ಬೆಳ್ತಂಗಡಿ: ಡಿ. 28 ರಂದು ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ, ತಾಲೂಕು ಕಾನೂನು ಸೇವಾ ಸಮಿತಿಯ ಸಹಯೋಗದೊಂದಿಗೆ ಕಾನೂನು ಅರಿವು ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳಿಗೆ ಕಾನೂನು ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ತಿಳುವಳಿಕೆಯನ್ನು, ವಿವಿಧ ಕಾನೂನು ಸಮಸ್ಯೆಗಳು ಮತ್ತು ನಿಬಂಧನೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಸಲಾಗಿತ್ತು.
ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬೆಳ್ತಂಗಡಿ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಮನು ಬಿ. ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಹಾಗೂ ಇವರು ಮಾದಕ ದ್ರವ್ಯಗಳ ಕುರಿತು ಉಪನ್ಯಾಸ ನೀಡಿ, ಮಾದಕ ವ್ಯಸನದಿಂದಾಗುವ ಅನಾಹುತಗಳ ಕುರಿತು ಜಾಗೃತಿ ಮೂಡಿಸಿದರು. ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸಂದೇಶ್ ಕೆ., ಡಿಜಿಟಲ್ ಸಾಧನಗಳನ್ನು ಬಳಸಿ ನಡೆಸಲಾಗುವ ಸೈಬರ್ ಕ್ರೈಂ ಅಪರಾಧ ಚಟುವಟಿಕೆಗಳ ಬಗ್ಗೆ ಮಾತನಾಡಿದರು.
ಬೆಳ್ತಂಗಡಿ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ. ಕೆ., ವಿದ್ಯಾರ್ಥಿಗಳಿಗೆ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಶಿಕ್ಷಣ ನೀಡಿದರು. ಹಿರಿಯ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತರವರು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಮತ್ತು ಎನ್. ಡಿ. ಪಿ. ಎಸ್ ಕಾಯ್ದೆಯ ಕುರಿತು ಭಾಷಣ ಮಾಡಿದರು.
ಗ್ರಾಹಕರ ಹಕ್ಕುಗಳ ಮಹತ್ವವನ್ನು ಮತ್ತು ಗ್ರಾಹಕರ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಪ್ರೋತ್ಸಾಹಿಸಿದರು. ಅವರ ಭಾಷಣವು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳು, ವಂಚನೆ ಮತ್ತು ಮಾರುಕಟ್ಟೆಯಲ್ಲಿ ಶೋಷಣೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಜ್ಞಾಪನೆಯಾಗಿ ಕಾರ್ಯನಿರ್ವಹಿಸಿತು.
ಪ್ರಸನ್ನ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಮಾತನಾಡಿ, ಎಚ್. ಐ. ವಿ / ಏಡ್ಸ್ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಉಪನ್ಯಾಸ ನೀಡಿದರು.
ಸಭೆಯಲ್ಲಿ ಬೆಳ್ತಂಗಡಿಯ ವಕೀಲರಾದ ಚಿದಾನಂದ ಪಿ. ಉಪಸ್ಥಿತರಿದ್ದರು. ಪ್ರಸನ್ನ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಎಂ. ಮಲ್ಲಿಕಾರ್ಜುನ ಗೌಡ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಕಾನೂನು ಅರಿವು ಹಾಗೂ ಕರ್ತವ್ಯಗಳು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ನಾವು ಬಹಳಷ್ಟು ಕಾನೂನುಗಳನ್ನು ತಿಳಿಯದೆ ಇದ್ದರೂ ತೊಂದರೆ ಇಲ್ಲ ಆದರೆ ನಮ್ಮ ನಿತ್ಯ ಜೀವನ ಸುಖ ಸಂತೋಷದಿಂದ ಜೀವಿಸಲು ಸಂಬಂಧಪಟ್ಟ ಕಾನೂನುಗಳ ಮತ್ತು ಹಕ್ಕುಗಳು ಅರಿತುಕೊಳ್ಳುವುದು ತುಂಬಾ ಅಗತ್ಯವು ಎಂದು ನುಡಿದರು.
ಸಹಾಯಕ ಪ್ರಾಧ್ಯಾಪಕಿ ಪ್ರತೀಕ್ಷಾ ಸಭೆಯನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ವಿದ್ಯಾಶ್ರೀ ನಿರೂಪಿಸಿದರು. ಕಾನೂನು ವೃತ್ತಿಪರರೊಂದಿಗೆ ಸಂವಹನಕ್ಕಾಗಿ ವೇದಿಕೆಯನ್ನು ನೀಡುವ ಮೂಲಕ, ಕಾರ್ಯಕ್ರಮವು ತಮ್ಮ ಹಕ್ಕುಗಳು ಮತ್ತು ಕಟ್ಟುಪಾಡುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿತು. ಸಿಂಧೂರ ಪಲ್ಲವಿ ವಂದಿಸಿದರು.