ಮೂಡುಬಿದಿರೆ: ಆಳ್ವಾಸ್ ಶಿಕ್ಷಣದ ಪ್ರತಿಷ್ಠಾನ ಆಯೋಜಿಸುವ 30ನೇ ವರ್ಷದ ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ವೈಶಿಷ್ಟ್ಯಪೂರ್ಣ ಮೇಳಗಳ ಜೊತೆಗೆ ಡಿ. 10 ರಿಂದ 15 ರವರೆಗೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
30ನೇ ವರ್ಷದ ವಿರಾಸತ್ ಬಹಳ ಮಹತ್ವಪೂರ್ಣವಾಗಿದ್ದು, ವೈವಿಧ್ಯಮಯ ಕಾರ‍್ಯಕ್ರಮಗಳ ಮೂಲಕ ವೈಶಿಷ್ಟ್ಯಪೂರ್ಣಗೊಳಿಸಲಾಗಿದೆ. ಸಾಂಸ್ಕೃತಿಕ ವೈಭವದ ಜೊತೆಗಿನ ಮೇಳಗಳು, ಕಲಿಕೆ ಹಾಗೂ ಜೀವನೋಲ್ಲಾಸದ ಸೆಲೆಗಳಾಗಿವೆ. ಈ ಬಾರಿ ಸಾಂಘಿಕ ಪ್ರದರ್ಶನಗಳಿಗೆ ಒತ್ತು ನೀಡಲಾಗಿದ್ದು, ವಿವಿಧತೆಯಲ್ಲಿ ಏಕತೆಯ ಅಭಿವ್ಯಕ್ತಿಯಾಗಲಿದೆ. ಡಿ. 10 ರಿಂದ ಡಿ. 14 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೇಳಗಳಿದ್ದರೆ, ಡಿ. 15 ರಂದು ಸಂಪೂರ್ಣವಾಗಿ ಮೇಳ ಹಾಗೂ ಪ್ರದರ್ಶನಗಳಿಗೆ ಮೀಸಲಿಡಲಾಗಿದೆ. ಪ್ರವೇಶ ಸಂಪೂರ್ಣ ಉಚಿತವಾಗಿದೆ.
ಆಳ್ವಾಸ್ ಶಿಕ್ಷಣದ ಪ್ರತಿಷ್ಠಾನ ಆಯೋಜಿಸುವ 30ನೇ ವರ್ಷದ ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವು ವೈಶಿಷ್ಟ್ಯಪೂರ್ಣ ಮೇಳಗಳ ಜೊತೆಗೆ ಡಿ. 10 ರಿಂದ 15ರವರೆಗೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಡಿ.10 ರಂದು ಉದ್ಘಾಟನೆ ನಡೆಯಲಿದ್ದು, ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಡಿ.10 ರ ಸಂಜೆ 5.30 ರಿಂದ 6.30 ರವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸುವರು. ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ. ಪಿ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ. ಜಿ. ಆರ್. ಸಿಂಧಿಯಾ, ಬಿ. ಎಲ್ ಶಂಕರ್ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರಕುಮಾರ್, ಎಂ. ಜಿ. ಆರ್ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಮುಂಬಯಿ ಹೇರಂಭಾ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಅದಾನಿ ಗ್ರೂಪ್ ಕಾಯರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬರೋಡ ಶಶಿ ಕೇಟರಿಂಗ್ ಸರ್ವೀಸಸ್ ಆಡಳಿತ ನಿರ್ದೇಶಕ ಶಶಿಧರ ಶೆಟ್ಟಿ, ಬೆಂಗಳೂರು ಕೆ. ಎಲ್. ಎನ್ ಎಂಜಿನಿಯರಿಂಗ್ ಆಡಳಿತ ನಿರ್ದೇಶಕ ಪ್ರಸನ್ನ ಕುಮಾರ್ ಶೆಟ್ಟಿ, ಬಳ್ಳಾರಿ ಕುಮಾರಸ್ವಾಮಿ ಮಿನರಲ್ ಎಕ್ಸ್‌ಪೋರ್ಟ್ಸ್ ಎಂ. ರವೀಂದ್ರನಾಥ ಆಳ್ವ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೂಡುಬಿದಿರೆ ಜಯಶ್ರೀ ಅಮರನಾಥ ಶೆಟ್ಟಿ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ಮೂಡುಬಿದಿರೆ ಧನಲಕ್ಷ್ಮೀ ಕ್ಯಾಶ್ಯೂಸ್ ಆಡಳಿತ ನಿರ್ದೇಶಕ ಕೆ. ಶ್ರೀಪತಿ ಭಟ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ., ಮಂಗಳೂರು ಭಾರತ್ ಇನ್‌ಫ್ರಾಟೆಕ್‌ನ ಮುಸ್ತಾಫ ಎಸ್. ಎಂ ಮೂಡುಬಿದಿರೆ ಬಿಮಲ್ ಕನ್‌ಸ್ಟ್ರಕ್ಷನ್ಸ್ ಪ್ರವೀಣ್ ಕುಮಾರ್ ಉಪಸ್ಥಿತರಿರುವರು.
