ಬೆಳ್ತಂಗಡಿ: ಸರಕಾರಿ ಬಸ್ಸಿನಲ್ಲಿ ಪಯಣಿಸುತ್ತಿದ್ದ ಉಜಿರೆಯ ಯುವತಿಗೆ ಬಸ್ಸಿನಿಂದ ಇಳಿಯಲು ಅವಕಾಶ ನೀಡದೆ ಸತಾಯಿಸಿದ ನಿರ್ವಾಹಕ ಮತ್ತು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾದ ಘಟನೆ ವರದಿಯಾಗಿದೆ.
ಘಟನೆಯ ವಿವರ: ಬಿ. ಸಿ. ರೋಡಿನ ಖಾಸಗಿ ಕಂಪೆನಿಯೊಂದರಲ್ಲಿ ಉಜಿರೆಯ ಯುವತಿ ಕೆಲಸಕ್ಕೆ ಹೋಗುತ್ತಿದ್ದಳು. ಎಂದಿನಂತೆ ಸಂಜೆ ಯಲ್ಲಾಪುರ(KA31F1649) – ಧರ್ಮಸ್ಥಳ ಬಸ್ಸಿನಲ್ಲಿ ಮನೆಗೆ ಹಿಂದಿರುಗುತಿದ್ದಳು.
ರಾತ್ರಿ ಸುಮಾರು 7 ಗಂಟೆಯ ಸಮಯಕ್ಕೆ ಉಜಿರೆ ತಲುಪುತ್ತಿದ್ದಳು. ಅಲ್ಲಿಂದ ಮನೆಯವರು ಕರೆದುಕೊಂಡು ಹೋಗುತ್ತಿದ್ದರು. ಜ. 5 ರಂದು ಯುವತಿ ಬಸ್ಸಿನಲ್ಲಿ ಉಜಿರೆಗೆ ಟಿಕೆಟ್ ತೆಗೆದುಕೊಂಡಿದ್ದಳು. ಆದರೆ ಕಂಡಕ್ಟರ್ ಉಜಿರೆಯಲ್ಲಿ ಬಸ್ ನಿಲ್ಲಿಸದೆ ನಿಧಾನವಾಗಿ ಚಲಿಸುತಿದ್ದ ಬಸ್ಸಿನಿಂದ ಕೆಳಗೆ ಇಳಿಯಲು ಹೇಳಿದ್ದಾನೆ. ಯುವತಿಗೆ ಬಸ್ಸಿನಿಂದ ಕೆಳಗೆ ಇಳಿಯಲು ಆಗದೆ ಬಸ್ಸನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ವಾಹಕನಲ್ಲಿ ಮನವಿ ಮಾಡಿದ್ದಾಳೆ. ಆದರೆ ಬಸ್ ಚಾಲಕ ಬಸ್ ನಿಲ್ಲಿಸದೆ ಚಲಿಸಿದ್ದಾನೆ.
ಇದರಿಂದ ಬೇಸರಗೊಂಡ ಯುವತಿ ತಕ್ಷಣ ತನ್ನ ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಬಸ್ ಕಂಡಕ್ಟರ್ ತಕ್ಷಣ ಯುವತಿಗೆ ಧರ್ಮಸ್ಥಳ ಟಿಕೆಟ್ ನೀಡಿದ್ದು ಯುವತಿ ಅದನ್ನು ತಿರಸ್ಕರಿಸಿ ಬಸ್ಸಿನಲ್ಲಿಯೇ ಪ್ರತಿಭಟನೆ ನಡೆಸಿದ್ದಾಳೆ. ಯುವತಿ ಕೂಡಲೇ ತನ್ನ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಬಸ್ ಹಿಂಬಾಲಿಸಿ ಕನ್ಯಾಡಿಯ ಬಳಿ ಬಸ್ಸನ್ನು ಅಡಗಟ್ಟಿ, ಬಸ್ಸಿನ ಕಂಡಕ್ಟರ್ ಹಾಗೂ ಡ್ರೈವರನ್ನು ಸಹೋದರ ಮತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮಹಿಳೆಯರು ತರಾಟೆಗೆ ತೆಗೆದುಕೊಂಡು ಯುವತಿಗೆ ರಾತ್ರಿ ಸಮಯದಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆದರೆ ಯಾರು ಹೊಣೆ. ನಿಮ್ಮ ಮನೆಯ ಮಕ್ಕಳನ್ನು ಈ ರೀತಿ ನೋಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ನಂತರ ಧರ್ಮಸ್ಥಳ ಬಸ್ ಡಿಪ್ಪೋ ಮ್ಯಾನೇಜರ್ ಗೆ ಈ ವಿಷಯ ತಿಳಿಸಿದಾಗ ಅದು ಬಸ್ ಧರ್ಮಸ್ಥಳ ಡಿಪೊಗೆ ಸೇರಿದ್ದಲ್ಲ. ಯಲ್ಲಾಪುರ ಡಿಪ್ಪೋಕ್ಕೆ ಸೇರಿದ್ದು ಎಂದು ಹೇಳಿದ್ದಾರೆ. ನಂತರ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಯುವತಿಯಲ್ಲಿ ಕ್ಷಮೆ ಕೇಳುವಂತೆ ತಿಳಿಸಿದ್ದಾರೆ ಮುಂದಕ್ಕೆ ಇಂತಹ ಘಟನೆ ನಡೆದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಬರವಸೆ ನೀಡಿದ್ದಾರೆ.
ಯುವತಿಗೆ ಇಂತಹ ಘಟನೆ ಎರಡನೇ ಬಾರಿ ಅನುಭವವಾಗಿದೆ.
ಈ ಘಟನೆ ಇನ್ನು ಮುಂದೆ ನಡೆಯಬಾರದೆಂದು ಮನೆಯವರು ಹಾಗೂ ಸಂಬಂಧಿಕರು ತಿಳಿಸಿದ್ದಾರೆ.