

ಉಜಿರೆ: ಡಿ. 12 ರಂದು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಮಹಿಳೆಯರ ಅಭಿವೃದ್ಧಿಯಾಗುತ್ತದೆ ಎಂದು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಅಭಿಪ್ರಾಯಪಟ್ಟರು. ಎಸ್. ಡಿ. ಎಂ ಮಹಿಳಾ ಐ. ಟಿ. ಐ ಯಲ್ಲಿ ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ವತಿಯಿಂದ ಉಜಿರೆ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ‘ಕೌಶಲ್ಯಾಭಿವೃದ್ಧಿ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.

ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ, ಹೇಮಾವತಿ ವೀ. ಹೆಗ್ಗಡೆಯವರ ಆಶಯದಂತೆ ಮಹಿಳೆಯರ ಆರ್ಥಿಕ ಸಬಲೀಕರಣದ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇದರ ಜೊತೆಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಾಜದ ಹೆಣ್ಣುಮಕ್ಕಳು ಮುಂದೆ ಬರಲು ಅವಕಾಶ ಮಾಡಿಕೊಡುವ ಪ್ರಯತ್ನಕ್ಕೆ ನಮ್ಮ ಗ್ರಾಮ ಪಂಚಾಯತ್ ವತಿಯಿಂದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ರವಿಶಂಕರ ಕೆ. ಆರ್. ಮಹಿಳಾ ಐ. ಟಿ. ಐ. ಯ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಕುರಿತ ಭಿತ್ತಿಪತ್ರ ಅನಾವರಣಗೊಳಿಸಿದರು. “ಇಂತಹ ಕಾರ್ಯಾಗಾರಗಳಿಂದ ಕಾರ್ಯಕ್ರಮದ ಫಲಾನುಭವಿಗಳಿಗಷ್ಟೇ ಅಲ್ಲದೆ, ಕಾರ್ಯಕ್ರಮ ನೀಡುವ ವಿದ್ಯಾರ್ಥಿಗಳಿಗೂ ಭವಿಷ್ಯದ ದೃಷ್ಟಿಯಿಂದ ಪ್ರಯೋಜನವಾಗುತ್ತದೆ” ಎಂದರು. ಗ್ರಾಮ ಪಂಚಾಯತ್ ಸಹಯೋಗಕ್ಕೆ ಸಂತಸ ವ್ಯಕ್ತಪಡಿಸಿದರು. ಟೀಮ್ ವರ್ಕ್ ಮತ್ತು ನಾಯಕತ್ವ ಕುರಿತು ಉಪನ್ಯಾಸ ನೀಡಿದರು.
ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ಐಸ್ ಬ್ರೇಕ್, ಬ್ರೇನ್ ಸ್ಟಾರ್ಮಿಂಗ್ ಚಟುವಟಿಕೆಗಳು ಹಾಗೂ ಸಂದರ್ಶನ ಕುರಿತ ‘ಅನ್ ಲೀಶಿಂಗ್ ದಿ ಪವರ್ ಆಫ್ ಟೀಮ್ ವರ್ಕ್ ಆ್ಯಂಡ್ ಇಂಪ್ರೆಸ್ ಆ್ಯಂಡ್ ಸಕ್ಸೀಡ್: ದ ಇಂಟರ್ವ್ಯೂ ಪ್ಲೇ ಬುಕ್’ ವಿಚಾರ ಸಂಕಿರಣ ನಡೆಯಿತು.
ಮಹಿಳಾ ಐ. ಟಿ. ಐ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಅನುಶ್ರೀ ಹೆಗ್ಡೆ ಸ್ವಾಗತಿಸಿ, ಲೋಹಿತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಪಿ. ಜಿ. ವಂದಿಸಿದರು.