ನಕ್ಸಲ್ ವಿಕ್ರಂಗೌಡನ ಎನ್‌ಕೌಂಟರ್: ಹೆಬ್ರಿ ಠಾಣೆಯಲ್ಲಿ ಕೇಸು ದಾಖಲು- ಡಿವೈಎಸ್‌ಪಿ ಅರವಿಂದ್ ತನಿಖೆ: ನ್ಯಾಯಾಧೀಶೆ ಕೋಮಲಾ ಪರಿಶೀಲನೆ – ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ವಿಕ್ರಂ ಗೌಡ ತಂಡ ! ಇನ್ನುಳಿದಿರುವುದು ಏಳೇ ಮಂದಿ: ಮುಂಡಗಾರು ಲತಾಗಾಗಿ ಮುಂದುವರಿದ ಕೂಂಬಿಂಗ್

0

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲಿನಲ್ಲಿ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ಡಿವೈಎಸ್‌ಪಿ ಅರವಿಂದ್ ಕಳಗುಜ್ಜಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು ಯಾವ ರೀತಿ ಎನ್‌ಕೌಂಟರ್ ನಡೆದಿದೆ ಎಂದು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎನ್‌ಕೌಂಟರ್ ಘಟನೆ ಕಬ್ಬಿನಾಲೆ ಪರಿಸರದಿಂದ ೮ ಕಿಲೋ ಮೀಟರ್ ಎತ್ತರದ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ಕಾರ್ಯಾಚರಣೆ ಹೇಗೆ ನಡೆದಿದೆ. ದಾಳಿ-ಪ್ರತಿದಾಳಿ ಹೇಗಾಯಿತು, ಉಳಿದವರು ಗಾಯಗೊಂಡಿದ್ದಾರೆಯೇ ಮೊದಲಾದ ಆಯಾಮದಲ್ಲಿ ತನಿಖೆ ನಡೆಯುತ್ತಿದ್ದು ಮಹತ್ವದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತಿದೆ. ಎನ್‌ಕೌಂಟರ್ ಕಾರ್ಯಾಚರಣೆಯಲ್ಲ್ಲಿ ಭಾಗಿಯಾದ ಎಎನ್‌ಎಫ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳೀಯ ಕೆಲವು ನಿವಾಸಿಗಳನ್ನೂ ವಿಚಾರಣೆಗೊಳಪಡಿಸಿದ್ದಾರೆ. ಈ ಮಧ್ಯೆ ಎನ್‌ಕೌಂಟರ್ ಕಾರ್ಯಾಚರಣೆ ವೇಳೆ ಹತ್ಯೆಗೀಡಾಗಿರುವ ವಿಕ್ರಂ ಗೌಡನ ಜತೆಗಿದ್ದ ಮೂರ್ನಾಲ್ಕು ಮಂದಿ ನಕ್ಸಲರು ಕಾಡಿನ ನಡುವೆ ತಪ್ಪಿಸಿಕೊಂಡಿದ್ದಾರೆ ಎಂದು ಮಾಹಿತಿ ಸಂಗ್ರಹಿಸಿರುವ ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆಯವರು ಪರಾರಿಯಾಗಿರುವ ನಕ್ಸಲರ ಪತ್ತೆಗೆ ಕೂಂಬಿಂಗ್ ಮುಂದುವರಿಸಿದ್ದಾರೆ. ಕಾರ್ಕಳ, ಹೆಬ್ರಿ, ಕುಂದಾಪುರ, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಶೋಧ ನಡೆಯುತ್ತಿದೆ.
ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ವಿಕ್ರಂ ಗೌಡ ನೇತೃತ್ವದ ನಕ್ಸಲರು: ಕಾಡಿನಲ್ಲಿ ಸುತ್ತಾಡುವ ನಕ್ಸಲರು ಕೆಲವು ಸಮಯದ ಹಿಂದೆ ರೈಲಿನ ಮೂಲಕ ಪ್ರಯಾಣಿಸಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ. ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್ ವಿಕ್ರಂ ಗೌಡ ಮತ್ತು ತಂಡ ಸುಬ್ರಹ್ಮಣ್ಯದಿಂದ ಮುರ್ಡೇಶ್ವರದವರೆಗೆ ರೈಲಿನಲ್ಲಿ ಹೋಗಿ ಅನಂತರ ಕಾಡು ಹಾದಿ ಹಿಡಿದಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಲೋಕಸಭೆ ಚುನಾವಣೆ ಸನಿಹದಲ್ಲಿ ಎಲ್ಲೆಡೆ ಹೆಚ್ಚುವರಿ ಭದ್ರತೆ ಇದ್ದುದರಿಂದ ದ.ಕ. ಮತ್ತು ಕೊಡಗು ಜಿಲ್ಲೆಗಳ ಗಡಿಭಾಗದ ಕೂಜುಮಲೆ, ಕಡಮಕಲ್ಲು, ಸುಬ್ರಹ್ಮಣ್ಯ, ಬಿಳಿನೆಲೆ ಭಾಗದಲ್ಲಿ ಹೆಚ್ಚಿನ ದಿನಗಳನ್ನು ನಕ್ಸಲರು ಕಳೆದಿದ್ದರು. ಈ ವೇಳೆ ಇಲ್ಲಿನ ಅರಣ್ಯದಂಚಿನ ಮನೆಗಳಿಗೆ ಭೇಟಿ ನೀಡಿ ದಿನಸಿ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕೊಂಡೊಯ್ದಿದ್ದರು. ಅಲ್ಲಿಂದ ಪಕ್ಕದ ಸುಬ್ರಹ್ಮಣ್ಯ ಕ್ರಾಸಿಂಗ್ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿ ರೈಲಿನ ಮೂಲಕ ಮುರ್ಡೇಶ್ವರ ಕಡೆಗೆ ಪ್ರಯಾಣಿಸಿದ್ದರು. ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ಇಳಿದು ಕಾಡು ಹತ್ತಿದ್ದ ಅವರು ಕೊಲ್ಲೂರು ಭಾಗದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಕಾಡು ದಾರಿಯಾಗಿ ಕಾರ್ಕಳ, ಹೆಬ್ರಿ ಭಾಗಕ್ಕೆ ಬಂದಿದ್ದರು. ನಕ್ಸಲರು ರೈಲಿನಲ್ಲಿ ಪ್ರಯಾಣಿಸುವಾಗ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ಯಾರಿಗೂ ತಿಳಿಯದಂತೆ ಗೌಪ್ಯತೆ ಕಾಪಾಡಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಕೇರಳದಲ್ಲಿ ವಿಕ್ರಂ ಹಾಗೂ ಈ ಏಳು ಮಂದಿ ನಕ್ಸಲರ ತಂಡ ಸಕ್ರಿಯವಾಗಿತ್ತು. ಇವರು ಹಾಗೂ ಕೇರಳ ನಕ್ಸಲ್ ನಾಯಕ ಸಂಯೋಯ್ ದೀಪಕ್, ಮೊಹಿಯುದ್ದೀನ್ ಅವರ ತಂಡಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅವರೊಳಗೆ ಸಂಘಟನೆ, ಹಣಕಾಸಿನ ವಿಚಾರದಲ್ಲಿ ಜಗಳ ನಡೆದಿತ್ತು. ವಿಕ್ರಂ ಗೌಡ ಮತ್ತವರ ತಂಡ ಸಂಯೋಯ್ ತಂಡದಿಂದ 1 ಲಕ್ಷ ರೂ. ಪಡೆದುಕೊಂಡಿತ್ತು. ಇದೇ ವಿಷಯದಲ್ಲಿ ತಗಾದೆಯೂ ಉಂಟಾಗಿತ್ತು. ಹೀಗಾಗಿ ಅಸಮಾಧಾನಗೊಂಡು ವಿಕ್ರಂ ಗೌಡ ನಾಯಕತ್ವದ ಎಂಟು ಮಂದಿ ಕೊಡಗಿನ ಗಾಳಿಬೀಡು, ಕರಿಕೆ ಮಾರ್ಗವಾಗಿ ಕೊಡಗು-ದ.