ಬೆಳ್ತಂಗಡಿ: ಕೊಯ್ಯೂರಿನಲ್ಲಿ ಬಸ್‌ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಕೊಯ್ಯೂರು ಗ್ರಾಮದ ಕೋರಿಯಾರು ನಿವಾಸಿ ದಾಮೋದರ ಭಟ್ ಅವರ ಪತ್ನಿ ರಾಜೀವಿ(50) ಅವರು ಡಿ.9ರಂದು ಮಧ್ಯಾಹ್ನ 2:35ರ ಸುಮಾರಿಗೆ ಬೆಳ್ತಂಗಡಿ ಪೇಟೆಗೆ ಹೋಗಿ ವಾಪಸ್ ಕೊಯ್ಯೂರು ಗ್ರಾಮದ ಪಾಂಬೇಲು ತಿರುವಿನ ಬಸ್ಸು ತಂಗುದಾಣದಲ್ಲಿ ಇಳಿದು ಕೋರಿಯಾರುನಲ್ಲಿರುವ ತನ್ನ ಮನೆಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೊಯ್ಯೂರು ಗ್ರಾಮದ ಡೆಂಬುಗ ಸಮೀಪದ ಗಿರಿಗುಡ್ಡೆ ನಿವಾಸಿ ಕೊರಗಪ್ಪ ಗೌಡ ಎಂಬವರ ಪುತ್ರ ಉಮೇಶ್ ಗೌಡ(40) ಎಂಬಾತ ಹಿಂದಿನಿಂದ ಹಿಂಬಾಲಿಸಿ ಬಂದು ರಾಜೀವಿ ಅವರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಬೊಬ್ಬೆ ಹಾಕದಂತೆ ಬೆದರಿಸಿ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರವನ್ನು ಎಳೆದಿದ್ದ. ರಾಜೀವಿ ಅವರು ಕರಿಮಣಿಯನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಎಳೆದ ರಭಸಕ್ಕೆ ಅವರ ಕುತ್ತಿಗೆ ಮತ್ತು ಎದೆಗೆ ಗಾಯವಾಗಿದ್ದು ಕರಿಮಣಿ ಎರಡು ತುಂಡಾಗಿತ್ತು. ಒಂದು ತುಂಡು ಕರಿಮಣಿಯನ್ನು ಉಮೇಶ್ ಗೌಡ ಹಿಡಿದು ಪಕ್ಕದಲ್ಲಿರುವ ಸರಕಾರಿ ಅರಣ್ಯ ಇಲಾಖೆಯ ಗೇರು ತೋಟದ ಗುಡ್ಡೆಯಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ಬೆಳ್ತಂಗಡಿ ಠಾಣಾ ಪೋಲಿಸರು ಹಾಗೂ ಸ್ಥಳೀಯ ಯುವಕರ ತಂಡ ತಡ ರಾತ್ರಿಯೂ ಕಾಡಿನಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದರು. ಗಾಯಗೊಂಡ ರಾಜೀವಿ ಅವರು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸುಮಾರು 1 ಲಕ್ಷ ರೂ ಮೌಲ್ಯದ 16 ಗ್ರಾಂ ಚಿನ್ನ ಕಳ್ಳತನ ಮಾಡಿರುವ ಬಗ್ಗೆ ಉಮೇಶ್ ಗೌಡನ ವಿರುದ್ಧ ರಾಜೀವಿ ಅವರು ನೀಡಿದ್ದ ದೂರಿನಂತೆ ಅ.ಕ್ರ. 100/2024ರಂತೆ ಪ್ರಕರಣ ದಾಖಲಾಗಿತ್ತು. ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದ ವಿಶೇಷ ತಂಡ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು. ಡಿ.೧೦ರಂದು ನಸುಕಿನ ವೇಳೆ ಉಮೇಶ್ ಗೌಡನನ್ನು ಆತನ ಮನೆಯಿಂದ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಎಸ್.ಪಿ. ಯತೀಶ್ ಎನ್, ಎಡಿಷನಲ್ ಎಸ್ಪಿ ರಾಜೇಂದ್ರ ಡಿ.ಎಸ್., ಬಂಟ್ವಾಳ ಡಿವೈಎಸ್‌ಪಿ ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ನಿರೀಕ್ಷಕ ನಾಗೇಶ್ ಕದ್ರಿ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಸ್.ಐ. ಮುರಳಿಧರ ನಾಯ್ಕ, ತನಿಖಾ ವಿಭಾಗದ ಎಸ್‌ಐ ಯಲ್ಲಪ್ಪ ಹೆಚ್.ಎಂ., ಸಿಬ್ಬಂದಿಗಳಾದ ಕೆ.ಜೆ. ತಿಲಕ್, ಬೆನ್ನಿಚ್ಚನ್, ಜಗದೀಶ್, ಗಂಗಾಧರ ಮತ್ತು ಚರಣರಾಜ್ ಅವರು ಉಮೇಶ ಗೌಡನ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.