ಕರಂಬಾರು: ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 4 ರಂದು ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶಿರ್ಲಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಎಂ. ಶೆಟ್ಟಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ವಹಿಸಿದ್ದರು. ಮುಖ್ಯ ಅತಿಥಿ ನಿವೃತ್ತ ಶಿಕ್ಷಕಿ ಉಮಾ ಮಾಧವಿ ಈ ಶಾಲೆಯಲ್ಲಿ 1985 ರಲ್ಲಿ ನನ್ನ ಉದ್ಯೋಗ ವೃತ್ತಿಯನ್ನು ಪ್ರಾರಂಭಿಸುವ ಸಮಯದಲ್ಲಿ ಕಾಜಿಮುಗೇರು ನಾರಾಯಣ ಹೆಬ್ಬಾರ್ ಮಾರ್ಗದರ್ಶನದಲ್ಲಿ ಕನಿಷ್ಠ 10 ಮಕ್ಕಳಿದ್ದ ಈ ಶಾಲೆಯಲ್ಲಿ ಸುಮಾರು ನೂರಾರು ಮಕ್ಕಳ ಶಾಲೆಗೆ ಸೇರಿಸಿಕೊಂಡು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಭರತನಾಟ್ಯ ಮತ್ತು ನೃತ್ಯ ತರಬೇತಿ ನೀಡಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಕಾಜಿಮುಗೇರು ಸೀತಾರಾಮ ಹೆಬ್ಬಾರ್, ಕಿಶೋರ್ ಹೆಗ್ಡೆ, ನಿವೃತ್ತ ಶಿಕ್ಷಕಿ ಸೆರಾಫಿನ್ ಡಿಸೋಜ, ನಿವೃತ್ತ ಪೊಲೀಸ್ ಅಧಿಕಾರಿ ಭಾರತಿ ರೈ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವಿಜಯ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಾಧವ ಕುಲಾಲ್, ಗ್ರಾಮ ಪಂಚಾಯತ್ ಸದಸ್ಯರು ಜ್ಯೋತಿ, ಗೀತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿವೇಕ್ ಕೇಲ್ಕರ್ ಹಾಗೂ ಶಿಕ್ಷಣ ಇಲಾಖೆ ಇ. ಸಿ. ಒ. ಸಿದ್ದಲಿಂಗಸ್ವಾಮಿ, ವಿದ್ಯಾರ್ಥಿ ನಾಯಕಿ ರುಪ್ಪೆದ ಉಪಸ್ಥಿತರಿದ್ದರು.
ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಕರಾಯ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ದೀಪಾ ಸಂತೋಷ್ ಹಾಗೂ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಸೌಮ್ಯ, ಅಕ್ಷಯ ವಿ. ದೇವಾಡಿಗ, ಸ್ವಾತಿ 3 ದಶಕಗಳ ಹಿಂದೆ ಕರ್ತವ್ಯ ನಿರ್ವಹಿಸಿದ ಶಿಕ್ಷಕಿ ಉಮಾ ಮಾಧವಿ, ಸೆರಾಫಿನ್ ಡಿಸೋಝ, ಭಾರತಿ ರೈರವರಿಗೆ ಹಳೆ ವಿದ್ಯಾರ್ಥಿಗಳಿಂದ ಗೌರವ ಸಮರ್ಪಿಸಲಾಯಿತು. ಶಿರ್ಲಾಲು ಮತ್ತು ಕರಂಬಾರು ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಹತ್ತಾರು ವರ್ಷಗಳ ಸೇವೆ ಸಲ್ಲಿಸಿರುವ ಸದಾಶಿವ ಶಾಂತಿನಗರರವರನ್ನು ಗೌರವಿಸಲಾಯಿತು.
ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ರಮೇಶ್ ಚೌಹಾಣ್ ಸ್ವಾಗತ ಕೋರಿದರು, ಶಿಕ್ಷಕಿ ಸಾವಿತ್ರಿ ವರದಿ ಮಂಡಿಸಿದರು. ಶಿಕ್ಷಕ ಕಿರಣ್ ಕುಮಾರ್ ನಿರೂಪಣೆ ಮಾಡಿದರು. ಶಿಕ್ಷಕಿಯರಾದ ಚೈತ್ರಾ, ಲತಾ, ತನ್ನೀಯ, ಸೌಜನ್ಯ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕರಂಬಾರು ಮತ್ತು ಪರ್ಲಂಡ ಅಂಗನವಾಡಿ ಹಾಗೂ ನಮ್ಮ ಶಾಲಾ ಮಕ್ಕಳಿಂದ ವಿನೋದ ಕಾರ್ಯಕ್ರಮಗಳು ನಡೆದವು. ಶಿಕ್ಷಕ ಸದಾಶಿವ ವಂದಿಸಿದರು.