ಕ. ಗಡಿಭಾಗ ಪುಷ್ಪಗಿರಿ ತಪ್ಪಲಿನ ಕಡೆಗೆ ಬಂದಿಳಿದು ಕೂಜುಮಲೆ, ಸುಬ್ರಹ್ಮಣ್ಯ ಬಿಳಿನೆಲೆ ಭಾಗದಲ್ಲಿ ಓಡಾಟ ನಡೆಸಿದ್ದರು. ಈ ಭಾಗದಲ್ಲಿ ಆಶ್ರಯ ಪಡೆದು ಸಂಘಟನೆಯನ್ನು ಬಲಪಡಿಸುವ ಉzಶ ಹೊಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ನ್ಯಾಯಾಧೀಶೆ ಕೋಮಲಾರವರಿಂದ ಪರಿಶೀಲನೆ: ಹೆಬ್ರಿ ತಾಲೂಕಿನ ಪೀತಬೈಲಿನಲ್ಲಿ ನಡೆದ ನಕ್ಸಲ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಕೋರ್ಟ್‌ನ ನ್ಯಾಯಾಧೀಶೆ ಕೋಮಲಾ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಪೀತಬೈಲ್, ತಿಂಗಳಮಕ್ಕಿ, ಕಬ್ಬಿನಾಲೆ, ಮತ್ತಾವು ಸುತ್ತಮುತ್ತ ಹಾಗೂ ಘಟನಾ ಸ್ಥಳಗಳಲ್ಲಿ ಎಎನ್‌ಎಫ್ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಿದ್ದಾರೆ. ವಿಕ್ರಮ ಗೌಡನೊಂದಿಗೆ ಇದ್ದ ಸಹಚರರ ಪತ್ತೆಗೆ ಡ್ರೋನ್ ಕೆಮರಾ ಮೂಲಕ ಪರಿಶೀಲನೆ ಹಾಗೂ ಪೊಲೀಸ್ ಶ್ವಾನದಳದೊಂದಿಗೆ ಶೋಧ ನಡೆಸಿದ್ದಾರೆ. ಸ್ಥಳದಲ್ಲಿ ಬಿಗು ಭದ್ರತೆ ಮುಂದುವರಿದಿದೆ.

ವಿಕ್ರಂ ಗೌಡನ ಪತ್ನಿಯೂ ನಕ್ಸಲ್: ಪ್ರೀತಿಸಿ ಮದುವೆಯಾಗಿದ್ದ ಕಳಸದ ಸಾವಿತ್ರಿ ಕೇರಳದ ಜೈಲಿನಲ್ಲಿ!
ದಶಕಗಳ ಕಾಲ ನಕ್ಸಲ್ ತಂಡ ಮುನ್ನಡೆಸಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿರುವ ವಿಕ್ರಂ ಗೌಡ ವಿವಾಹಿತನಾಗಿದ್ದ. ಕ್ರಾಂತಿಕಾರಿ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಕಳಸದ ಸಾವಿತ್ರಿ ಎಂಬಾಕೆಯನ್ನು ವಿಕ್ರಂ ವಿವಾಹವಾಗಿದ್ದ. ಇವರು ಹಲವು ವರ್ಷಗಳ ಕಾಲ ನಕ್ಸಲ್ ಚಟುವಟಿಕೆಯಲ್ಲಿ ಒಟ್ಟಿಗೆ ತೊಡಗಿಸಿಕೊಂಡಿದ್ದರು. ನಂತರ ಸಾವಿತ್ರಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ನೇತೃತ್ವದ ಕಬಿನಿ ದಳಂ-೧ ಸೇರಿಕೊಂಡಿದ್ದಳು. ಇತ್ತೀಚೆಗೆ ಕೇರಳದ ವೈನಾಡು-ಕೋಝಿಕೋಡು ವಲಯದಲ್ಲಿ ಪೊಲೀಸ್ ಕಾರ್ಯಾಚರಣೆ ವೇಳೆ ಬಿ.ಜಿ. ಕೃಷ್ಣಮೂರ್ತಿಯೊಂದಿಗೆ ಸಿಕ್ಕಿಬಿದ್ದಳು. ಇದೀಗ ಸಾವಿತ್ರಿ ಮತ್ತು ಬಿ.ಜಿ. ಕೃಷ್ಣಮೂರ್ತಿ ಇಬ್ಬರೂ ಕೇರಳದ ಜೈಲಿನಲ್ಲಿದ್ದಾರೆ. ವಿಕ್ರಂ ಗೌಡ ಸಾವಿತ್ರಿ ಅಲಿಯಾಸ್ ರಜಿತ್‌ಳನ್ನು ಕೆಂಪು ಕ್ರಾಂತಿಯ ನಡುವೆ ಪ್ರೀತಿಸಿ ಕಾಡಲ್ಲೇ ಮದುವೆಯಾಗಿದ್ದ.
