ಉಜಿರೆ: ರಾಷ್ಟ್ರಿಯ ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ವತಿಯಿಂದ ಡಿ.15 ರಂದು ಉಜಿರೆ ಗ್ರಾಮದ ಬದನಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ. ಯವರು ಇತ್ತೀಚಿನ ದಿನಗಳಲ್ಲಿ, ಯಾವ ಸಮಯದಲ್ಲಿ ನಮ್ಮ ಆರೋಗ್ಯ ಏರುಪೇರಾಗುತ್ತದೆ ಮತ್ತು ಅಪಘಾತಗಳು ಸಂಭವಿಸುತ್ತದೆಂದು ನಿಶ್ಚಿತವಿಲ್ಲದ ಕಾರಣ, ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುದರಿಂದ ಅನುಕೂಲವಾಗುತ್ತದೆ ಮತ್ತು ಖರ್ಚುವೆಚ್ಚಗಳನ್ನು ಭರಿಸಲು ಸಹಾಯವಾಗುತ್ತದೆಂದು ತಿಳಿಸಿದರು.
ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ ಕಾರಂತ್ ರವರು ಆರೋಗ್ಯ ಶಿಬಿರ ಉದ್ಘಾಟಿಸಿ ಗ್ರಾಮೀಣ ಪ್ರದೇಶದಲ್ಲಿರುವ ಬೆನಕ ಹೆಲ್ತ್ ಸೆಂಟರ್ ನ ವೈದ್ಯರು ಮತ್ತು ಸಿಬ್ಬಂದಿಗಳ ನಗುಮೊಗದ ಸೇವೆ, ನಗರದ ಆಸ್ಪತ್ರೆಗಳಲ್ಲಿ ಸಿಗುವ ಎಲ್ಲಾ ಚಿಕಿತ್ಸಾ ಸೌಲಭ್ಯದೊಂದಿಗೆ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದೆಯೆಂದು ತಿಳಿಸಿ ಈ ಉಚಿತ ಶಿಬಿರದ ಪ್ರಯೋಜನವನ್ನು ಪರಿಸರದ ಜನತೆ ಪಡೆದೊಳ್ಳುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾದ ವಲೇರಿಯನ್ ಡಿ’ಸೋಜ ದೈಹಿಕ ಶಿಕ್ಷಣ ಶಿಕ್ಷಕ ಮಡಂತ್ಯಾರು, ಡಾ. ಭಾರತಿ ಜಿ. ಕೆ., ಅನಿಲ್ ಡಿ’ಸೋಜ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಬದನಾಜೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸ್ಥಳೀಯ ಯುವಕ ಮಂಡಲ, ಯುವತಿ ಮಂಡಲ, ಹಿರಿಯ ವಿದ್ಯಾರ್ಥಿ ಸಂಘ, ಸುಜ್ಞಾನ ನಿಧಿ ಯೋಜನೆ ಮತ್ತು ಭಜನಾ ಮಂಡಳಿಗಳು ಆರೋಗ್ಯ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಶ್ರಮಿಸಿದರು.
ಬೆನಕ ಆಸ್ಪತ್ರೆಯ ಡಾ. ಆದಿತ್ಯ ರಾವ್ ತುರ್ತು ಚಿಕಿತ್ಸಾ ವೈದ್ಯರು, ಡಾ. ಅಂಕಿತ ಜಿ ಭಟ್ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ , ಡಾ. ರೋಹಿತ್ ಜಿ ಭಟ್ ಎಲುಬು ಕೀಲು ಮತ್ತು ಕೈ ಮೈಕ್ರೋ ಸರ್ಜರಿ, ಡಾ. ಶಂತನು ಪ್ರಭು ಮಕ್ಕಳು ತಜ್ಞರು, ಡಾ. ಅಖಿಲ್ ವಿಜಯನ್ ಇವರುಗಳು ಶಿಬಿರದಲ್ಲಿ ಪಾಲ್ಗೊಂಡು ಪರಿಸರದ ಜನತೆಯ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಊರವರ ಪರವಾಗಿ ಡಾ. ಗೋಪಾಲಕೃಷ್ಣ ಮತ್ತು ಡಾ. ಭಾರತಿಯವರನ್ನು ಸನ್ಮಾನಿಸಲಾಯಿತು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಲಲಿತಾ ಕುಮಾರಿಯವರು ಸ್ವಾಗತಿಸಿ, ಅಧ್ಯಾಪಕ ಸುರೇಶ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.