ಬೆಳ್ತಂಗಡಿ: ತಾಲೂಕಿನ ಕೊಕ್ಕಡಕ್ಕೆ ಸನಿಹದಲ್ಲಿರುವ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸೌತಡ್ಕ. ಈ ಬಯಲು ದೇವಾಲಯದಲ್ಲಿರುವ ವಿಘ್ನ ನಿವಾರಕ ಗಣೇಶನ ದರ್ಶನಕ್ಕಾಗಿ ಅಸಂಖ್ಯಾತ ಭಕ್ತರು ವರ್ಷಪೂರ್ತಿ ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಈಚಿನ ವರ್ಷಗಳಲ್ಲಿ ಸೌತಡ್ಕಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿದ್ದು, ಕ್ಷೇತ್ರದ ಪ್ರಸಿದ್ಧಿ ವಿಸ್ತರಿಸುತ್ತಲೇ ಇದೆ.
ದುರದೃಷ್ಟವಶಾತ್ ದೇಗುಲದ ವ್ಯವಸ್ಥಾಪನಾ ಸಮಿತಿಯಲ್ಲಿದ್ದ ಎರಡು ಬಣಗಳ ಸದಸ್ಯರ ನಡುವಿನ ಆರೋಪ/ಪ್ರತ್ಯಾರೋಪಗಳು, ಶಂಕಿತ ಭ್ರಷ್ಟಾಚಾರ, ಹಗರಣಗಳ ಸದ್ದು ಭಕ್ತರಲ್ಲಿ ಗೊಂದಲ ಮೂಡಿಸಿರುವುದಲ್ಲದೆ, ಸೌತಡ್ಕದ ಒಟ್ಟಾರೆ ವರ್ಚಸ್ಸಿಗೆ ಹಾನಿ ಮಾಡುತ್ತಿದೆ. ಸರ್ಕಾರ ಕೂಡ ಬಿಕ್ಕಟ್ಟು, ಸಂಘರ್ಷಗಳನ್ನು ಕೊನೆಗೊಳಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ದೇಗುಲದಂಗಳದಲ್ಲಿ ಎದ್ದುಕಾಣುತ್ತಿರುವ ಸಂಘರ್ಷಕ್ಕೆ ಕೊನೆ ಇಲ್ಲವೇ? ಭಕ್ತರ ವಿಘ್ನ ನಿವಾರಿಸುವ ಗಣಪನೂ ಮೌನವಾಗಿರುವುದೇಕೆ ಎಂದು ಸ್ಥಳೀಯ ಆಸ್ತಿಕ ಭಕ್ತಗಣ ಮಾತನಾಡಿಕೊಳ್ಳುತ್ತಿದೆ.
ಈ ನಡುವೆ, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಪ್ರಶಾಂತ್ ಪೂವಾಜೆ, ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ವ್ಯ.ಸಮಿತಿಯ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯ ವಿಶ್ವನಾಥ್ ಪೂಜಾರಿ ಕೊಲ್ಲಾಜೆ, ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ, ಸಿನಿ ಗುರುದೇವ್ ಸೇರಿ ಒಟ್ಟು ಐವರನ್ನು ಸಮಿತಿಗೆ ಮರು ಆಯ್ಕೆ ಮಾಡಬಾರದು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅಧ್ಯಕ್ಷ, ದತ್ತಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಇಲಾಖೆ ಆಯುಕ್ತರು ಹಾಗೂ ೮ ಮಂದಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಿಗೆ ಲಿಖಿತ ದೂರು ನೀಡಿದ್ದಾರೆ.
ಭಕ್ತರು ದೇವರಿಗೆ ಸಮರ್ಪಿಸಿದ್ದ ಹರಕೆ ಗಂಟೆಗಳ ಹರಾಜಿನಲ್ಲಿ ಅಕ್ರಮ ನಡೆದಿದೆ ಎನ್ನುವುದು ಪ್ರಶಾಂತ್ ಪೂವಾಜೆ ಆರೋಪ. ಮೇಲಾಗಿ, ೧೯ ವಷ ದೇವಳದ ಸಮಿತಿ ಸದಸ್ಯರಾಗಿದ್ದ ವಿಶ್ವನಾಥ್ ಪೂಜಾರಿ, ಪ್ರತಿ ಹುಂಡಿ ಎಣಿಕೆ ಮಾಡುವ ವೇಳೆ ಸ್ವಲ್ಪ-ಸ್ವಲ್ಪ ಹಣ ತೆಗೆದಿರಿಸಿ, ತಮ್ಮ ಆಸ್ತಿ ಖರೀದಿಯ ಸಾಲ ಮರು ಪಾವತಿ ಮಾಡಿದ್ದಾರೆ. ಈ ಬಗ್ಗೆ ಮರು ತನಿಖೆ ಆಗಬೇಕು. ಐವರ ವಿರುದ್ಧ ಗಂಭೀರ ಆರೋಪಗಳಿರುವುದರಿಂದ ನೂತನ ಸಮಿತಿಗೆ ಸೇರಿಸುವುದು ಸರಿಯಲ್ಲ ಎಂದು ಪೂವಾಜೆ ಆಕ್ಷೇಪಿಸಿದ್ದಾರೆ.