೧೫ ವರ್ಷ ಸಾವಿತ್ರಿ-ವಿಕ್ರಂ ಜತೆಯಾಗಿದ್ದರೂ ಮಕ್ಕಳಾಗದಂತೆ ಎಚ್ಚರ ವಹಿಸಿದ್ದರು.
ಕಬಿನಿ ದಳ ೨ರ ನಾಯಕ ವಿಕ್ರಂ ಗೌಡನನ್ನು ಶರಣಾಗುವ ನಿಟ್ಟಿನಲ್ಲಿ ಮನವೊಲಿಸಿದ್ದು ಒಪ್ಪದಿದ್ದಾಗ ಸಾವಿತ್ರಿ ಮತ್ತು ವಿಕ್ರಂ ಪರಸ್ಪರ ದೂರವಾದರು. ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ತಂಡ ಸೇರಿದ ಸಾವಿತ್ರಿ ಕೇರಳದ ವಯನಾಡು ಕೋಯಿಕ್ಕೋಡಿನಲ್ಲಿ ಕಬಿನಿ ದಳದ ಕಮಾಂಡರ್ ಆಗಿದ್ದಳು. ಕೇರಳ ಪೊಲೀಸರಿಗೆ ಶರಣಾಗಲು ಯೋಜಿಸಿದ್ದರು.
ಕಾರಲ್ಲಿ ಬಿ.ಜಿ.ಕೃಷ್ಣಮೂರ್ತಿ ಜತೆ ತೆರಳುತ್ತಿದ್ದಾಗ ಕರ್ನಾಟಕ-ಕೇರಳ ಗಡಿಯಲ್ಲಿ ೨೦೨೧ರ ನ.೯ರಂದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದು ಇಬ್ಬರೂ ಕೇರಳದ ತ್ರಿಶೂರಿನ ವಿಯ್ಯುರ್ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಬಿ.ಜಿ.ಕೃಷ್ಣಮೂರ್ತಿ ವಿರುದ್ಧ ಕೇರಳ, ಕರ್ನಾಟಕದಲ್ಲಿ ೫೦ ಪ್ರಕರಣ ಹಾಗೂ ಸಾವಿತ್ರಿ ವಿರುದ್ದ ೮ ಪ್ರಕರಣಗಳಿದೆ. ವಿಕ್ರಂ ಗೌಡನಿಗೆ ಕೇರಳದಲ್ಲಿ ೨೫ ಲಕ್ಷ ರೂ. ಹಾಗೂ ಕರ್ನಾಟಕದಲ್ಲಿ ೫ ಲಕ್ಷ ರೂ. ಬಹುಮಾನ ಘೋಷಿಸಿದ್ದು ಸಾವಿತ್ರಿಯಿಂದ ದೂರವಾದ ಬಳಿಕ ಆತ ಕೇರಳದಲ್ಲಿ ಕಾರ್ಯಾಚರಣೆ ನಿರತನಾಗಿದ್ದ. ನಕ್ಸಲ್ ನಾಯಕಿ ಕುತ್ಲೂರಿನ ಸುಂದರಿಯ ಮೋಹ ಪಾಶದಲ್ಲೂ ಸಿಲುಕಿದ್ದ ವಿಕ್ರಂ ಗೌಡ ಕಾಡಲ್ಲಿ ಪ್ರೀತಿ ನಿರತನಾಗುವ ಅಪಾಯಕ್ಕೆ ಸಿಲುಕದಂತೆ ಎಚ್ಚರ ವಹಿಸಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನುಳಿದಿರುವುದು ಏಳೇ ಮಂದಿ ನಕ್ಸಲರು
ನಕ್ಸಲ್ ನಾಯಕ ವಿಕ್ರಂಗೌಡ ಸಾವಿನ ಬಳಿಕ ಈಗ ದಕ್ಷಿಣ ಭಾರತದಲ್ಲಿ ಉಳಿದಿರುವುದು ಏಳು ಮಂದಿ ನಕ್ಸಲರು ಮಾತ್ರ. ಅವರಲ್ಲಿ ಏಳು ಜನ ಈಗ ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲೇ ಇದ್ದಾರೆ ಎಂದು ಹೇಳುತ್ತವೆ ಪೊಲೀಸ್ ಮೂಲಗಳು. ಕೇರಳದ ನಕ್ಸಲ್ ನಾಯಕ ಸಂಜೊಯ್ ದೀಪಕ್, ಮೊಹಿಯುದ್ದೀನ್ ಸೇರಿ ಬಹುತೇಕರ ಬಂಧನವಾಗಿದೆ. ಅಲ್ಲಿ ಉಳಿದಿರುವುದು ಸಂತೋಷ್ ಮಾತ್ರ. ರಾಷ್ಟ್ರ ಮಟ್ಟದ ನಕ್ಸಲ್ ನಾಯಕರೊಂದಿಗೆ ಸಂಜೊಯ್ ದೀಪಕ್ ಸಂಪರ್ಕ ಹೊಂದಿದ್ದ. ಇವರ ಬಂಧನದ ಬಳಿಕ ಎಲ್ಲವೂ ಕಡಿತಗೊಂಡಿತು. ವಯೋಸಹಜ ಅನಾರೋಗ್ಯವೂ ಉಳಿದವರನ್ನು ಕಾಡುತ್ತಿದೆ. ಕೇರಳದಲ್ಲಿ ಮುಂದುವರಿಯಲು ಯಾವುದೇ ಅವಕಾಶ ಇಲ್ಲದ್ದರಿಂದ ಇವರ ತಂಡ ಕರ್ನಾಟಕದತ್ತ ಹೊರಟಿತ್ತು. ತಂಡದಲ್ಲಿ ಮುಂಡಗಾರು ಲತಾ, ಜಯಣ್ಣ, ವನಜಾಕ್ಷಿ, ಸುಂದರಿ, ದಿಶಾ, ಕೋಟೆವುಂಡ ರವಿ, ರಮೇಶ್, ವಿಕ್ರಂ ಗೌಡ ಸೇರಿ ಎಂಟು ಜನ ಇದ್ದರು. ಸಂತೋಷ್ ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ ಎಂದು ಮೂಲಗಳು ತಿಳಿಸಿದೆ.

