ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಕಲೇರಿಕಲ್ನಲ್ಲಿ ೨೦೧೬ರ ಜನವರಿಯಲ್ಲಿ ನಡೆದಿದ್ದ ವೃದ್ಧ ದಂಪತಿಯ ಕೊಲೆ ಮತ್ತು ಸುಲಿಗೆ ಪ್ರಕರಣದ ಆರೋಪಿಗೆ ಮಂಗಳೂರಿನ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಗದಗ ಜಿಲ್ಲೆಯ ಬಿ.ಸಿ. ಕೇರಿ ಓಣಿಯ ನಿವಾಸಿ ರಾಜು ಕಲ್ಲವಡ್ಡರ್ ಯಾನೆ ರಾಜೇಶ್ (೩೭ವ) ಶಿಕ್ಷೆಗೊಳಗಾದವನು. ಈತ ಕಲೇರಿಕಲ್ನಲ್ಲಿ ವರ್ಕಿ ಕೆ.ವಿ. (೮೫) ಮತ್ತು ಎಲಿಕುಟ್ಟಿ (೮೦) ದಂಪತಿಯನ್ನು ಹತ್ಯೆಗೈದು ೨೫ ಪವನ್ ಚಿನ್ನ ಮತ್ತು ನಗದು ಸೇರಿದಂತೆ ಅಂದಾಜು ೪.೫೦ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸುಲಿಗೆ ಮಾಡಿದ್ದ.
ಪ್ರಕರಣದ ವಿವರ: ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಕಲೇರಿಕಲ್ನ ಮನೆಯಲ್ಲಿ ವರ್ಕಿ ಮತ್ತು ಎಲಿಕುಟ್ಟಿ ವೃದ್ಧ ದಂಪತಿ ವಾಸವಿದ್ದರು. ದುಬೈನಲ್ಲಿದ್ದ ಅವರ ಓರ್ವ ಪುತ್ರಿ ಆಗಾಗ್ಗೆ ಬಂದು ಹೋಗುತ್ತಿದ್ದರು. ೨೦೧೬ರ ಜ.೧೦ರಂದು ದಂಪತಿ ಮನೆಯಲ್ಲಿದ್ದ ವೇಳೆ ರಾತ್ರಿ ೧೧ರ ಬಳಿಕ ರಾಜು ಮನೆಯ ಬಳಿ ಬಂದು ಮೂಗನಂತೆ ನಟಿಸಿ ಕುಡಿಯಲು ನೀರು ಕೇಳಿದ್ದ. ನೀರು ಕೊಟ್ಟ ಅನಂತರ ತನಗೆ ದಾರಿ ತೋರಿಸಲು ಟಾರ್ಚ್ ಬೆಳಕು ಹಾಕುವಂತೆ ಕೇಳಿದ್ದ. ಇದನ್ನು ನಂಬಿದ ವರ್ಕಿ ಅವರು ಟಾರ್ಚ್ ಬೆಳಕು ಹಾಕಿಕೊಂಡು ಮನೆಯಿಂದ ಸ್ವಲ್ಪ ದೂರ ಹೋದ ಬಳಿಕ ತನ್ನ ಬಳಿ ಇದ್ದ ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ವರ್ಕಿ ಅವರು ಉಟ್ಟಿದ್ದ ಲುಂಗಿಯಿಂದಲೇ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಮತ್ತೆ ಮನೆ ಪ್ರವೇಶಿಸಿ ಸೊತ್ತುಗಳನ್ನು ಜಾಲಾಡಿದ್ದ.
ಆಗ ಎಚ್ಚರಗೊಂಡ ಎಲಿಕುಟ್ಟಿ ಅವರನ್ನು ಕೂಡ ದೊಣ್ಣೆಯಿಂದ ಹೊಡೆದು ಬಟ್ಟೆಯಿಂದ ಕುತ್ತಿಗೆ ಬಿಗಿದು ರಾಜು ಕೊಲೆ ಮಾಡಿದ್ದ. ಬಳಿಕ ಮನೆಯ ಗೋದ್ರೆಜ್ ಕಪಾಟಿನಲ್ಲಿದ್ದ ಚಿನ್ನ, ನಗದು ದೋಚಿ ಪರಾರಿಯಾಗಿದ್ದ. ಮರುದಿನ ಬೆಳಿಗ್ಗೆ ಮನೆ ಕೆಲಸದವರು ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು.
