ಇವಿಎಂ ಬೇಕು/ಬೇಡ: ಮತದಾರನ ಮನದಾಳವೇನು?

0

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಚಿಂತನೆ ನಡೆಸಿದೆ. ಈ ಚುನಾವಣೆಗಳಲ್ಲಿ ಕೂಡ ಮತದಾನ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಮೂಲಕ ನಡೆಸಬೇಕು ಎಂಬ ವಾದ ಅನೇಕ ವರ್ಷಗಳಿಂದ ಕೇಳಿಬರುತ್ತಲೇ ಇದೆ. ಪಂಚಾಯತ್ ಚುನಾವಣೆಗೆ ಇವಿಎಂ ಅಳವಡಿಸಲು ಆಯೋಗ ತಯಾರಿ ಮಾಡಿಕೊಂಡಿದ್ದರೂ, ಇವಿಎಂ ಬೇಡ ಎಂಬ ವಾದಗಳು ಹೆಚ್ಚಾಗಿ, ನಂತರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದನ್ನು ನಾವು ನೋಡಿzವೆ. ಕೇಂದ್ರ ಚುನಾವಣಾ ಆಯೋಗ ಕೂಡ ಇವಿಎಂ ಹ್ಯಾಕ್ ಸಾಧ್ಯವಿಲ್ಲ ಎಂದು ಅನೇಕ ಬಾರಿ ಪ್ರತಿಪಾದಿಸಿದೆ. ಈ ಬೆಳವಣಿಗೆಗಳ ಮಧ್ಯೆ ಜಿಲ್ಲಾ-ತಾಲೂಕು ಪಂಚಾಯತ್ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮೂಲಕವೇ ನಡೆಸುವುದಾಗಿ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ, ಕೆಲ ಜನಾಭಿಪ್ರಾಯಗಳು ಹೀಗಿವೆ…

ಮೋಸ ಗ್ಯಾರಂಟಿ !

ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಇರಬೇಕು ಎಂದು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಹೇಳುತ್ತಿದೆ. ಆದರೆ ಬ್ಯಾಲೆಟ್ ಪೇಪರ್ ನಲ್ಲಿ ಮೋಸವಾಗುವುದು ಗ್ಯಾರಂಟಿ. ನನ್ನ ಪ್ರಕಾರ ಇವಿಎಂ (ವಿದ್ಯುನ್ಮಾನ ಮತಯಂತ್ರ) ಇರಬೇಕು. ಅದೇ ಒಳ್ಳೆಯದು. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ನೆರವಾಗಲಿದೆ. ಬ್ಯಾಲೆಟ್ ಬಂದರೆ ವೋಟ್ ಎಕ್ಚೇಂಜ್ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ನಮ್ಮ ವ್ಯವಸ್ಥೆಗೆ ಇ.ವಿ.ಎಂ ಅತ್ಯಂತ ಸೂಕ್ತ
-ಶಾಂತಿ, ಬೆಳ್ತಂಗಡಿ

ಇವಿಎಂ ಹ್ಯಾಕ್ ಸಾಧ್ಯತೆ

ಬ್ಯಾಲೆಟ್ ವ್ಯವಸ್ಥೆಗೆ ನನ್ನ ಬೆಂಬಲ. ಮುಂಚೆ ಈ ವ್ಯವಸ್ಥೆಯಿತ್ತು. ಮತದಾನದ ಲೆಕ್ಕಾಚಾರದ ವೇಳೆ ಸಿಬ್ಬಂದಿಗೆ ಕಷ್ಟವಾಗುತ್ತದೆ ಎಂಬುದು ವಿಷಯವೇ ಅಲ್ಲ. ಇವಿಎಂನ್ನು ಹ್ಯಾಕ್ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಬ್ಯಾಲೆಟ್ ಪೇಪರ್‌ನ್ನು ಮುಂದುವರಿಸುವುದೇ ಸೂಕ್ತ. – ಅನೂಪ್, ಮಂಜೊಟ್ಟಿ

ಶಿಕ್ಷಣ ಇಲ್ಲದವರಿಗೂ ಅನುಕೂಲ

ಇ.ವಿ.ಎಂ.ನಲ್ಲೂ ಅಕ್ರಮ ಆಗುತ್ತಿದೆ ಎನ್ನಲಾಗುತ್ತಿದೆ. ಆದರೆ ಈ ಆರೋಪಗಳಿಗೆ ಸೂಕ್ತ ದಾಖಲೆಗಳಿಲ್ಲ. ಇವಿಎಂನಿಂದ ಸಮಯ ಉಳಿಯುತ್ತದೆ. ಮೇಲಾಗಿ, ಶಿಕ್ಷಣ ಇಲ್ಲದವರಿಗೂ ಇವಿಎಂ ಮಿಷೀನ್‌ನಲ್ಲಿ ವೋಟು ಹಾಕುವುದು ಸುಲಭದ
ವಿಷಯ. -ಉಷಾ, ಉಜಿರೆ