ಪೂವಾಜೆ ಆರೋಪಗಳ ಬಗ್ಗೆ ಸುದ್ದಿ ಬಿಡುಗಡೆಗೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್ ಪೂಜಾರಿ, “ನನ್ನ ಮೇಲೆ ಈ ಹಿಂದೆಯೂ ಇಂಥz ಆರೋಪಗಳನ್ನು ಮಾಡಿದ್ದರು. ಕಾಸರಗೋಡಿನ ಕಾನತ್ತೂರಿನ ದೈವಸ್ಥಾನಕ್ಕೆ ಬಂದು ಆಣೆ/ಪ್ರಮಾಣ ಮಾಡುವುದಕ್ಕೆ ಆಹ್ವಾನಿಸಿದ್ದೆ. ಆದರೆ, ಅವರ್ಯಾರೂ ಬರಲಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ದೇವರ ಮುಂದೆ ಪ್ರಾರ್ಥನೆ ಮಾಡಿದೆ. ಮತ್ತೊಮ್ಮೆ ಮಾಡಲೂ ಸಿದ್ಧ. ನಾನು ಹೇಳುತ್ತಿರುವುದು ಗಣಪತಿ ದೇವರಾಣೆಯಾಗಿಯೂ ಸತ್ಯ” ಎಂದು ಹೇಳಿದ್ದಾರೆ.
ಪೂವಾಜೆ ಆರೋಪಗಳ ಪಟ್ಟಿ: ೨೦೧೭ರಿಂದ ೨೦೨೦ನೇ ಸಾಲಿನ ವ್ಯವಸ್ಥಾಪನಾ ಸಮಿತಿ, ಸೌತಡ್ಕ ದೇಗುಲದ ಗಣೇಶ ಕಲಾ ಮಂದಿರದ ಬಲ ಭಾಗದಲ್ಲಿದ್ದ ಹಣ್ಣು ಕಾಯಿ, ಗಂಟೆ ಅಂಗಡಿ, ಅವಲಕ್ಕಿ ಪಂಚಕಜ್ಜಾಯ ತಯಾರಿ ಟೆಂಡರ್, ಸಿಸಿಟಿವಿ ಕ್ಯಾಮರಾ ಅಳವಡಿಕೆ-ನಿರ್ವಹಣೆಯಲ್ಲಿ ಅವ್ಯವಹಾರ ಮಾಡಿದೆ. ಇದರಿಂದ ದೇಗುಲದ ಬೊಕ್ಕಸಕ್ಕೆ ನಷ್ಟ ದೇವರಿಗೆ ಕಂಚಿನ ಗಂಟೆಗಳಿಂದ ಪಂಚಲೋಹದ ಪ್ರಭಾವಳಿಗೆ ತಯಾರಿ ಮಜೂರಿ ಸೇರಿ ಸುಮಾರು ೧೭೦ ಕೆ.ಜಿ. ತೂಕದ ಪ್ರಭಾವಳಿಗೆ ೩೬೫೦ ಕೆ.ಜಿ. ಗಂಟೆಗಳನ್ನು ನೀಡಿದ ಬಗ್ಗೆ ಅನುಮಾನವಿದೆ. ಗಂಟೆ ಹಗರಣದ ವ್ಯತ್ಯಾಸ ಸರಿದೂಗಿಸಲು, ಸಮಿತಿಯ ಎಲ್ಲಾ ಸದಸ್ಯರು ನೀಡಿದ್ದ ತನಿಖಾ ಹೇಳಿಕೆ ಅನುಮಾನಗಳಿಗೆ ಪುಷ್ಟಿ ತುಂಬಿದೆ. ದೇವಳದ ಗಂಟೆ ಹರಾಜು ಪ್ರಕ್ರಿಯೆ ಹಗರಣದ ತನಿಖೆಯನ್ನು ದತ್ತಿ ಇಲಾಖೆಯ ಸಹಾಯಕ ಆಯುಕ್ತರು ನಡೆಸಿದ್ದರು.