ಭವ್ಯ ಸಾಂಸ್ಕೃತಿಕ ಮೆರವಣಿಗೆ ಸಂಜೆ 6.30 ರಿಂದ ರಾತ್ರಿ 8.30 ರವರೆಗೆ ನಡೆಯಲಿದ್ದು, 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳಿಂದ 3000ಕ್ಕೂ ಮಿಕ್ಕಿದ ಕಲಾವಿದರನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
ರಥಾರತಿ ರಾತ್ರಿ 8.30 ರಿಂದ 9.30 ರವರೆಗೆ ವೇದಘೋಷಗಳು, ಭಜನೆಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ, ಸರಸ್ವತಿ, ಲಕ್ಷ್ಮೀ, ಹನುಮಂತ, ಶ್ರೀರಾಮ, ಶ್ರೀ ಕೃಷ್ಣಾದಿ ಆರೂಢ ದೇವರ ಮೆರವಣಿಗೆಯೊಂದಿಗೆ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ.
ಡಿ.10 ರಂದು ಸಂಜೆ 5.45 ರಿಂದ 6.30 ರವರೆಗೆ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಬಾರಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದು. ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಪ್ರಶಸ್ತಿ ಪ್ರದಾನ ನಡೆಸಲಿದ್ದಾರೆ. ನಂತರ 6.30 ರಿಂದ 7.30 ರವರೆಗೆ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡುವರು. ಬಳಿಕ ರಾತ್ರಿ 7.45 ರಿಂದ 9 ರವರೆಗೆ ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ 9 ರಿಂದ ಆಳ್ವಾಸ್ ವೈವಿಧ್ಯಮಯ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.
ಡಿ. 12 ರಂದು ಸಂಜೆ 5.45 ಕ್ಕೆ ದೀಪ ಪ್ರಜ್ವಲನ ಹಾಗೂ 5.55 ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6 ರಿಂದ 8 ರವೆರೆಗೆ ಗುಜರಾತ್ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15 ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಉಡುಪಿ ಕೊಡವೂರು ನೃತ್ಯ ನಿಕೇತನ, ಬೆಂಗಳೂರು ಚಿಗುರು ನೃತ್ಯಾಲಯ, ಮಂಗಳೂರು ಸನಾತನ ನಾಟ್ಯಾಲಯ, ಕುಂದಾಪುರ ನೃತ್ಯ ವಸಂತ ನಾಟ್ಯಾಲಯ, ಮಂಗಳೂರು ಗಾನ ನೃತ್ಯ ಅಕಾಡೆಮಿ. ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಕಲಾವಿದರು ನೃತ್ಯ ವೈವಿಧ್ಯ ನಡೆಸಿಕೊಡುವರು. ರಾತ್ರಿ 9.15 ರಿಂದ ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.