ಉಡುಪಿಯಲ್ಲಿ ಪತ್ತೆ: ದಂಪತಿಯನ್ನು ಹತ್ಯೆ ಮಾಡಿದ್ದ ರಾಜು ಚಿನ್ನಾಭರಣಗಳನ್ನು ಗದಗದಲ್ಲಿ ಚಿಕ್ಕಮ್ಮನ ಮನೆ ಬಳಿ ಓಣಿಯಲ್ಲಿಟ್ಟು ಅಲ್ಲಿಂದ ಉಡುಪಿಗೆ ಪರ್ಯಾಯ ನಡೆಯುತ್ತಿದ್ದ ವೇಳೆ ಬಂದಿದ್ದ. ಅಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಕೇಸಿಗೆ ಬಲವಾದ ಸಾಕ್ಷಿಯಾಗಿತ್ತು ವಿಕ್ಸ್ ಡಬ್ಬ!
ವೃದ್ಧ ದಂಪತಿಯನ್ನು ಹತ್ಯೆ ಮಾಡಿ ಪರಾರಿಯಾದ ಆರೋಪಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಭಾರೀ ಸವಾಲಾಗಿತ್ತು. ಆದರೆ ಫಿಂಗರ್ ಪ್ರಿಂಟ್ ಬಲವಾದ ಸಾಕ್ಷ್ಯ ಒದಗಿಸಿತ್ತು. ಆರೋಪಿ ಗೋದ್ರೇಜ್ನಲ್ಲಿದ್ದ ಚಿನ್ನಾಭರಣಗಳನ್ನು ಪಡೆದುಕೊಳ್ಳುವಾಗ ಅದರಲ್ಲಿದ್ದ ವಿಕ್ಸ್ ವೆಪೋರಬ್ ಡಬ್ಬವನ್ನು ಕೂಡ ಹಿಡಿದಿದ್ದ. ಅದರಲ್ಲಿ ಆತನ ಬೆರಳಚ್ಚು ಸ್ಪಷ್ಟವಾಗಿ ಮುದ್ರೆಯಾಗಿರುವುದನ್ನು ಬೆರಳಚ್ಚು ವಿಭಾಗದ ಡಿವೈಎಸ್ಪಿ ಗೌರೀಶ್ ಪತ್ತೆ ಮಾಡಿದ್ದರು. ಇದು ಹಂತಕನ ಪತ್ತೆಗೆ ಸಹಕಾರಿಯಾಗಿತ್ತು.
ಅಪರಾಧ ಹಿನ್ನೆಲೆಯ ರಾಜು ಬಾಂಜಾರುಮಲೆಗೆ ಬಂದಿದ್ದ ದಂಪತಿಯನ್ನು ಕೊಲೆಗೈದ ಬಳಿಕ ಕೆ.ಟಿ. ಚಹಾ ಕುಡಿದಿದ್ದ!
ರಾಜು ೨೦೧೫ರಲ್ಲಿ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಬಾಂಜಾರುಮಲೆಗೆ ಡ್ಯಾಂ ಕೆಲಸಕ್ಕೆಂದು ಬಂದು ಇತರ ಕೂಲಿ ಕಾರ್ಮಿಕರು ಮತ್ತು ತನ್ನ ಪತ್ನಿ ಜತೆ ಕೆಲಸದ ಸ್ಥಳದ ಸಮೀಪದಲ್ಲಿ ಶೆಡ್ನಲ್ಲಿ ವಾಸವಿದ್ದ. ಅಪರಾಧ ಹಿನ್ನೆಲೆಯ ಈತ ಒಂಟಿ ಮನೆಗಳು, ವೃದ್ಧರಿರುವ ಮನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ. ಈತ ಬಾಲಕನಾಗಿರುವಾಗಲೇ ಅಪರಾಧ ಕೃತ್ಯಗಳನ್ನು ನಡೆಸಿದ್ದ. ಈತ ೧೮ ವಯಸ್ಸಿನ ಅನಂತರ ಹುಬ್ಬಳ್ಳಿ ಧಾರವಾಡ, ಗದಗ, ಹಾವೇರಿ ಮೊದಲಾದೆಡೆ ೯ಕ್ಕೂ ಅಧಿಕ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ವೃದ್ಧ ದಂಪತಿಯನ್ನು ಕೊಲೆಗೈದ ೬ ದಿನಗಳ ಬಳಿಕ ಈತನನ್ನು ಬಂಧಿಸಲಾಗಿತ್ತು. ಆ ಬಳಿಕ ಆತನಿಗೆ ಜಾಮೀನು ದೊರೆತಿರಲಿಲ್ಲ. ಈತನನ್ನು ಬೇರೊಂದು ಪ್ರಕರಣದ ವಿಚಾರಣೆಗಾಗಿ ಧಾರವಾಡಕ್ಕೆ ಕರೆದೊಯ್ದು ಮಂಗಳೂರಿಗೆ ವಾಪಸ್ ಕರೆ ತರುವಾಗ ೨೦೧೯ರ ಜ.೪ರಂದು ಅಂಕೋಲಾದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಬಳಿಕ ಗೋವಾದಲ್ಲಿ ಈತನನ್ನು ಬಂಧಿಸಲಾಗಿತ್ತು. ಆ ಬಳಿಕ ಈತ ಒಮ್ಮೆ ಕಾರಾಗೃಹ ಅಧಿಕಾರಿ ಮತ್ತು ಪೊಲೀಸರಿಗೂ ಹಲ್ಲೆ ನಡೆಸಿದ್ದ. ರಾಜು ವೃದ್ಧ ದಂಪತಿಯನ್ನು ಕೊಲೆಗೈದು, ಚಿನ್ನಾಭರಣ ದೋಚಿ ಬಳಿಕ ಪಕ್ಕದ ಹೊಟೇಲ್ಗಳಲ್ಲಿ ಬೆಳಿಗ್ಗೆ ಚಹಾ ಕುಡಿದಿದ್ದ. ಒಂದು ಕಡೆ ಚಹಾ ಕುಡಿದಿದ್ದು ಸರಿಯಾಗಿಲ್ಲವೆಂದು ಮತ್ತೊಂದು ಹೊಟೇಲ್ನಲ್ಲಿ ಕೆ.ಟಿ. ಚಹಾ ಕುಡಿದಿದ್ದ. ಬಳಿಕ ರಿಕ್ಷಾದಲ್ಲಿ ತನ್ನ ಶೆಡ್ಗೆ ತೆರಳಿದ್ದ.
೩೮ ಸಾಕ್ಷಿದಾರರು
ವೃದ್ಧ ದಂಪತಿಯ ಹತ್ಯೆ ಆರೋಪಿಗೆ ಕಲಂ ೩೯೨ರಡಿಯ ಸುಲಿಗೆಗೆ ೧೦ ವರ್ಷಗಳ ಕಠಿನ ಸಜೆ ಹಾಗೂ ೧೦,೦೦೦ ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿಯಾಗಿ ೩ ತಿಂಗಳ ಕಠಿನ ಸಜೆ ಹಾಗೂ ೩೦೨ರಡಿಯ ಕೊಲೆಗೆ ಜೀವಾವಧಿ ಶಿಕ್ಷೆ ಮತ್ತು ೧೦,೦೦೦ ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ ೩ ತಿಂಗಳ ಕಠಿನ ಸಜೆ ವಿಧಿಸಿ ನ್ಯಾಯಾಧೀಶರು ತೀರ್ಪುನೀಡಿದ್ದಾರೆ. ಈ ಎರಡು ಶಿಕ್ಷೆಯನ್ನು ಪ್ರತ್ಯೇಕವಾಗಿ ಅನುಭವಿಸಲು ಆದೇಶಿಸಿದ್ದಾರೆ. ಅಂದಿನ ಪೊಲೀಸ್ ಉಪಾಧೀಕ್ಷಕ ರಾಹುಲ್ ಕುಮಾರ್ ಈ ಪ್ರಕರಣದ ಭಾಗಶಃ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ದೋಚಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಅನಂತರ ಡಿವೈಎಸ್ಪಿ ಭಾಸ್ಕರ್ ರೈ ಎನ್.ಜಿ. ತನಿಖೆ ನಡೆಸಿದ್ದರು. ೩೮ ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. ಪ್ರಾಸಿಕ್ಯೂಷನ್ ಪರವಾಗಿ ಹಿಂದಿನ ಸರಕಾರಿ ಅಭಿಯೋಜಕ ಶೇಖರ ಶೆಟ್ಟಿ ಕೆಲವು ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದರು. ೨೦೨೧ರಿಂದ ಉಳಿದ ಸಾಕ್ಷಿದಾರರನ್ನು ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.