ಬೆಳ್ತಂಗಡಿ: ಸುಮಾರು 8 ಶತಮಾನಗಳಿಗೂ ಅಧಿಕ ವರ್ಷಗಳ ಇತಿಹಾಸವಿರುವ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನಲ್ಲಿ ಉರೂಸ್ ಮಹಾ ಸಂಭ್ರಮವು ಜ. 24 ರಿಂದ ಆರಂಭಗೊಂಡು ಫೆ. 2 ರವರೆಗೆ ವಿವಿಧ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಉರೂಸ್ ಸಮಿತಿಯ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮಗಳು ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಕೆ. ಯು. ಇಬ್ರಾಹಿಂ ಜ. 22 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಗೌರವಾಧ್ಯಕ್ಷ ಸಯ್ಯಿದ್ ಕೆ. ಎಸ್. ಆಟಕೋಯ ತಂಙಳ್ ಕುಂಬೋಳ್ ಮತ್ತು ದ. ಕ. ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದ್ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಕಾಜೂರು ತಂಙಳ್ ವಹಿಸಲಿದ್ದಾರೆ.
ಜ. 24 ರ ಉದ್ಘಾಟನೆಯಂದು ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಸಯ್ಯಿದ್ ಸಾದಾತ್ ತಂಙಳ್ ಮುಖ್ಯ ಭಾಷಣಗೈಯ್ಯಲಿದ್ದಾರೆ. ಸಯ್ಯಿದ್ ಕೂರತ್ ತಂಙಳ್ ಸುಪುತ್ರ ಸಯ್ಯಿದ್ ಮಶ್‌ಹೂದ್ ತಂಙಳ್ ಎಟ್ಟಿಕುಳಂ ಸಹಿತ ವಿವಿಧ ಜಮಾಅತ್ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಕಿಲ್ಲೂರು ಮಸ್ಜಿದ್ ನಿಂದ ವಿಶೇಷ ಸಂದಲ್ ಮೆರವಣಿಗೆ ಆಗಮಿಸಿ ಸಂಜೆ 7 ಗಂಟೆಗೆ ಉರೂಸ್ ಸಮಿತಿ ಅಧ್ಯಕ್ಷ ಕೆ. ಯು ಇಬ್ರಾಹಿಂ ಧ್ವಜಾರೋಹಣ ನಡೆಸಲಿದ್ದಾರೆ.
ಉರೂಸ್ ಪ್ರಯುಕ್ತ 10 ದಿನಗಳಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ- ಕೇರಳದ ಪ್ರಸಿದ್ದ ವಾಗ್ಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಈ ಉಪನ್ಯಾಸ ಮಾಲಿಕೆಯನ್ನು ಸಯ್ಯಿದ್ ಕಾಜೂರು ತಂಙಳ್ ಉದ್ಘಾಟಿಸಲಿದ್ದಾರೆ.
ಜ.30 ರಂದು ಆಧ್ಯಾತ್ಮಿಕ ಕಾರ್ಯಕ್ರಮವಾದ “ಬೃಹತ್ ದ್ಸಿಕ್ರ್ ಮಜ್ಲಿಸ್” ಗೆ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಸರಕಾರದ ವಿಶೇಷ ಅನುದಾನದಿಂದ ನೂತನವಾಗಿ ನಿರ್ಮಾಣವಾಗಿರುವ “ಮುಸಾಫಿರ್ ಖಾನಾ” ಕಟ್ಟಡದ ಉದ್ಘಾಟನೆ ಇದೇ ವೇಳೆ ನಡೆಯಲಿದೆ. ಕರ್ನಾಟಕ ಸರಕಾರದ ವಸತಿ, ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆ ಸಚಿವರಾದ ಬಿ. ಝೆಡ್ ಝಮೀರ್ ಅಹ್ಮದ್ ಖಾನ್ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದ. ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಬೆಸ್ಟ್ ಫೌಂಡೇಶನ್ ಸಂಸ್ಥಾಪಕ ರಕ್ಷಿತ್ ಶಿವರಾಂ, ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮೊದಲಾದ ಗಣ್ಯರಲ್ಲದೆ ತಾಲೂಕು ಮತ್ತು ಜಿಲ್ಲೆಯ ಅನೇಕ ಸಯ್ಯಿದರುಗಳು, ಉಲಮಾಗಳು, ಸಾಮಾಜಿಕ- ಧಾರ್ಮಿಕ ನಾಯಕರುಗಳು ಭಾಗವಹಿಸಲಿದ್ದಾರೆ.