ಡಿ. 13 ರಂದು ಸಂಜೆ 5.45 ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6 ರಿಂದ 8 ಗಂಟೆಯವರೆಗೆ ನೀಲಾದ್ರಿ ಕುಮಾರ್ ಮತ್ತು ತಂಡದಿಂದ ‘ಸೌಂಡ್ ಆಫ್ ಇಂಡಿಯಾ’ ಹಾಗೂ 8.15 ರಿಂದ 9 ರವರೆಗೆ ಕೋಲ್ಕತ್ತಾದ ಆಶೀಮ್ ಬಂಧು ಭಟ್ಟಾಚಾರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. ರಾತ್ರಿ 9 ರಿಂದ ಬೆಂಗಳೂರು ಕಾರ್ತೀಸ್ ಪರ್‌ಫಾರ್ಮಿಂಗ್ ಆರ್ಟ್ಸ್ ‘ನೃತ್ಯೋಲ್ಲಾಸ’ ಹಾಗೂ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಡಿ. 14 ರಂದು ಸಂಜೆ 5.45 ಕ್ಕೆ ದೀಪ ಪ್ರಜ್ವಲನ ಹಾಗೂ 5.55 ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6 ರಿಂದ 9 ರವರೆಗೆ ಚೆನ್ನೈ ಸ್ಟೆಕೇಟೋದ ಖ್ಯಾತ 25 ಕಲಾವಿದರಿಂದ ಭರ್ಜರಿ ‘ಸಂಗೀತ ರಸದೌತಣ’ ಹಾಗೂ ರಾತ್ರಿ 9 ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನ ನಡೆಯಲಿದೆ.
ಡಿ.15 ರಂದು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತದೆ.
ಸೂಚನೆ: ಕಾರ್ಯಕ್ರಮಗಳು ಸರಿಯಾದ ಸಮಯಕ್ಕೆ ಆರಂಭವಾಗುತ್ತವೆ. 40 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೂ 15ನಿಮಿಷ ಮೊದಲೇ ಆಸನ ಸ್ವೀಕರಿಸಬೇಕಾಗಿ ವಿನಂತಿ. ಮೂಡುಬಿದಿರೆಯ ಪ್ರಕೃತಿ ರಮಣೀಯ ಪ್ರಶಾಂತ ವಾತಾವರಣದ ವಿಶಾಲ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿವೆ. ವಾಹನ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಟುಂಬ ಸಮೇತರಾಗಿ ಬಂದು ನೋಡಲೇಬೇಕಾದ ಅಪೂರ್ವ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಹಾ ಮೇಳಗಳು
ಕೈಮಗ್ಗ ಸೀರೆಗಳ ಉತ್ಸವ: ಭಾರತದ 30 ಪ್ರದೇಶಾವಾರು ಹಾಗೂ ಜಿ.ಐ ಟ್ಯಾಗ್ ಹೊಂದಿರುವ ಕೈಮಗ್ಗ ಸೀರೆಗಳ ಹಾಗೂ ಬಟ್ಟೆಗಳ ಉತ್ಸವ ವಿರಾಸತ್‌ನ ಮಹಾಮೇಳಗಳಲ್ಲಿ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಭಾರತೀಯ ಪರಂಪರೆಯನ್ನು ಬಿಂಬಿಸುವ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ನೇಕಾರರಿಂದ ಗ್ರಾಹಕಕರಿಗೆ ನೇರ ಮರಾಟ ನಡೆಯಲಿದೆ. ಜಿ.ಐ ಟ್ಯಾಗ್ ಹೊಂದಿರುವ ಮತ್ತು ಪ್ರಸಿದ್ಧಿ ಪಡೆದಿರುವ ಕೈಮಗ್ಗದ ಉತ್ಪನ್ನಗಳು ಉಡುಪಿ, ಇಳಕಲ್, ಕೋಲ್ಕತ್ತಾ, ತುಮ್ಮಿನಕಟ್ಟೆ, ವೆಂಕಟಗಿರಿ, ಕಾಶ್ಮೀರಿ, ಕಂಚೀವರಮಂ, ಮೈಸೂರು, ಕೊಳ್ಳೇಗಾಲ, ದಾವಣೆಗೆರೆ, ಚೆಟ್ಟಿನಾಡ್, ಕೇರಳ, ಹೈದ್ರಾಬಾದ್, ಮದ್ರಾಸ್‌ನ ಸೀರೆಗಳು ಮತ್ತು ಬಟ್ಟೆಗಳು ಮಾರಾಟಕ್ಕಿವೆ. ಈ ಉತ್ಸವವು ಉಡುಪಿಯ ಪದ್ಮಶಾಲಿ ನೇಕಾರರ ಪ್ರತಿಷ್ಠಾನದ ಸಹಕಾರದೊಂದಿಗೆ ನೆರವೇರುತ್ತಿದೆ.