ಮುಂಡಗಾರು ಲತಾ ನಾಯಕತ್ವ ವಹಿಸುವಳೇ
ಎಂಟು ಜನ ಮಾರ್ಚ್‌ನಲ್ಲಿ ಕೊಡಗು, ದ.ಕ. ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದರು. ಎಂಟರಲ್ಲಿ ಈಗ ವಿಕ್ರಂ ಗೌಡ ಹತ್ಯೆಯಾಗಿದೆ. ಉಳಿದವರು ಇದೇ ತಂಡದಲ್ಲಿ ಇದ್ದರು. ಕಡೆಗುಂದಿಯಲ್ಲಿ ಮುಂಡಗಾರು ಲತಾ ಮತ್ತು ಜಯಣ್ಣ ಮಾತ್ರ ಕಾಣಿಸಿಕೊಂಡಿದ್ದು ಉಳಿದವರೂ ಸುತ್ತಮುತ್ತಲ ಕಾಡಿನಲ್ಲೇ ಇರಬಹುದು ಎಂಬ ಅನುಮಾನ ಇದೆ. ಉಳಿದ ನಕ್ಸಲರ ಪೈಕಿ ಕೊಪ್ಪ ತಾಲೂಕಿನ ಬುಕ್ಕಡಿಬೈಲಿನ ಮುಂಡಗಾರು ಲತಾ ಪ್ರಭಾವಿ ನಕ್ಸಲ್ ನಾಯಕಿಯಾಗಿದ್ದು ೫೦ ವಯಸ್ಸಿನ ಆಸುಪಾಸಿನಲ್ಲಿರುವ ಈಕೆ ಮುಂದಿನ ನಾಯಕಿಯಾಗಿ ನಕ್ಸಲ್ ತಂಡದ ನೇತೃತ್ವ ವಹಿಸುವ ಸಾಧ್ಯತೆಗಳಿದೆ. ಹತನಾದ ವಿಕ್ರಂ ಗೌಡ ಮಾತ್ರ ಶರಣಾಗತಿಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದ.
ಇನ್ನುಳಿದಂತೆ ಇತರ ನಕ್ಸಲ್ ಸದಸ್ಯರು ಶರಣಾಗತಿ ಬಯಸಿದ್ದರು ಎನ್ನುವ ಮಾತು ಕೇಳಿಬರುತ್ತಿದೆ. ಪರಾರಿಯಾದ ಎಲ್ಲಾ ನಕ್ಸಲರು ಸದ್ಯದಲ್ಲೇ ಸಿಕ್ಕಿಬೀಳುವ ಸಾಧ್ಯತೆ ಅಥವಾ ತಾವಾಗಿಯೇ ಶರಣಾಗುವ ಸಂಭವವೇ ಹೆಚ್ಚು ಎಂದು ಹೇಳಲಾಗುತ್ತಿದೆ.

ನಕಲಿ ಎನ್‌ಕೌಂಟರ್ ಮೂಲಕ ವಿಕ್ರಂ ಗೌಡನನ್ನು ಬಲಿ ಪಡೆಯಲಾಯಿತೇ?
ನಕಲಿ ಎನ್‌ಕೌಂಟರ್ ಮೂಲಕ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಬಲಿ ಪಡೆಯಲಾಯಿತೇ ಎಂಬ ಚರ್ಚೆ ನಡೆಯತೊಡಗಿದೆ.
ಅಲ್ಲದೆ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾಗಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ವಿಕ್ರಂ ಗೌಡನನ್ನು ಕೆಲವು ದಿನಗಳ ಹಿಂದೆ ಬೆಳ್ತಂಗಡಿ ಪರಿಸರದಲ್ಲಿ ಸೆರೆ ಹಿಡಿದು ಬಳಿಕ ಕೆಲವು ದಿನಗಳ ಕಾಲ ತಮ್ಮ ವಶದಲ್ಲಿ ಇರಿಸಿಕೊಂಡು ನಕ್ಸಲ್ ಚಟುವಟಿಕೆ ಹಾಗೂ ಸಹಚರರ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಬಳಿಕ ಹೆಬ್ರಿ ಕಬ್ಬಿನಾಲೆಗೆ ಕರೆದುಕೊಂಡು ಹೋಗಿ ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ವಿಕ್ರಂ ಗೌಡನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ವಿಚಾರವಾದಿಗಳು, ಪ್ರಗತಿಪರ ಚಿಂತಕರು, ಮಾಜಿ ನಕ್ಸಲರು ಮತ್ತು ಕಾರ್ಮಿಕ ನಾಯಕರು ಈ ಎನ್‌ಕೌಂಟರ್ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ನಕ್ಸಲರ ಮುಖಾಮುಖಿ ನಡೆದೇ ಇಲ್ಲ, ದಾಳಿ ಪ್ರತಿದಾಳಿ ನಡೆದಿರುವ ಕುರುಹೇ ಘಟನಾ ಸ್ಥಳದಲ್ಲಿ ಇಲ್ಲ. ಇದೊಂದು ನಕಲಿ ಎನ್‌ಕೌಂಟರ್ ಆಗಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮುನೀರ್ ಕಾಟಿಪಳ್ಳ ಮತ್ತು ನವೀನ್ ಸೂರಿಂಜೆ ನೇತೃತ್ವದ ಸಾಮಾಜಿಕ ಕಾರ್ಯಕರ್ತರ ನಿಯೋಗ ಅಭಿಪ್ರಾಯ ಪಟ್ಟಿದೆ.

