ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜ.11 ರಂದು ಆಶಾ ಕಾರ್ಯಕರ್ತೆಯರ ಸಂಧಾನ ಯಶಸ್ವಿಯಾಗಿದ್ದು, ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 10,000 ರೂ. ಗಳ ಗೌರವಧನವನ್ನು ಏ. 01 ರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದೆ.
ರಾಜ್ಯ ಸರ್ಕಾರದಿಂದ ಪ್ರತಿ ಮಾಹೆ 5000 ರೂ. ಹಾಗೂ ಕೇಂದ್ರ ಸರ್ಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10,000 ರೂ. ಗಳನ್ನು ತಿಂಗಳಿಗೆ ನೀಡಲಾಗುವುದು.
ಪೋರ್ಟಲ್ ಸುಧಾರಣೆಗೆ ಸೂಚನೆ: ಮಾಹಿತಿಯನ್ನು ಪೋರ್ಟಲ್ ನಲ್ಲಿ ನಮೂದು ಮಾಡುವುದು ಕಷ್ಟ ಸಾಧ್ಯವಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಾಗ ಪೋರ್ಟಲ್ ಸುಧಾರಣೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಗೌರವ ಧನ ನಿಲ್ಲಿಸದೆ ರಜೆ: ಆಶಾ ಕಾರ್ಯಕರ್ತೆಯರ ಆರೋಗ್ಯ ಕೆಟ್ಟರೆ ಪ್ರತಿ ತಿಂಗಳು ಸಿಗುವ ರಜೆ ಕ್ರೋಡೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವ ಧನ ನಿಲ್ಲಿಸದೆ ರಜೆ ಮಂಜೂರು ಮಾಡಲು ಸಿ. ಎಂ. ಸಿದ್ದರಾಮಯ್ಯ ಸಭೆಯಲ್ಲಿ ತಿಳಿಸಿದರು.
ಸರ್ಕಾರ ನಿಮ್ಮೊಂದಿಗಿದೆ: ಆಯವ್ಯಯ ಪೂರ್ವಭಾವಿ ಸಭೆ ನಡೆಸುವಾಗ ಆಶಾ ಕಾರ್ಯಕರ್ತೆಯರೊಂದಿಗೂ ಸಭೆ ನಡೆಸಲಾಗುವುದು. ಸರ್ಕಾರ ನಿಮ್ಮೊಂದಿಗಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸರ್ಕಾರ ಹತ್ತಿಕ್ಕುವುದಿಲ್ಲ: ಹೋರಾಟ ಮಾಡುವುದು ಸಂವಿಧಾನ ಬದ್ಧ ಹಕ್ಕು. ಪ್ರಜಾಸತ್ತಾತ್ಮಕ ಹೋರಾಟಗಳನ್ನು ಸರ್ಕಾರ ಹತ್ತಿಕ್ಕುವುದಿಲ್ಲ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.