ಮುಂಡಾಜೆ: ಮಂದಿರ ಮಹಾಸಂಘ, ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಆರತಿ ಕಾರ್ಯಕ್ರಮ ಜ. 10 ರಂದು ನಡೆಯಿತು. ಸಾಮೂಹಿಕವಾಗಿ ಭಗವಂತನ ಉಪಾಸನೆ ಮಾಡುವುದಕ್ಕೆ ಸನಾತನ ಧರ್ಮದಲ್ಲಿ ವಿಶೇಷವಾದ ಮಹತ್ವವಿದೆ. ಎಲ್ಲರೂ ಸೇರಿ ಒಂದೇ ಮನಸ್ಸಿನಿಂದ ಸಾಮೂಹಿಕವಾಗಿ ಭಗವಂತನ ಉಪಾಸನೆ ಮಾಡುವುದರಿಂದ ಭಗವಂತನ ವಿಶೇಷ ಕೃಪೆ ನಮ್ಮ ಮೇಲೆ ಆಗುತ್ತದೆ ಹಿಂದೂಗಳಲ್ಲಿ ಸಂಘಟನೆ ನಿರ್ಮಾಣವಾಗುತ್ತದೆ.
ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಮಂದಿರ ಮಹಾಸಂಘದ ಅಧಿವೇಶನದಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ವಾರದಲ್ಲಿ 1 ದಿನ ಎಲ್ಲಾ ಹಿಂದೂ ಬಾಂಧವರು ಜಾತಿ ಸಂಪ್ರದಾಯ ಎಲ್ಲವನ್ನು ಮರೆತು ದೇವಸ್ಥಾನದಲ್ಲಿ ಒಟ್ಟಿಗೆ ಸೇರಿ ಭಗವಂತನ ಸಾಮೂಹಿಕ ಮಹಾ ಆರತಿಯನ್ನು ಮಾಡಲು ನಿಶ್ಚಯಿಸಿದರು.
ಇದರ ಮುಖ್ಯ ಉದ್ದೇಶವೆಂದರೆ ದೇವಸ್ಥಾನಗಳ ಸಂರಕ್ಷಣೆ, ಹಿಂದೂ ಸಮಾಜದ ಸಂಘಟನೆ ಹಾಗೂ ದೇವಸ್ಥಾನಗಳನ್ನು ಧರ್ಮ ಪ್ರಚಾರ ಕೇಂದ್ರವನ್ನಾಗಿಸುವುದು. ಈ ನಿಟ್ಟಿನಲ್ಲಿ ಮುಂಡಾಜೆಯಲ್ಲಿನ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಶುಭ ದಿನದಂದು ಸಾಮೂಹಿಕ ಆರತಿಯನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂಗಳಿಗೆ ಧರ್ಮ ಶಿಕ್ಷಣದ ಅಗತ್ಯ, ಧರ್ಮಾಚರಣೆಯ ಮಹತ್ವವನ್ನು ಸನಾತನ ಸಂಸ್ಥೆಯ ಆನಂದ ಗೌಡ ಮಾತನಾಡಿದರು.
ವೈಕುಂಠ ಏಕಾದಶಿಯ ನಿಮಿತ್ತ ಭಗವಾನ್ ಶ್ರೀ ಕೃಷ್ಣನ ನಾಮ ಜಪ ಮಾಡಲಾಯಿತು. ಈ ಸಂದರ್ಭದಲ್ಲಿ ಮಂದಿರ ಮಹಾಸಂಘದ ಬಾಲಕೃಷ್ಣ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶಶಿಧರ್, ದೇವಸ್ಥಾನದ ಆಡಳಿತ ಮಂಡಳಿಯವರು, ಅರ್ಚಕರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ನಾರಾಯಣ ಪಡ್ಕೆ ವಂದಿಸಿದರು.