ವಿಕ್ರಂ ಗೌಡ ಹತ್ಯೆ ತನಿಖೆಗೆ ಸಿಪಿಐಎಂ ನಾಯಕ ಬಿ.ಎಂ.ಭಟ್ ಆಗ್ರಹ
ಹೆಬ್ರಿ ಸಮೀಪ ನಕ್ಸಲ್ ಎಂದು ಹೇಳಿ ವಿಕ್ರಂ ಗೌಡ ಎಂಬವರನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕೊಲೆ ಎಂಬಂತೆ ಕಾಣುತ್ತಿದ್ದು ಇದಕ್ಕಾಗಿ ಸೂಕ್ತ ತನಿಖೆ ನಡೆಸಿ ಸತ್ಯಾಂಶ ಹೊರಹಾಕಬೇಕೆಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಆಗ್ರಹಿಸುತ್ತದೆ ಎಂದು ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ತಿಳಿಸಿದ್ದಾರೆ. ಮೂವರು ನಕ್ಸಲರನ್ನು ಬಂಧಿಸಲಾಗಿದೆ ಎಂಬ ವರದಿ ಈಗಾಗಲೇ ಸುದ್ದಿಯಾಗಿದ್ದು ಅವರನ್ನು ಏನು ಮಾಡಿದರು ಎಂಬ ವಿಚಾರವನ್ನೂ ಬಹಿರಂಗ ಪಡಿಸಬೇಕು. ಬಂಧನಕ್ಕೊಳಗಾದ ವ್ಯಕ್ತಿಯನ್ನು ಎನ್ಕೌಂಟರ್ ಹೆಸರಲ್ಲಿ ಕೊಲೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ನ್ಯಾಯಾಲಯ ಆತನನ್ನು ಅಪರಾಧಿ ಎಂದು ತೀರ್ಮಾನ ಕೊಡುವ ತನಕ ಆತನಿಗೆ ಶಿಕ್ಷೆ ಕೊಡುವುದು ದೇಶದ ಸಂವಿಧಾನ ವಿರೋಧಿ, ನ್ಯಾಯಾಂಗ ವ್ಯವಸ್ಥೆಯ ವಿರೋಧಿ ಮತ್ತು ಕಾನೂನು ವಿರೋಧಿ ಕೃತ್ಯವಾಗುತ್ತದೆ. ಮತ್ತು ಆತ ಮಾಡಿದ ಅಪರಾಧಿ ಕೃತ್ಯಗಳಾವುವು ಎಂಬುದು ಜನತೆಗೆ ಗೊತ್ತು ಮಾಡುವುದು ಸರಕಾರದ ಕರ್ತವ್ಯ.
ಬದುಕುವ ಹಕ್ಕಿಗಾಗಿ ನ್ಯಾಯಯುತ ಹೋರಾಟವನ್ನಷ್ಟೇ ಮಾಡಿರುವುದಾದರೆ ಅದು ಕ್ರಿಮಿನಲ್ ಅಪರಾಧವಾಗುವುದಿಲ್ಲ. ವಿಚಾರಣೆ ನಡೆಸದೇ ಕೊಲ್ಲುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ದ್ರೋಹವಾಗುತ್ತದೆ.