ಇಂಡಿಯನ್ ಆರ್ಟಿಸಾನ್ ಬಝಾರ್: ಕಲೆ ಮತ್ತು ಕರಕುಶಲ ವಸ್ತುಗಳು, ಉಡುಪುಗಳು, ಆಭರಣಗಳು, ಗೃಹಾಲಂಕಾರಿಕ ವಸ್ತುಗಳು, ಅಪರೂಪದ ಹಾಗೂ ಸಮಕಾಲೀನ ವಸ್ತುಗಳ ಬಝಾರ್ ಈ ಬಾರಿಯ ವಿರಾಸತ್‌ನಲ್ಲಿ ನಡೆಯಲಿದೆ. ಭಾರತದಾದ್ಯಂತ ತಯಾರಾದ ವೈವಿಧ್ಯಮಯ ಕರಕುಶಲ ವಸ್ತುಗಳು, ಆಯಾರಾಜ್ಯಗಳ ಕರಕುಶಲ ಕರ್ಮಿಗಳಿಂದ ನೇರ ಮಾರಾಟ ನಡೆಯಲಿದೆ. ಬೆಂಗಳೂರು ಆರ್ಟ್ಸ್ ಮತ್ತು ಕ್ರಾಫ್ಟ್ ಮೇಳ ಹಾಗೂ ದೆಹಲಿಯ ಮೀನಾ ಬಝಾರ್ ಮೇಳಗಳಂತೆ ಈ ಮೇಳ ನಡೆಯಲಿದೆ.
ಕೃಷಿ ಮೇಳ: ಕೃಷಿ ಕ್ಷೇತ್ರದ ಕುರಿತು ಯುವಜನತೆಯಲ್ಲಿ ಭರವಸೆಯ ಹೊಂಗಿರಣವನ್ನು ಮೂಡಿಸುವ ನಿಟ್ಟಿನಲ್ಲಿ ರೈತರು ಹಾಗೂ ಕೃಷಿ ಸಂಸ್ಕೃತಿಯನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ಆಳ್ವಾಸ್, ವಿಶೇಷವಾಗಿ ‘ಕೃಷಿ ಮೇಳ’ವನ್ನು ಆಯೋಜಿಸಿದೆ. ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣವನ್ನು ಕೃಷಿ ಮೇಳ ನೀಡಲಿದೆ. ಇದು ಕೇವಲ ಪ್ರದರ್ಶನವಲ್ಲ, ಮಾರಾಟ ಮಳಿಗೆಗಳು, ಅನುಭವ ಪ್ರಾತ್ಯಕ್ಷಿಕೆಗಳೂ ಇರಲಿವೆ. ಈ ಬಾರಿ ಕೃಷಿ ಮೇಳದಲ್ಲಿ ಹಣ್ಣು- ತರಕಾರಿ, ಬೀಜಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಸಸ್ಯ ಪ್ರಭೇದಗಳು, ಕೃಷಿ ಉಪಕರಣ- ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ. ವಿವಿಧ ಕೃಷಿ ಸಸ್ಯ ಪ್ರಭೇದಗಳ ಬೀಜ, ಅವುಗಳನ್ನು ಬೆಳೆಸಲು ಬೇಕಾದ ಯಂತ್ರ- ತಾಂತ್ರಿಕ ಸಲಕರಣೆಗಳು, ಕೃಷಿ ಉತ್ಪನ್ನಗಳು
ಈ ಬಾರಿಯ ವಿಶೇಷ ಆಕರ್ಷಣೆ: ಈ ಬಾರಿಯ ಪ್ರಮುಖ ಆಕರ್ಷಣೆ ಎಂದರೆ “ರೈತರ ಸಂತೆ”. ಈ ರೈತರ ಸಂತೆಯಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ಮೊದಲು ಬಂದವರಿಗೆ ಮೊದಲ ಆದ್ಯತೆ. ರೈತರೇ ನೇರವಾಗಿ ತಾವು ಬೆಳೆದ ತರಕಾರಿ, ಹಣ್ಣು ಪುಷ್ಪಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ.