ಅವರ ತನಿಖಾ ವರದಿಗೆ ಭಿನ್ನವಾಗಿ ದೇವಾಲಯದಿಂದ ಸಂದಾಯ ಮಾಡಿದ ಮೊತ್ತದ ದಿನಾಂಕ ಮತ್ತು ಇಲಾಖಾ ಪ್ರತಿಬಂಧ ಪುಟದಲ್ಲಿರುವ ದಿನಾಂಕಕ್ಕೂ ವ್ಯತ್ಯಾಸವಿದೆ. ಒಟ್ಟು ಗಂಟೆಗಳ ತೂಕದ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಲಾಗಿತ್ತು. ಆದರೆ ಪ್ರಶ್ನೆಗಳಿಗೆ ವ್ಯತಿರಿಕ್ತ ಮಾಹಿತಿ ನೀಡಿದ್ದಾರೆ. ಇಲ್ಲಿಯೂ ಅಕ್ರಮದ ಸಂಶಯ ಮೂಡಿದೆ. ದೇವಸ್ಥಾನದ ಸಿ.ಸಿ.ಟಿವಿ ಕ್ಯಾಮರಾದ ಡಿ.ವಿ.ಆರ್.ನ ಯೂಸರ್ ನೇಮ್ ಮತ್ತು ಪಾಸ್ವರ್ಡ್ನ್ನು ಸಿ.ಸಿ.ಕ್ಯಾಮರಾ ನಿರ್ವಹಣೆ ಮಾಡುತ್ತಿದ್ದವರು ತಮ್ಮ ಸ್ವಂತ ಹೆಸರಿನಲ್ಲಿ ಲಾಗಿನ್ ಮಾಡಿದ್ದರು. ಗಂಟೆಗಳ ವಿಲೇವಾರಿ ಸಂದರ್ಭದಲ್ಲಿ ಸಿ.ಸಿ. ಕ್ಯಾಮರಗಳ ವೀಡಿಯೋ ದಾಖಲೆಗಳನ್ನು ಶಾಸಕರ ವಿಧಾನ ಸಭೆ ಹೇಳಿಕೆಯ ನಂತರವೂ ಸಂಗ್ರಹಿಸದಿರುವುದು ಅನುಮಾನಕ್ಕೆಡೆ ಮಾಡಿದೆ.
ಶಾಸಕರ ವಿಧಾನ ಸಭಾ ಚರ್ಚೆಯ ದಿನದ (೧೧.೦೩.೨೦೨೦) ೨೯ ದಿನದ ಹಿಂದಿನ ಅಂದರೆ ಸುಮಾರು ೨೦೨೦ರ ಫೆ.೧೦ರ ನಂತರದ ಗಂಟೆ ವಿಲೇವಾರಿ ವೀಡಿಯೋ ಇಲ್ಲದಿರುವುದು ಇನ್ನ? ಅನುಮಾನಕ್ಕೆ ಕಾರಣವಾಗಿದೆ. ತಿಂಗಳೊಂದಕ್ಕೆ ರೂ. ೧೦,೦೦೦ದಂತೆ ಸಿ.ಸಿ.ಕ್ಯಾಮರ ನಿರ್ವಹಣೆ ಬಾಬ್ತು ಅರುಣಾ ಕಂಪ್ಯೂಟರ್ನ ಪ್ರಶಾಂತ್ ಸಿ.ಹೆಚ್. ಅವರಿಗೆ ದೇವಸ್ಥಾನದಿಂದ ನೀಡಲಾಗಿದೆ. ಗಂಟೆ ಹಗರಣ ನಡೆದ ೨೦೧೯ರ ಸಾಲಿನಲ್ಲಿ ಸಿ.ಸಿ. ಕ್ಯಾಮರ ನಿರ್ವಹಣೆ ಬಾಬ್ತು ತಿಂಗಳಿಗೆ ರೂ.೧೦,೦೦೦ದಂತೆ ನೀಡಿದ ದಾಖಲೆಗಳನ್ನೇ ನೀಡದಿರುವುದು ಹಗರಣದಲ್ಲಿ ಅರುಣಾ ಕಂಪ್ಯೂಟರ್ನ ಪ್ರಶಾಂತ್ ಸಿ.ಹೆಚ್. ಭಾಗಿಯಾದ ಬಗ್ಗೆ ಅನುಮಾನ ಸೃಷ್ಟಿಸಿದೆ. ಸೌತಡ್ಕ ಸಂರಕ್ಷಣಾ ವೇದಿಕೆ ಹೆಸರಿನಲ್ಲಿ ಹೋರಾಟ ಮಾಡುತ್ತಿರುವ ಸುಬ್ರಹ್ಮಣ್ಯ ಶಬರಾಯ ಮತ್ತು ಪ್ರಶಾಂತ್ ರೈ ಅವರಿಗೆ ಗೊತ್ತಿರುವ ವಿಶ್ವನಾಥ ಕೊಲ್ಲಾಜೆ, ರಾಘವ ಕೊಲ್ಲಾಜೆ, ಮತ್ತು ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್(ರಿ)ನ ಇವರ ಸರ್ವೆ ನಂಬರ್ ಮತ್ತು ಇನ್ನೊಂದು ಸರ್ವೆ ನಂಬರಿನಲ್ಲಿರುವ ೧.೨೩ ಎಕರೆ ಭೂಮಿಯನ್ನು ಯಾರ ಹೆಸರಿಗೆ ನೋಂದಾಯಿಸಿಕೊಂಡಿರುತ್ತಾರೆ ಎಂಬ ಬಗ್ಗೆ ತನಿಖೆಯಾಗಬೇಕು.
