ಬೆಳ್ತಂಗಡಿ: “ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ಸಿಬ್ಬಂದಿಯ ತೊಡಗಿಸಿಕೊಳ್ಳುವಿಕೆ ಮುಖ್ಯ. ನಮ್ಮಲ್ಲಿ ಇಂತಹ ಸಿಬ್ಬಂದಿ ಇದ್ದಾರೆ. ಪ್ರಶಸ್ತಿಗಳನ್ನು ಪಡೆಯಲು ಸಿಬ್ಬಂದಿಗಳು ಸಲ್ಲಿಸುವ ಸೇವೆ ಸ್ಮರಣೀಯ”
ಎಂದು ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶಾಂತಿವನದ ಟ್ರಸ್ಟಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಧರ್ಮಸ್ಥಳದ ಶಾಂತಿವನದಲ್ಲಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಯಕ್ಷಗಾನ ಕ್ಷೇತ್ರದ ಸಾಧಕ, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ತೋಳ್ಪಾಡಿತ್ತಾಯರದು ಕರ್ತೃತ್ವ ವ್ಯಕ್ತಿತ್ವ. ಇವರಿಗೆ ಸಿಕ್ಕ ಪ್ರಶಸ್ತಿಯಿಂದ ಶಾಂತಿವನಕ್ಕೆ ಇನ್ನೊಂದು ಗರಿ ಮೂಡಿದೆ. ಪ್ರಶಸ್ತಿಗಳಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ. ಉದ್ಯೋಗ ಬೆಳೆಸುವುದರಿಂದ ಅನೇಕ ಮನೆಗಳಲ್ಲಿ ದೀಪ ಬೆಳಗುವಂತಾಗುತ್ತದೆ” ಎಂದರು. ಅಭಿನಂದನೆ ಸ್ವೀಕರಿಸಿದ ಸೀತಾರಾಮ ತೋಳ್ಪಾಡಿತ್ತಾಯ ಮಾತನಾಡಿ” ಪ್ರತಿಯೊಬ್ಬನ ಪ್ರತಿಭೆ ಹೊರ ಹೊಮ್ಮಲು ವೇದಿಕೆಯ ಅಗತ್ಯ ಇದೆ. ನನಗೆ ಈ ಅವಕಾಶ ಒದಗಿಸಿ ಕೊಟ್ಟವರು ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು, ಹರ್ಷೇಂದ್ರ ಕುಮಾರ್ ಹಾಗು ಕುಟುಂಬದವರು. ಕ್ಷೇತ್ರದ ಶಿಸ್ತು ನನ್ನ ಬೆಳವಣಿಗೆ ಕಾರಣವಾಗಿದೆ. ಚಿಕ್ಕಂದಿನಿಂದಲೆ ಚಂಡೆ ವಾದನ ಆರಂಭಿಸಿದೆ. ಪೋಷಕರ ಅನೇಕ ಹಿರಿಯ ಕಲಾವಿದರ ಮಾರ್ಗದರ್ಶನ, ಪ್ರೇರಣೆಯಿಂದ ಕಲಿಕೆ ಮುಂದುವರಿಸಿದೆ” ಎಂದರು.
ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಮಾತನಾಡಿ” ತೋಳ್ಪಾಡಿತ್ತಾಯರ ಕಲಾ ಸೇವೆಯ ಗುಣಮಟ್ಟ ಅತ್ಯುತ್ತಮವಾದದ್ದು. ಸರ್ವಶ್ರೇಷ್ಠ ಕಲಾವಿದರ ಗರಡಿಯಲ್ಲಿ ಪಳಗಿದವರು” ಎಂದರು. ಎಸ್ ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನ ಪ್ರಿನ್ಸಿಪಾಲ್ ಡಾ.ಪ್ರಶಾಂತ್ ಶೆಟ್ಟಿ ಶುಭ ಹಾರೈಸಿದರು.
ಸುಪ್ರಿಯಾ ಹರ್ಷೇಂದ್ರ ಕುಮಾರ್, ಕೃಷ್ಣ ಸಿಂಗ್, ಎಸ್ ಡಿಎಂ ಉಜಿರೆ ಆಸ್ಪತ್ರೆಯ ಎಂಡಿ ಎಂ..ಜನಾರ್ದನ್, ಸಿರಿ ಸಂಸ್ಥೆಯ ಎಂಡಿ ಕೆ.ಎನ್.ಜನಾರ್ದನ್,ಮನೋರಮಾ ತೋಳ್ಪಾಡಿತ್ತಾಯ, ದೇವಸ್ಥಾನದ ಮಣೆಗಾರ್ ವಸಂತ ಕುಮಾರ್ ಉಪಸ್ಥಿತರಿದ್ದರು. ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸ್ಥಾನಿಕ ವೈದ್ಯಾಧಿಕಾರಿ ಡಾ.ಬಿಂದು ವಂದಿಸಿದರು. ಅನನ್ಯಾ ನಿರೂಪಿಸಿದರು. ಡಾ.ವೈಶಾಲಿ ಪರಿಚಯಿಸಿದರು. ಡಾ.ಸುಜಾತಾ ಸನ್ಮಾನ ಪತ್ರ ವಾಚಿಸಿದರು.