ಒಟ್ಟಾರೆ ಈ ಮಹಾಮೇಳದಲ್ಲಿ 500 ರಿಂದ 600 ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇಸ್ರೇಲ್ ತಂತ್ರಜ್ಞಾನ ಬಳಸಿ ಬೆಳೆದ ತರಕಾರಿ, ಹಣ್ಣು-ಹಂಪಲು, ಹೂವು- ಅಲಂಕಾರಿಕ ಗಿಡಗಳು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿವೆ.
ಆಹಾರ ಮೇಳ: ಈ ಬಾರಿಯ ಆಳ್ವಾಸ್ ವಿರಾಸತ್‌ನಲ್ಲಿ ಆಹಾರ ಮೇಳದಲ್ಲಿ ಹೊಟ್ಟೆಗೆ ಹಿಟ್ಟು ಮಾತ್ರವಲ್ಲ, ಕಣ್ಣಿಗೆ ಸೌಂದರ್ಯ, ನಾಸಿಕಕ್ಕೆ ಕಂಪು, ಬಾಯಲ್ಲಿ ನೀರೂರಿಸುವ ರುಚಿಗಳಿವೆ. ತುಳುನಾಡಿನ ಪರಂಪರೆಯಿಂದ ಹಿಡಿದು, ಅಪ್ಪಟ ದೇಸೀಯ ತಿನಿಸು, ಇಂದಿನ ಫಾಸ್ಟ್ಫುಡ್ ವರೆಗಿನ ಆಹಾರ ವೈವಿಧ್ಯಗಳು ಲಭ್ಯ. ನಾಲಗೆಯಲ್ಲಿ ಖಾರ, ಹುಳಿ, ಉಪ್ಪು, ಸಿಹಿ…ಗಳ ಸಂಗಮ. ವಿಭಿನ್ನ ಆಹಾರ ಹಾಗೂ ಆಹಾರೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇದೆ.
ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ: ಅಂತಹ ಪಾರಂಪರಿಕ ಸೌಂದರ್ಯವನ್ನು ಪಂಚೇಂದ್ರೀಯಗಳ ಮೂಲಕ ಅನುಭವಿಸುವುದೂ ಜ್ಞಾನಾರ್ಜನೆ. ಇಂತಹ ಕರಕುಶಲ ಮತ್ತು ಪ್ರಾಚ್ಯವಸ್ತುಗಳ ಮೇಳವು ವಿರಾಸತ್‌ನ ಸೊಬಗು. ದೇಶದ ಈಶಾನ್ಯ, ಉತ್ತರ, ಪೂರ್ವ ಸೇರಿದಂತೆ ಅಷ್ಟದಿಕ್ಕುಗಳಲ್ಲಿನ ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗುಡಿಕೈಗಾರಿಕೆ, ಕರಕುಶಲ, ಪ್ರಾಚ್ಯವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿವೆ.