ಸುಬ್ರಹ್ಮಣ್ಯ ಶಬರಾಯರ ಮೇಲಿನ ಆರೋಪ: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಸೀಮೆ ದೇವಸ್ಥಾನದಲ್ಲಿ ೨೦೦೪ರಿಂದ ೨೦೦೯ರ ಏಪ್ರಿಲ್ವರೆಗೆ ಆಡಳಿತ ನಡೆಸಿದ್ದ ಸುಬ್ರಹ್ಮಣ್ಯ ಶಬರಾಯ ಅವರು ಯಾವುದೇ ದಾಖಲೆಗಳನ್ನು ನೀಡದೇ ದೇವಾಲಯದ ಬ್ಯಾಂಕ್ ಬ್ಯಾಲೆನ್ಸ್ ಕೇವಲ ೯೪೨೭.೨೫ ಪೈಸೆ ಜಮೆ ಎಂದು ತೋರಿಸಿದ್ದರು. ನಂತರ ತಹಶೀಲ್ದಾರರ ಆಡಳಿತದಲ್ಲಿ ಒಂದೇ ವರ್ಷದಲ್ಲಿ ರೂ. ೨,೮೦,೬೩೫ ಬ್ಯಾಂಕ್ ಬ್ಯಾಲೆನ್ಸ್ ಬಂದಿದ್ದು, ಮುಂದಿನ ವರ್ಷದಲ್ಲಿ ೫,೩೧,೯೯೮ ರೂ ಬ್ಯಾಂಕ್ ಬ್ಯಾಲೆನ್ಸ್ ದಾಖಲಾಗಿದೆ. ಹೀಗಾಗಿ, ಈ ಕುರಿತೂ ಅನುಮಾನ ಮೂಡಿದೆ.
ಈ ಸಂಬಂಧ ದಿನಾಂಕ ೧೪.೦೨.೨೦೧೫ರಂದು ಭಕ್ತರು ನೀಡಿದ ದೂರಿನಂತೆ ೨೯.೧೦.೨೦೧೫ರಂದು ದತ್ತಿ ಇಲಾಖೆ ಮಂಗಳೂರಿನ ಸಹಾಯಕ ಆಯುಕರಿಗೆ ಸೂಕ್ತ ಕ್ರಮ ಜರುಗಿಸಿ ಕ್ರಮ ಕೈಗೊಳ್ಳಬೇಕೆಂದು ದಕ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ೧೦.೦೮.೨೦೧೬ರಂದು ಎ.ಎನ್. ಶಬರಾಯ ಹುರುಳಿ ಮಜಲು, ಕೊಕ್ಕಡ ಎಂಬವರು ಕರ್ನಾಟಕ ಧಾರ್ಮಿಕ ಸಂಸ್ಥೆಗಳ ಕಾರ್ಯದರ್ಶಿ ಮತ್ತು ಆಯುಕ್ತರಿಗೆ, ಸೌತಡ್ಕ ದೇಗುಲದ ವ್ಯವಸ್ಥಾಪನಾ ಸಮಿತಿಗೆ ಬರೆದು, ಸುಬ್ರಹ್ಮಣ್ಯ ಶಬರಾಯ ಮತ್ತು ವಿಶ್ವನಾಥ ಶೆಟ್ಟಿಯವರನ್ನು ಆಯ್ಕೆ ಮಾಡುವುದಕ್ಕೆ ಆಕ್ಷೇಪ ಸಲ್ಲಿಸಿದ್ದಾರೆ ಎಂದು ಪೂವಾಜೆ ವಿವರಣೆ ನೀಡಿದ್ದಾರೆ.