ಉಜಿರೆ: ಭಾರತದ ಸಂವಿಧಾನಿಕ ಶ್ರೇಷ್ಠತೆ, ವೈವಿಧ್ಯಮಯ ಸಾಂಸ್ಕೃತಿಕ ವೈವಿಧ್ಯ, ವೈಜ್ಞಾನಿಕ, ತಾಂತ್ರಿಕ ಸಾಧನೆಯ ಮೈಲಿಗಲ್ಲುಗಳೊಂದಿಗಿನ ವಿನೂತನ ಅಸ್ಮಿತೆ ಮತ್ತು ವಿವಿಧ ಕ್ಷೇತ್ರಗಳ ಮಹತ್ವದ ಕೊಡುಗೆಗಳ ವಿಶೇಷತೆಯನ್ನು ಅನಾವರಣಗೊಳಿಸುವ ಕಲಾತ್ಮಕ ಅಭಿವ್ಯಕ್ತಿ ಮತ್ತು ಸ್ತಬ್ಧಚಿತ್ರ ಪ್ರದರ್ಶನದೊಂದಿಗೆ ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು 76ನೇ ಗಣರಾಜ್ಯೋತ್ಸವದ ಸಂಭ್ರಮವನ್ನು ವಿನೂತನಗೊಳಿಸಿದರು.
ಉಜಿರೆಯ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸ್ಥಳೀಯ ಎಸ್.ಡಿ.ಎಂ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಯ ಸಮ್ಮುಖದಲ್ಲಿ ಕರ್ನಲ್ ನಿತಿನ್ ಭಿಡೆ (ನಿವೃತ್ತ) ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಸತೀಶ್ಚಂದ್ರ ಎಸ್. ಉಪಸ್ಥಿತರಿದ್ದರು.
ಬಳಿಕ ನಡೆದ ಟ್ಯಾಬ್ಲೊ ಪ್ರದರ್ಶನವು, ಮಹಿಳೆಯರು ವಿವಿಧ ರಂಗಗಳಲ್ಲಿ ಸಾಧಿಸಿದ ವಿಶೇಷ ಹೆಜ್ಜೆಗಳು, ಉಜಿರೆಯ ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯ, ಹಾಲಕ್ಕಿ ನುಡಿಯ ಮೌಲಿಕತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆ, ನ್ಯಾಯ ಪರಿಕಲ್ಪನೆಗಳನ್ನು ಕಾಯಕಪ್ರಜ್ಞೆಯೊಂದಿಗೆ ಸಮೀಕರಿಸಿದ ಕಲಾತ್ಮಕತೆ, ಕರಾವಳಿ ಸಂಸ್ಕೃತಿಯ ವಿಶಿಷ್ಟ ಗುಣಲಕ್ಷಣಗಳು, ವೀರಗಾಸೆ ನೃತ್ಯ, ಕರ್ನಾಟಕ ಜನಪದ ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನದೊಂದಿಗಿನ ಅಭ್ಯುದಯದ ಮಹತ್ವದ ಹಂತಗಳು ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಧಾನ ಆಶಯವನ್ನು ಧ್ವನಿಸಿತು.
ಎಸ್.ಡಿ.ಎಂ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮೊದಲ ಬಹುಮಾನಕ್ಕೆ ಪಾತ್ರರಾದರು. ಎಸ್.ಡಿ.ಎಂ. ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆದರು.
ಖ್ಯಾತ ಗಾಯಕ ಸಿ. ಅಶ್ವತ್ಥ್ ಗಾಯನದ “ಸ್ತ್ರೀ ಎಂದರೆ ಅಷ್ಟೇ ಸಾಕೇ..” ಹಾಡಿನ ಹಿನ್ನೆಲೆಯೊಂದಿಗೆ ಮಹಿಳೆಯರ ಯಶೋಗಾಥೆಯನ್ನು ಕಾಣಿಸಿದ ಎಸ್.ಡಿ.ಎಂ ಮಹಿಳಾ ಐಟಿಐ ಉಜಿರೆಯ ಪ್ರದರ್ಶನ ವಿಶೇಷವಾಗಿತ್ತು. ರತ್ನಮಾನಸ ಜೀವನ ಶಿಕ್ಷಣಕ್ಕಿರುವ ಶ್ರಮಸಂಸ್ಕೃತಿ ಮತ್ತು ವಿದ್ಯಾ ಸಂಸ್ಕಾರದ ಆಯಾಮದ ಅಭಿವ್ಯಕ್ತಿಯು ಕಂಗೊಳಿಸಿತು.
ಇಸ್ರೋ ಸಂಸ್ಥೆಯ ಉಪಗ್ರಹ ಉಡಾವಣೆಯ ತಾಂತ್ರಿಕ ನೈಪುಣ್ಯದ ಪ್ರಾತ್ಯಕ್ಷಿಕೆಯೂ ಮನಸೆಳೆಯಿತು. ಸೈನಿಕರ ತ್ಯಾಗ ಮತ್ತು ಬಲಿದಾನದ ಪ್ರಮುಖತೆಯನ್ನು ಕಾಣಿಸುತ್ತಾ ಭಾರತಮಾತೆಯ ಮಡಿಲಲ್ಲಿ ಪ್ರಜೆಗಳೆಲ್ಲರೂ ಸೌಹಾರ್ದದಿಂದ ಬದುಕುವ ಸೌಂದರ್ಯವನ್ನು ಕಾಣಿಸುವ ನೃತ್ಯಪ್ರದರ್ಶನ ದೇಶಪ್ರೇಮದ ಸಂದೇಶ ಸಾರಿತು.
ಇದಕ್ಕೂ ಮೊದಲು, ಎಸ್.ಡಿ.ಎಂ. ಶಾಲಾ ಕಾಲೇಜುಗಳ ಎನ್.ಸಿ.ಸಿ.ಯ ಆರ್ಮಿ ಮತ್ತು ನೌಕಾದಳ ಕೆಡೆಟ್‌ಗಳ ಪಥಸಂಚಲನ ಆಕರ್ಷಕವಾಗಿತ್ತು. ರೋವರ್ಸ್ ಮತ್ತು ರೇಂಜರ್ಸ್ ಬ್ಯಾಂಡ್‌ನ ತಂಡವು ಸಾಥ್ ನೀಡಿತು.
ಉಜಿರೆಯ ಎಸ್.ಡಿ.ಎಂ. ಕಾಲೇಜು, ಪದವಿಪೂರ್ವ ಕಾಲೇಜು, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ, ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ, ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು, ಎಸ್.ಡಿ.ಎಂ. ಶಾಲೆಗಳು ಮತ್ತು ಪ್ರೌಢಶಾಲೆಗಳು ಸೇರಿದಂತೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಸಿಬ್ಬಂದಿ, ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ಎಸ್.ಡಿ.ಎಂ. ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.