ಫಲಪುಷ್ಪ ಮೇಳ: ಫಲ ಹಾಗೂ ಪುಷ್ಪವು ನಮ್ಮ ಸಂಸ್ಕೃತಿಯಲ್ಲಿ ಆತಿಥ್ಯ ಹಾಗೂ ಗೌರವದ ದ್ಯೋತಕ. ಆದರೆ, ಬಯಲು ಸೀಮೆ, ಉತ್ತರ ಕರ್ನಾಟಕ, ಮಹಾರಾಷ್ಟ್ರ ಇತ್ಯಾದಿ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಹೂ, ತರಕಾರಿ, ಹಣ್ಣು ಹಂಪಲುಗಳ ಕೃಷಿ ಕೊಂಚ ವಿರಳವಾಗಿದೆ. ಅದಕ್ಕಾಗಿ ತರಹೇವಾರಿ ಫಲ, ಪುಷ್ಪ, ತರಕಾರಿಗಳ ಪ್ರದರ್ಶನ ಮೇಳದಲ್ಲಿ ಇರಲಿದೆ. ದೇಶ-ವಿದೇಶಗಳಿಂದ ತಂದ ತಳಿಗಳು, ನಮ್ಮದೇ ಮಣ್ಣಿನ ದೇಸೀಯ ತಳಿಗಳು, ಕಸಿ ಮಾಡಿದ ವೈವಿಧ್ಯ ಫಲಗಳು ಇರಲಿವೆ. ಕೇವಲ ಹೂ-ಹಣ್ಣು ಮಾತ್ರವಲ್ಲ, ಅವುಗಳಿಂದ ಮಾಡಿದ ಕಲಾಕೃತಿಗಳೂ ಮನ ಸೆಳೆಯಲಿವೆ. ಬಾಲಾದಿವೃದ್ಧರಾಗಿ ಎಲ್ಲರೂ ಬಂದು ಆನಂದಿಸಬಹುದು. ಹೆಣ್ಣು ಮಕ್ಕಳಿಗೆ ಈ ಮೇಳ ಸ್ಪಲ್ಪ ಹೆಚ್ಚು ಖುಷಿ ನೀಡಲಿದೆ. ಇದನ್ನು ಕುಟುಂಬ ಸಮೇತ ಬಂದು ನೋಡಬೇಕು. ನಮ್ಮ ಸೌಂದರ್ಯ ಪ್ರಜ್ಞೆ ಹಾಗೂ ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ.
ಲಲಿತಾಕಲಾ ಮೇಳ: ವಿರಾಸತ್‌ನ ಮತ್ತೊಂದು ದೃಶ್ಯಸೊಬಗು ಚಿತ್ರಕಲಾ ಮೇಳ. ಬಣ್ಣ- ಕುಂಚದ ಮೂಲಕ ರಂಗು ಮೂಡಿಸುವ, ಬಣ್ಣದಾಟದಲ್ಲೇ ಸಂದೇಶ ರವಾನಿಸುವ ಕಲಾವಿದರ ಕೌಶಲ ಹಾಗೂ ಸೃಜನಶೀಲತೆಯೇ ಈ ಕಲಾಕೃತಿಗಳು. ದೇಶ-ವಿದೇಶ ವಿಖ್ಯಾತ ಚಿತ್ರಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಇರಲಿದೆ.
ಛಾಯಾಚಿತ್ರಗಳ ಪ್ರದರ್ಶನ: ಒಂದು ಛಾಯಾಚಿತ್ರ ಸಾವಿರ ಶಬ್ದಗಳಿವೆ ಸಮ ಎಂಬುದು ಉಕ್ತಿ. ಸೃಜನಶೀಲತೆಯಿಂದ ಸೆರೆ ಹಿಡಿದ ಬಣ್ಣ-ಬೆಳಕು-ನೆರಳಿನ ಚಿತ್ತಾರವು ನೈಜತೆಗೂ ಸಾಕ್ಷಿ. ಅಂತಹ ವಿಶ್ವಮಾನ್ಯ ಪರಿಸರ ಮತ್ತು ವನ್ಯಜೀವಿಗಳು, ಬುಡಕಟ್ಟು ಸಮುದಾಯಗಳನ್ನು ಪ್ರತಿಬಿಭಿಸುವ 600ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ಇರಲಿದೆ.
