ಬೆಳ್ತಂಗಡಿ: ಸುಮಾರು 5 ದಶಕಗಳ ಕಾಲ ರಾಜಕೀಯ ರಂಗದಲ್ಲಿ ತನ್ನದೇ ಆದ ರೀತಿಯಲ್ಲಿ ಪ್ರಾಮಾಣಿಕ, ಭಷ್ಟಚಾರ ರಹಿತ ಸೇವೆ ಸಲ್ಲಿಸಿ, ಜನ ಸೇವೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಜಾತ್ಯಾತೀತ ಮನೋಧರ್ಮದಿಂದ ನೇರ ನಡೆ ನುಡಿಯ ನಿಷ್ಠುರವಾದಿ ಮಾತೃ ಹೃದಯದ ವ್ಯಕ್ತಿತ್ವ ಹೊಂದಿ ಶುದ್ದ ರಾಜಕಾರಣ ನಡೆಸಿ ಕಳೆದ ವರ್ಷ ಮೇ. 8ರಂದು ವಿಧಿವಶರಾದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ರೂವಾರಿ ಮಾಜಿ ಶಾಸಕರಾದ ಕೆ.ವಸಂತ ಬಂಗೇರರ 79ನೇ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ವರ್ಷಂಪ್ರತಿ ಅವರ ಹುಟ್ಟುಹಬ್ಬದ ದಿನದಂದು ನಡೆಸಿಕೊಂಡು ಬರುತ್ತಿದ್ದ ಬೃಹತ್ ರಕ್ತದಾನ ಶಿಬಿರವನ್ನು ಜ.15 ರಂದು ಬೆಳ್ತಂಗಡಿಯ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಕ್ತದಾನಿಗಳು, ಬಂಗೇರರ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಹೇಳಿದರು. ಅವರು ಜ.6 ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜ.15 ರಂದು ಬೆಳಿಗ್ಗೆ 9.30 ರಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಘಟಕಕ್ಕೆ ರಕ್ತದಾನಿಗಳಿಂದ ರಕ್ತದಾನ, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ನಂತರ ಕೀರ್ತಿಶೇಷ ಕೆ.ವಸಂತ ಬಂಗೇರರ ಬಗ್ಗೆ ವಿಶೇಷ ಉಪನ್ಯಾಸವನ್ನು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ.ತುಕಾರಾಮ ಪೂಜಾರಿರವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ನಂತರ ದಯಾ ವಿಶೇಷ ಶಾಲಾ ಮಕ್ಕಳಿಗೆ ಸಮಿತಿ ವತಿಯಿಂದ ಊಟದ ವ್ಯವಸ್ಥೆ ನಡೆಯಲಿದೆ.
ಪ್ರತಿಕಾಗೋಷ್ಟಿಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ವಸಂತ ಬಂಗೇರರ ಅಭಿಮಾನಿಗಳ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ಉಪಾಧ್ಯಕ್ಷ ಲೋಕೇಶ್ ಗೌಡ, ಕೋಶಾಧಿಕಾರಿ ಶೇಖರ್ ಕುಕ್ಕೇಡಿ, ಹುಟ್ಟು ಹಬ್ಬ ಆಚರಣಾ ಸಮಿತಿಯ ಪ್ರಧಾನ ಸಂಚಾಲಕ ಆಶ್ರಫ್ ನೆರಿಯ, ಯಶೋಧರ, ಲಕ್ಷ್ಮಣ, ದೇವಿಪ್ರಸಾದ್ ಉಪಸ್ಥಿತರಿದ್ದರು.