ಹಳೆ ವ್ಯವಸ್ಥೆಯ ಅಗತ್ಯವಿಲ್ಲ

ಇಂದಿನ ಕಾಲಘಟ್ಟಕ್ಕೆ ಇವಿಎಂ ಸೂಕ್ತ ಆಯ್ಕೆ. ಇವಿಎಂ ಸುರಕ್ಷಿತವೂ ಹೌದು. ಸುಮ್ಮನೆ ಹಳೆ ವ್ಯವಸ್ಥೆ ನಂಬಿಕೊಂಡು ಹಿಂದೆ ಸರಿಯುವುದು ಸರಿಯಲ್ಲ. ನೇರವಾಗಿ ಪೇಪರ್‌ನಲ್ಲಿ ವೋಟ್ ಹಾಕಿದರೂ, ಅದು ಕಳೆದು ಹೋಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ? ಇದಕ್ಕಿಂತ, ಸುಧಾರಿತ ವಿಧಾನವನ್ನು ಮತದಾನದ ಪ್ರಕ್ರಿಯೆಗೆ ಜಾರಿಗೆ ತಂದರೂ ನನಗೆ ಒಪ್ಪಿಗೆ ಇದೆ.
– ವಿಜೇತ್ ಬೆಳ್ತಂಗಡಿ, ಎಸ್ಡಿಎಂ ಕಾಲೇಜು ಉಜಿರೆ

ಸೋತ ಕಾರಣಕ್ಕೆ ವಿರೋಧ ಸಲ್ಲದು

ಬೇರೆ ದೇಶದಲ್ಲಿಯೂ ಈಗ ಮತದಾನಕ್ಕಾಗಿ ಇ.ವಿ.ಎಂ ಚಾಲ್ತಿಯಲ್ಲಿದೆ. ಮೊದಲು ಇ.ವಿ.ಎಂ.ನ್ನು ಕಾಂಗ್ರೆಸ್‌ನವರೇ ಪರಿಚಯಿಸಿದ್ದರಾದರೂ, ಈಗ ಚುನಾವಣೆಗಳನ್ನು ಸೋಲುತ್ತಿದ್ದೇವೆ ಎಂಬ ಕಾರಣಕ್ಕಾಗಿ ಇವಿಎಂನ್ನು ವಿರೋಧಿಸುವುದು ಸರಿಯಲ್ಲ. ಇ.ವಿ.ಎಂ ಹ್ಯಾಕ್ ಆಗುತ್ತದೆ ಎಂದು ವಿಪಕ್ಷಗಳು ವಿರೋಧಿಸಿದಾಗ, ಕೇಂದ್ರ ಚುನಾವಣಾ ಆಯೋಗ ಎಲ್ಲಾ ರೀತಿಯ ಟೆಸ್ಟ್‌ಗಳನ್ನು ನಡೆಸಿ, ಇಲ್ಲಿ ಹ್ಯಾಕಿಂಗ್ ಸಾಧ್ಯವಿಲ್ಲ ಎಂದು ವಿವರಿಸಿದೆ. ಬ್ಯಾಲೆಟ್ ಬಾಕ್ಸ್‌ಗಳನ್ನು ಎತ್ತಿಕೊಂಡು ಹೋಗುವ ಸಾಧ್ಯತೆ ಇದೆ. ಇದರಲ್ಲಿಯೂ ಮೋಸ ಸಾಮಾನ್ಯ. ಕಾಂಗ್ರೆಸ್ ಚುನಾವಣೆ ಗೆಲ್ಲಲಿಲ್ಲ ಎಂದಾಕ್ಷಣ ಇವಿಎಂನ್ನು ವಿರೋಧಿಸುವುದು ಸೂಕ್ತವಲ್ಲ.
ಹೆಚ್.ಸತೀಶ್‌ಚಂದ್ರ, ವಕೀಲರು, ಚಿಬಿದ್ರೆ, ಕಕ್ಕಿಂಜೆ

ಸಮಯ ತೆಗೆದುಕೊಂಡರೂ, ಬ್ಯಾಲೆಟ್ ಉತ್ತಮ.