ಕಲಾಕೃತಿಗಳ ಪ್ರದರ್ಶನ: ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದಲ್ಲಿ ವಿಶೇಷ ಕಲಾಕೃತಿಗಳ ಬೃಹತ್ ಪ್ರದರ್ಶನ ಇರಲಿವೆ. ಇವು ಬಾಲಾದಿವೃದ್ಧರಾಗಿ ಎಲ್ಲರನ್ನು ಸೆಳೆಯಲಿದೆ. ನೈಜ ರೂಪವೇ ಅವತರಿಸಿದ ಸ್ವರೂಪದಲ್ಲಿ ಈ ಕಲಾಕೃತಿಗಳು ಕಂಗೊಳಿಸಲಿವೆ. ಇವುಗಳು ಒಂದು ರೀತಿಯ ಸೆಲ್ಫಿ ಕೇಂದ್ರಗಳೂ ಹೌದು.
ರಾಜ್ಯಮಟ್ಟದ ಸ್ಕೌಟ್ಸ್-ಗೈಡ್ಸ್, ರೋವರ್ಸ್- ರೇಂಜರ್ಸ್ ಸಾಂಸ್ಕೃತಿಕ ಉತ್ಸವ: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ವು ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿ ಶಿಬಿರ ಆಯೋಜಿಸಿದೆ. ದಿನವೊಂದಕ್ಕೆ ಆರು ವಿವಿಧ ಚಟುವಟಿಕೆಗಳ ಮೂಲಕ ಈ ಶಿಬಿರವು 5 ದಿನಗಳ ಕಾಲ ನಡೆಯಲಿದ್ದು ಶಿಬಿರಾರ್ಥಿಗಳಿಗೆ ದೇಶಪ್ರೇಮ-ದೇಶಿಯತೆ, ದೇಶೀಯ ಕಲೆಗಳ ಅನಾವರಣ, ಪರಿಸರ ಪ್ರಜ್ಞೆ, ಸಾಹಸ ಕ್ರೀಡೆಗಳು, ಸೌಹಾರ್ದತೆ ಸಾಮರಸ್ಯ ಬದುಕಿನ ತಿಳುವಳಿಕೆ, ಸೌಂದರ್ಯ ಪ್ರಜ್ಞೆ, ಕೃಷಿಯ ಬದುಕು, ಕರಕುಶಲಗಳ ತಿಳುವಳಿಕೆ, ದೇಶೀಯ ಆಹಾರ ಪದಾರ್ಥಗಳ ಪರಿಚಯ, ಶಿಸ್ತು, ಸಮಯಪ್ರಜ್ಞೆ, ಸ್ವಚ್ಛತೆಯ ಪ್ರಾತ್ಯಕ್ಷಿಕೆಗಳ ಕಲಿಕೆ, ಮನೋರಂಜನೆಗಳು, ಯೋಗ, ಪ್ರಾಣಾಯಾಮ ತರಬೇತಿಗಳು, ಸೇವಾ ಮನೋಭಾವನೆ ಮೊದಲಾದ ವಿಚಾರಗಳಲ್ಲಿ ಅರ್ಥಪೂರ್ಣ ತರಬೇತಿ ನೀಡಲಾಗುವುದು.
ಭಾಗವಹಿಸುವ ಶಿಬಿರಾರ್ಥಿಗಳು ಡಿ. 9 ರಂದು ಸಂಜೆ 5.00 ಗಂಟೆಯ ಒಳಗಾಗಿ ಸ್ಕೌಟ್ಸ್ಸ್-ಗೈಡ್ಸ್ ಕನ್ನಡ ಭವನ, ಸ್ವರಾಜ್ಯ ಮೈದಾನ, ಮೂಡುಬಿದಿರೆ ಇಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಆಳ್ವಾಸ್ ಕಾಲೇಜು ಮೂಡುಬಿದಿರೆ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರು ಪ್ರಸಾದ ಶೆಟ್ಟಿ ಪತಿಕಾಗೋಷ್ಠಿಯಲ್ಲಿದ್ದರು.