


ಬೆಳ್ತಂಗಡಿ: ಅಟೋರಿಕ್ಷಾದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದು ಒಂದುವರೆ ಕೆ. ಜಿ. ಗಾಂಜಾವನ್ನು ವಶಪಡಿಸಿಕೊಂಡು ಬೆಳ್ತಂಗಡಿ ತಾಲೂಕಿನ ಪುತ್ತಿಲ ನಿವಾಸಿ ಅಬ್ದುಲ್ ಸಲೀಂ (35) ಎಂಬಾತನನ್ನು ಬಂಧಿಸಿದ್ದಾರೆ.
ಉಪ್ಪಿನಂಗಡಿ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಅವಿನಾಶ್ ಗುರುವಾರ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಟೋ ರಿಕ್ಷಾವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು ವಾಹನವನ್ನು ಸುತ್ತುವರಿದು ಚಾಲಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದು ಕಂಡು ಬಂದಿದೆ. ರಿಕ್ಷಾವನ್ನು ಪರಿಶೀಲಿಸಲಾಗಿ ಅದರಲ್ಲಿ ಒಂದುವರೆ ಕೆ. ಜಿ. ಗಾಂಜಾ ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ ಗಾಂಜಾವನ್ನು ಈತ ಉಪ್ಪಿನಂಗಡಿಯಲ್ಲಿ ಮಾರಾಟ ಮಾಡಲು ತಂದಿರುವುದಾಗಿಯೂ, ಇದನ್ನು ತನಗೆ ಪರಿಚಯದ ನೌಶಾದ್ ನೀಡಿರುವುದಾಗಿಯೂ ತಿಳಿಸಿದ್ದು, ಅದರಂತೆ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಶಪಡಿಸಿಕೊಂಡಿರುವ ಗಾಂಜಾದ ಮೌಲ್ಯ ರೂ. 15,000 ಎಂದು ಅಂದಾಜಿಸಲಾಗಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.