ಫೆ. 2 ರಂದು ಉರೂಸ್ ಸಮಾರೋಪ: ಬೆಳಿಗ್ಗೆ ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಎನಪೋಯ ವಿ. ವಿ. ಕುಲಪತಿ ಅಬ್ದುಲ್ಲ ಕುಂಞಿ (ವೈಎಮ್‌ಕೆ) ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಪತಿ ಯು. ಟಿ. ಖಾದರ್ ಫರೀದ್ ಭಾಗವಹಿಸಲಿದ್ದಾರೆ.
ವಿವಿಧ ದಿನಗಳಲ್ಲಿ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಜಿಫ್ರಿ ತಂಙಳ್ ಬೆಳ್ತಂಗಡಿ, ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್, ಶಾಫಿ ಸಅದಿ ಬೆಂಗಳೂರು, ಅಬ್ದುರಶೀದ್ ಝೈನಿ ಕಾಮಿಲ್ ಸಖಾಫಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ದೇವರ್ಸೂಲ ಅಬ್ದುಸ್ಸಲಾಂ ಮುಸ್ಲಿಯಾರ್ ಮೊದಲಾದವರು ಭಾಗವಹಿಸಲಿದ್ದಾರೆ.
ಶೈಕ್ಷಣಿಕ ಪ್ರಗತಿ: ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯ ಹೆಜ್ಜೆ ಇಡುತ್ತಾ ಬಂದಿರುವ ಕಾಜೂರಿನಲ್ಲಿ ಈಗಾಗಲೇ ರಹ್ಮಾನಿಯಾ ಪ್ರೌಢ ಶಾಲೆ ನಡೆಯುತ್ತಿದೆ. ಕಾಜೂರು ಪರಿಸರದ ಸುತ್ತ ಮುತ್ತ ಶಿಕ್ಷಣ ವಂಚಿತ ಹೆಣ್ಣು ಮಕ್ಕಳಿಗೆ ಟೈಲರಿಂಗ್, ಶರೀಅತ್ ಸಹಿತ ಸಮನ್ವಯ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡಲಾಗುತ್ತಿದೆ. ‘ರಾಹ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಸ್ಕೂಲ್’ ಎಂಬ ಅಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ನಡೆಯುತ್ತಿದೆ. ಮದರಸ ಶಿಕ್ಷಣ ಮತ್ತು ದಅವಾ ದರ್ಸ್ ಶಿಕ್ಷಣ ಹೀಗೆ 450 ಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಒದಗಿಸುತ್ತಿದೆ.
ಯಾತ್ರಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ರವಿವಾರ ಬೆಲ್ಲದಗಂಜಿ ವಿತರಣೆ, ಉರೂಸ್ ಕೊನೆಯ ದಿನ ಸಾರ್ವಜನಿಕ ಮಹಾ ಅನ್ನದಾನ ನಡೆಯಲಿದೆ. ಜಾತಿ ಧರ್ಮ ಭೇದವಿಲ್ಲದೆ ರಾಜ್ಯ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಜನ ಸಾಗರ ಹೆಜ್ಜೆ ಹಾಕಲಿದೆ. ಇದೀಗ ಕಾಜೂರಿನಲ್ಲಿ ಮತ್ತೊಮ್ಮೆ ವಾರ್ಷಿಕ ಉರೂಸ್ ಸಂಭ್ರಮದ ಮೂಲಕ ಗತಕಾಲದ ವೈಭವದ ದಿನಗಳು ಮತ್ತೆ ಮರುಕಳಿಸಲಿದೆ. ಸುಮಾರು ಒಂದು ಲಕ್ಷದಿಂದ ಒಂದೂವರೆ ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು ಬೆಳ್ತಂಗಡಿಯಿಂದ ಮತ್ತು ಮುಂಡಾಜೆ ಮಾರ್ಗದ ಮೂಲಕ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಊರುಸ್ ಸಮಿತಿ ಅಧ್ಯಕ್ಷ ಕೆ. ಯು. ಇಬ್ರಾಹಿಂ ಕಾಜೂರು, ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ. ಹೆಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ದರ್ಗಾ ಸಮಿತಿಯ ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು, ಕಿಲ್ಲೂರು ಮಸ್ಜಿದ್ ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ
ಉಪಸ್ಥಿತರಿದ್ದರು.