ಏನಿದ್ದರೂ ಸಮರ್ಪಕ ತನಿಕೆ ನಡೆಸಿದಾಗಷ್ಟೇ ಸತ್ಯ ಗೊತ್ತಾಗಲು ಸಾಧ್ಯ. ಆದ್ದರಿಂದ ನಿಜಾಂಶ ಹೊರಬರಲು ಸರಕಾರ ತಕ್ಷಣ ಈ ಎನ್ಕೌಂಟರ್ ಕಾರ್ಯಾಚರಣೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಬಿ.ಎಂ. ಭಟ್ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

ಕೇರಳ ಪೊಲೀಸರಿಂದ ಬಂಧಿತಳಾಗಿ ತೃಶೂರು ಜೈಲಿನಲ್ಲಿರುವ ನಕ್ಸಲ್ ಸಾವಿತ್ರಿ
ವೇಣೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಬಾಡಿವಾರಂಟ್‌ಗೆ ಮನವಿ
ಪರಿಶೀಲನೆ ನಡೆಸಲು ಬೆಳ್ತಂಗಡಿ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ

ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಡಿ ಕೇರಳ ಪೋಲೀಸರಿಂದ ಬಂಧನಕ್ಕೆ ಒಳಗಾಗಿ ತೃಶೂರು ಜೈಲಿನಲ್ಲಿರುವ ಸಾವಿತ್ರಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳ ಸಂಬಂಧ ವಿಚಾರಣೆಗೆ ಒಳಪಡಿಸಲು ಬಾಡಿ ವಾರಂಟ್ ಜಾರಿಗೊಳಿಸಬೇಕು ಎಂದು ಕೋರಿ ರಾಜ್ಯ ಸರಕಾರ ಸಲ್ಲಿಸಿರುವ ಮನವಿಯನ್ನು ಮರು ಪರಿಶೀಲಿಸುವಂತೆ ಬೆಳ್ತಂಗಡಿಯ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.
ಬೆಳ್ತಂಡಿ ಪೊಲೀಸ್ ವೃತ್ತ ನಿರೀಕ್ಷಕರ ವ್ಯಾಪ್ತಿಯ ವೇಣೂರು ಠಾಣೆ ಪೊಲೀಸರು ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕರಣವನ್ನು ಬೆಳ್ತಂಗಡಿ ಎಸಿಜೆ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ ಹಿಂದಿರುಗಿಸಿದೆ. ಅಲ್ಲದೆ ಸರಕಾರದ ಮನವಿಯನ್ನು ಮರು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಿದೆ. ಸಾವಿತ್ರಿ ಅಲಿಯಾಸ್ ಉಷಾ ಬಂಧನಕ್ಕೆ ಒಳಗಾಗಿದ್ದಾಳೆ. ಸದ್ಯ ಆಕೆ ಕೇರಳದ ತೃಶೂರ್ ಜೈಲಿನಲ್ಲಿದ್ದಾಳೆ. ೨೦೧೨ರಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಬಂಧ ಸಾವಿತ್ರಿಯನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್ ಜಗದೀಶ್ ವಿವರಿಸಿದರು. ಈ ವೇಳೆ ನ್ಯಾಯಮೂರ್ತಿಗಳು ಸಾವಿತ್ರಿ ವಿರುದ್ಧ ಬಾಡಿ ವಾರಂಟ್ ಜಾರಿಗೊಳಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದರಲ್ಲದೆ ಪ್ರಕರಣ ತನ್ನ ಮುಂದಿಲ್ಲ. ಪ್ರಕರಣದ ವಿಚಾರಣೆ ವ್ಯಾಪ್ತಿ ಹೊಂದಿರುವ ಕೋರ್ಟ್ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು.
ಜೈಲಿನಲ್ಲಿರುವ ಚಿಕ್ಕಮಗಳೂರು ಕಳಸದ ಸಾವಿತ್ರಿ ಎನ್‌ಕೌಂಟರ್‌ಗೆ ಬಲಿಯಾಗಿರುವ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ವಿಕ್ರಂ ಗೌಡನ ಪತ್ನಿ.

LEAVE A REPLY

Please enter your comment!
Please enter your name here