ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.), ಧರ್ಮಸ್ಥಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.), ಧರ್ಮಸ್ಥಳ ಇದರ ಸಂಯುಕ್ತ ಆಶ್ರಯದಲ್ಲಿ
ಜನಜಾಗೃತಿ ವೇದಿಕೆಯ ದುಶ್ಚಟಮುಕ್ತ ಸಮಾಜ ನಿರ್ಮಾಣದ ಕೈಂಕರ್ಯದಲ್ಲಿ ಪಾಲುದಾರರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಜನಜಾಗೃತಿ ವೇದಿಕೆಯ ಸರ್ವ ಸದಸ್ಯರ ಸಮಾವೇಶ ಜ.10ರಂದು ಧರ್ಮಸ್ಥಳದ
ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ವಹಿಸಿದ್ದರು. ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷೆ ಡಾ. ಹೇಮಾವತಿ ವಿ. ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನ ಟ್ರಷ್ಟಿ ಶ್ರದ್ಧಾ ಅಮಿತ್ ಸತೀಶ್ ಬಳೆಗಾರ ಬರೆದಿರುವ “ಕತ್ತಲ ಕುಡುಕರ ಬೆಳಕಿನ ಮಕ್ಕಳು” ಎಂಬ ಪುಸ್ತಕ ಬಿಡುಗಡೆಗೊಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್. ಎಸ್. ಆಶಯ ನುಡಿ ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ರಾಜಣ್ಣ ಮೂ. ಕೊರವಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಟ್ರಷ್ಟಿ ವಿ. ರಾಮಸ್ವಾಮಿ, ಜನ ಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ, ಜನಜಾಗೃತಿ ವೇದಿಕೆಯ ರಾಜ್ಯ ಮಾಜಿ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಂದಿನ ಸಾಲಿಗೆ ರಾಜ್ಯ ಸಂಘಟನಾ ಅಧ್ಯಕ್ಷರಾಗಿ ನಟರಾಜ್ ಬಾದಾಮಿ ಇವರ ಹೆಸರನ್ನು ಘೋಷಣೆ ಮಾಡಲಾಯಿತು. ನಿಕಟ ಪೂರ್ವ ಅಧ್ಯಕ್ಷ ರಾಜಣ್ಣ ಕೊರವಿಯವರನ್ನು ಡಾ. ಹೆಗ್ಗಡೆ ಗೌರವಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಾರ್ಯದರ್ಶಿ ವಿವೇಕ್ ವಿ. ಪಾಯಿಸ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ರಾಜ್ಯದ ವಿವಿಧ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳು, ಸದಸ್ಯರು ಯೋಜನೆಯ ಅಧಿಕಾರಿಗಳು ಹಾಜರಿದ್ದರು.