಜಿ, ಹಾಲಿ ನಿರ್ದೇಶಕರು, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರು, ಹಾಲಿ ನಿರ್ದೇಶಕರು, ಯುವವಾಹಿನಿ ಸಂಚಲನಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸುಧಾ ಆರ್. ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ನೂತನ ಕಾರ್ಯದರ್ಶಿ ಮಧುರ ರಾಘವ ವಂದಿಸಿದರು. ಕಾರ್ಯಕ್ರಮದ ಮೊದಲು ನೃತ್ಯ ಗಾನ -ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಉತ್ತಮ ಘಟಕವಾಗಿ ಮುನ್ನಡೆಯುತ್ತಿದೆ: ಜಯವಿಕ್ರಂ ಕಲ್ಲಾಪು – ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವವಾಹಿನಿ ಯುವಕರ ಸಂಘಟನೆ. ಯುವಕರು ಒಟ್ಟು ಸೇರಿ ನಾಯಕತ್ವವನ್ನು ಬೆಳೆಸುವ ಸಂಸ್ಥೆ ೯ ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಆರಂಭವಾಗಿದೆ. ಈ ಘಟಕ ವಿವಿಧ ಕಾರ್ಯಕ್ರಮ ಆಯೋಜನೆಯ ಮೂಲಕ ಉತ್ತಮ ಘಟಕವಾಗಿ ಮುನ್ನಡೆಯುತ್ತಿದೆ ಎಂದರು.
ಯುವಕರಿಗೆ ಅವಕಾಶ ನೀಡಬೇಕು: ಸಂಪತ್ ಸುವರ್ಣ – ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಪಿ. ಸುವರ್ಣ ಮಾತನಾಡಿ ಯುವವಾಹಿನಿ ಯುವಕರಿಗೆ ಶಕ್ತಿ ನೀಡುವ ಕೆಲಸ ಮಾಡುತ್ತಿದೆ. ಶಿಸ್ತು ಬದ್ಧ ಸಂಘಟನೆ ಅನೇಕ ಹೊಸಬರನ್ನು ನಾಯಕರನ್ನಾಗಿ ಮಾಡಿದೆ. ಪದಾಧಿಕಾರಿಗಳು ಕನಿಷ್ಠ ಒಂದಾದರೂ ಕಾರ್ಯಕ್ರಮ ಮಾಡಿ ತಮ್ಮ ಜವಾಬ್ದಾರಿ ತಿಳಿದುಕೊಳ್ಳಬೇಕು. ಬಿಲ್ಲವ ಸಂಘಟನೆಯಲ್ಲಿ ಯುವಕರಿಗೆ ಅವಕಾಶ ನೀಡಬೇಕು. ಆ ಮೂಲಕ ಹೊಸ ಹೊಸ ಮಾದರಿ ಕೆಲಸಕ್ಕೆ ಪ್ರೇರಣೆ ನೀಡಬೇಕು. ಜೊತೆಗೆ ನಾಯಕತ್ವದ ತರಬೇತಿ ಯುವಕರಿಗೆ ಅಗತ್ಯ ಇದೆ ಎಂದರು.
ನಾಯಕತ್ವ ಬೆಳೆದಿದೆ: ಸದಾಶಿವ ಊರ – ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಬೆಳ್ತಂಗಡಿ ಘಟಕದ ನಿಕಟಪೂರ್ವ ಅಧ್ಯಕ್ಷ ಸದಾಶಿವ ಊರ ಮಾತನಾಡಿ ಯುವವಾಹಿನಿ ಸಂಘಟನೆಯಲ್ಲಿ ತೊಡಗಿಸಿಕೊಂಡು ನಿರಂತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದುದರಿಂದ ನಾಯಕತ್ವ ಬೆಳೆದಿದೆ. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಒಂದು ವರ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು. ಈ ವರ್ಷ ನಡೆದ ಡೆನ್ನಾನ ಡೆನ್ನಾನ ಕಾರ್ಯಕ್ರಮ ಎಲ್ಲಾ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ ಎಂದರು.
ಯುವವಾಹಿನಿ ಗೌರವ ಸನ್ಮಾನ: ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಾನಂದ ಲಾಯಿಲ, ಬ್ರಹ್ಮಶ್ರೀ ಗುರುನಾರಾಯಣ ಗುರು ಸೇವಾ ಸಂಘ ಬಳಂಜ ಮತ್ತು ಅಂತರಾಷ್ಟ್ರೀಯ ಕರಾಟೆಪಟು ಶ್ರೇಯಸ್ ಪೂಜಾರಿ ಅವರನ್ನು ಗೌರವಿಸಲಾಯಿತು. ಬಳಿಕ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ಮತ್ತು ಸಾಂತ್ವನ ನಿಧಿ ವಿತರಿಸಲಾಯಿತು.