ಬ್ಯಾಲೆಟ್ ಪೇಪರ್‌ನಲ್ಲಿ ಏನೂ ಹೆಚ್ಚು ಕಮ್ಮಿಯಾಗದು. ಯಾವುದೇ ಮೋಸ ಆಗುವುದಿಲ್ಲ ಎಂದು ನಾನು ನಂಬಿದ್ದೇನೆ. ಎಂತೆಂಥಾ ಡೇಟಾಗಳೇ ಹ್ಯಾಕ್ ಆಗುತ್ತವಂತೆ. ಇವಿಎಂ ಯಾವ ಲೆಕ್ಕ? ಬ್ಯಾಲೆಟ್ ವ್ಯವಸ್ಥೆ ಜಾಸ್ತಿ ಸಮಯ ತೆಗೆದುಕೊಂಡರೂ, ಅದೇ ಉತ್ತಮ. – ಅಬೂಬಕ್ಕರ್, ಉಜಿರೆ

ಇವಿಎಂ ಮುಂದುವರಿಯಲಿ
ಟೆಕ್ನಾಲಜಿ ಬೆಳೆದಂತೆ ನಾವು ಹಿಂದೆ ಹೋಗುವುದು ಸರಿಯಲ್ಲ. ನಾವು ಹಿಂದೆ ಸರಿದರೆ ದೇಶ ಮುಂದುವರೆಯುವುದು ಹೇಗೆ? ಈಗ ಇ.ವಿ.ಎಂ ಮುಂದುವರಿಯಬೇಕು. ಚುನಾವಣೆ ಸೋತ ರಾಜ್ಯಗಳಲ್ಲಿ ಇವಿಎಂ ಬೇಡ ಎನ್ನಲಾಗುತ್ತಿದೆ. ಗೆದ್ದ ಪ್ರದೇಶಗಳಲ್ಲಿ ಇವಿಎಂ ಬೇಡ ಎಂಬ ವಾದಗಳೇ ಕೇಳಿಬರುತ್ತಿಲ್ಲ! ಹೇಗೆ ಯೋಚಿಸಿದರೂ ಬ್ಯಾಲೆಟ್‌ಗಿಂತ ಇ.ವಿ.ಎಂ. ಉತ್ತಮ. ಇನ್ನೂ ಮುಂದುವರೆದರೆ, ಮನೆಯಿಂದ ವೋಟಿಂಗ್ ಮಾಡುವ ವ್ಯವಸ್ಥೆಯಿದ್ದರೆ ಬೆಸ್ಟ್. ವಯಸ್ಸಾದವರಿಗೂ ಹಾಗೂ ಒತ್ತಡದ ನಡುವೆಯು, ದೂರದೂರಿನಿಂದ ಬಂದು ವೋಟ್ ಹಾಕುವವರಿಗೂ ಇದು ಸಹಾಯವಾಗುತ್ತದೆ. ನಾವು ಮುಂದುವರೆಯಬೇಕೇ ಹೊರತು ಹಿಂದೆ ಹೋಗಬಾರದು. ಈ ವಾದ-ಪ್ರತಿವಾದ ಹೇಗಿದೆಯೆಂದರೆ; ೧೮ ವರ್ಷದ ನಂತರ ಮದುವೆ ಆಗುವುದು ಒಳ್ಳೆಯದಾ ಅಥವಾ ಬಾಲ್ಯ ವಿವಾಹ ಒಳ್ಳೆಯದಾ ಎಂಬಂತಿದೆ!
-ಶಿವಯ್ಯ ಎಸ್. ಎಲ್. ವಕೀಲರು, ಬೆಳ್ತಂಗಡಿ.

