ಬೆಳ್ತಂಗಡಿ: ಶತಮಾನಗಳಿಂದ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಆದಿವಾಸಿ ಸಮುದಾಯಗಳಿಗೆ ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬೆಳಗಾವಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶತಮಾನಗಳಿಂದ ರಸ್ತೆ, ವಿದ್ಯುತ್ ಇಲ್ಲದೆ ಆದಿವಾಸಿಗಳು ವಾಸಿಸುತ್ತಿದ್ದಾರೆ. ಇಂದಿಗೂ ಚಿಮಿಣಿ ದೀಪದಲ್ಲಿ ಜೀವಿಸುಂತಾಗಿದೆ. ರಸ್ತೆ ಇಲ್ಲದೆ ಹತ್ತಾರು ಕಿ.ಮೀ ನಡೆದುಕೊಂಡೇ ನದಿ, ಹಳ್ಳ, ತೊರೆಗಳನ್ನು ದಾಟಿ ಹೋಗಬೇಕಾಗಿದೆ ಎಂದು ಸಮಸ್ಯೆಯ ಗಂಭೀರತೆಯನ್ನು ಮುಖ್ಯಮಂತ್ರಿಗಳ ಗಮನ ಸೆಳೆದರು.
ಜೊತೆಗೆ ಇತರ ಆದಿವಾಸಿ ಕಾಲನಿಗಳೂ ಮೂಲಭೂತ ಸೌಕರ್ಯ ವಂಚಿತವಾಗಿದೆ. ಇದಕ್ಕಾಗಿ ವಿಶೇಷ ಅನುದಾನ ಬೆಳ್ತಂಗಡಿ ತಾಲೂಕಿಗೆ ಬಿಡುಗಡೆ ಮಾಡಲು ವಿನಂತಿಸಿದರು. ಇದೇ ಸಂದರ್ಭದಲ್ಲಿ ಈಗಾಗಲೇ ರಾಜ್ಯದ ಆದಿವಾಸಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿರುವ ಬಗ್ಗೆ ಅಭಿನಂದನೆ ಸಲ್ಲಿಸಿದರು.