ಉಪಲೋಕಾಯುಕ್ತರಿಂದ ಅಹವಾಲು ಸ್ವೀಕಾರ – ಬೆಳ್ತಂಗಡಿಯವರಿಂದ 7ದೂರು ಅರ್ಜಿ ಸಲ್ಲಿಕೆ

0

ಬೆಳ್ತಂಗಡಿ: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಜನರ ದೂರು ವಿಚಾರಣೆ ನಡೆಸಿ ಅಹವಾಲು ಆಲಿಸಿದ ವೇಳೆ ಬೆಳ್ತಂಗಡಿ ತಾಲೂಕಿನಿಂದ 7 ದೂರು ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಲಾಗಿದ್ದು ಲೋಕಾಯುಕ್ತ ನ್ಯಾಯಮೂರ್ತಿಯವರು ಮುಂದಿನ ಹಂತದಲ್ಲಿ ಇವುಗಳ ತನಿಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಲಿದ್ದಾರೆ.
ಸ್ಮಶಾನಕ್ಕೆ ಮೀಸಲಿಟ್ಟ ಜಾಗದ ರಕ್ಷಣೆಗೆ ಕ್ರಮ ಕೈಗೊಳ್ಳದ ಬಗ್ಗೆ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಗರಂ ಆಗಿ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಮೀಸಲಾತಿ ಗುತ್ತಿಗೆ ಕಾಮಗಾರಿಯಲ್ಲಿ ಕರ್ತವ್ಯ ಲೋಪ ಮಾಡಲಾಗಿದೆ ಎಂದು ಕನ್ಯಾಡಿಯ ಪ್ರಭಾಕರ ನಾಯ್ಕ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು 94 ಸಿ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಹರ್ಷೇಂದ್ರ ಪರಾರಿಮಜಲು, ೯೪ ಸಿಗೆ ಸಲ್ಲಿಸಿದ್ದ ಅರ್ಜಿ ಇಲಾಖೆಯಲ್ಲಿ ಕಾಣೆಯಾಗಿದೆ ಎಂದು ಅಶ್ರಫ್ ಬಾರ್ಯ, ಧರ್ಮಸ್ಥಳದ ನೀರಚಿಲುಮೆಯಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಲಾಗಿದೆ ಎಂದು ಕಾರ್ತಿಕ್ ಧರ್ಮಸ್ಥಳ, ಗರ್ಡಾಡಿಯ ನಂದಿಕೇಶ್ವರ ದೇವಸ್ಥಾನದಲ್ಲಿ ಹಣ ದುರುಪಯೋಗ ಆಗಿದೆ ಮತ್ತು ಮಂಜೂರಾದ ಜಾಗವನ್ನು ಬಿಟ್ಟು ಬೇರೆ ಕಡೆ ಕೆರೆ ನಿರ್ಮಾಣ ಮಾಡಲಾಗಿದೆ ಎಂದು ಸುದರ್ಶನ್ ನಂದಿಬೆಟ್ಟು ಅವರು ಉಪಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಈ ದೂರು ಅರ್ಜಿಗಳು ವಿಚಾರಣೆಗೆ ಅಂಗೀಕಾರವಾಗಿದೆ.

LEAVE A REPLY

Please enter your comment!
Please enter your name here