ಇವಿಎಂನಿಂದ ಸಮಯದ ಉಳಿತಾಯ

ಬ್ಯಾಲೆಟ್ ಪೇಪರ್ ಬೇಕು ಎನ್ನುವ ಸರ್ಕಾರದ ವಾದದಲ್ಲಿ ಸ್ವಾರ್ಥ ಎದ್ದು ಕಾಣುತ್ತಿದೆ. ಇ.ವಿ.ಎಂ ವ್ಯವಸ್ಥೆ ಜಾರಿ ಮಾಡುವ ಬದಲು ಬ್ಯಾಲೆಟ್ ಪೇಪರ್‌ಗೆ ಜೋತು ಬೀಳುವುದರಲ್ಲಿ ಅರ್ಥವಿಲ್ಲ. ಗೆದ್ದಾಗ ಇವಿಎಂ ಬೇಕೆಂದು ಸೋತಾಗ ಬೇಡವೆನ್ನುವುದು ಸ್ವಾರ್ಥವಲ್ಲದೆ ಮತ್ತೇನಲ್ಲ. ಕರ್ನಾಟಕದಲ್ಲಿ ಮಾತ್ರ ಇವಿಎಂ ಬೇಡ ಎನ್ನುವವರು ಬೇರೆ ಕಡೆ ಬೇಕೆಂದು ಹೇಳುತ್ತಿದ್ದಾರೆ. ಹಾಗಿದ್ದರೆ ದೆಹಲಿಯಲ್ಲಿಯೂ ಬ್ಯಾಲೆಟ್ ಪೇಪರನ್ನು ತರಲು ಪ್ರಯತ್ನಿಸಬಹುದಿತ್ತು. ನಮ್ಮ ಕರ್ನಾಟಕದಲ್ಲಷ್ಟೇ ಯಾಕೆ? ಬ್ಯಾಲೆಟ್ ಪೇಪರ್‌ನಿಂದ ಸಮಯ ವ್ಯರ್ಥ. ಇವಿಎಂ ಇದ್ದರೆ ಸುಲಭ ಹಾಗೂ ಸಮಯವೂ ಉಳಿಯುತ್ತದೆ – ರಾಧಾಕೃಷ್ಣ ಮಯ್ಯ ಬೆಳ್ತಂಗಡಿ

ಬ್ಯಾಲೆಟ್‌ನಿಂದ ಸ್ಪಷ್ಟತೆ

ಇವಿಎಂ ಮಷೀನ್‌ನಲ್ಲಿ ಅಷ್ಟು ಸ್ಪಷ್ಟವಾಗಿ ತಿಳಿಯುವುದಿಲ್ಲ. ಅದೇ ಬ್ಯಾಲೆಟ್‌ನಲ್ಲಿ ವೋಟ್ ಮಾಡುವ ವ್ಯವಸ್ಥೆಯಿದ್ದರೆ, ಸ್ಪಷ್ಟತೆ ಇರುತ್ತದೆ. ನನ್ನ ಪ್ರಕಾರ ಬ್ಯಾಲೆಟ್ ಪೇಪರ್ ಆಗಬಹುದು

ರೂಪ, ಚಿಕ್ಕಮಂಗಳೂರು

ಇವಿಎಂ ಬಗ್ಗೆ ಭರವಸೆ ಇಲ್ಲ

ಜನ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಭರವಸೆ ಕಳೆದುಕೊಂಡಿದ್ದಾರೆ. ಇ.ವಿ.ಎಂ ಬಗೆಗಿನ ಸಂಶಯ ನಿವಾರಣೆಯಾಗಬೇಕು. ಸರಿಯಾದ ದಾಖಲೆ ಇಲ್ಲದೆ ಅದು ಸರಿಯಿದೆ ಎಂದು ನಂಬುವುದು ಕಷ್ಟಕರ. ಎಷ್ಟೇ ಸರಿಯಿದೆ ಎಂದು ಸಮರ್ಥಿಸಿದರೂ ಅನುಮಾನ ಮುಂದುವರಿದಿದೆ. ನಮ್ಮ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಬಹುದಾದ ಸಾಧ್ಯತೆ ಇರುವಾಗ, ಇವಿಎಂನ್ನು ನಂಬುವುದು ಹೇಗೆ? – ಅಬ್ದುಲ್ ಹಮೀದ್, ಬೆಳ್ತಂಗಡಿ

ಹೊಸ ತಂತ್ರಜ್ಞಾನವೇ ಸೂಕ್ತ
ವಿ.ಎಂ ಸೂಕ್ತ. ಮೋಸ ಆಗುವುದಿದ್ದರೆ, ಇ.ವಿ.ಎಂ., ಬ್ಯಾಲೆಟ್ ಎರಡರಲ್ಲೂ ಆಗಬಹುದು. ಹೊಸ ತಂತ್ರಜ್ಞಾನದತ್ತ ತೆರಳುವ ಬದಲು, ಬ್ಯಾಲೆಟ್ ಬೇಕು ಎನ್ನುವುದು ಸರಿಯಲ್ಲ. ಟೆಕ್ನಾಲಜಿ ಮುಂದುವರೆದಂತೆ ನಾವು ಮುಂದುವರೆಯಬೇಕು.

ಸಂಜೀವ, ಉಜಿರೆ

LEAVE A REPLY

Please enter your comment!
Please enter your name here