ಧರ್ಮಸ್ಥಳ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಉಜಿರೆಯ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಸಾಗಾಟ ವಾಹನ ಹಾಗೂ ದ. ಕ., ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಯ 507 ಶಾಲೆಗಳಿಗೆ 4044 ಜೊತೆ ಡೆಸ್ಕ್ ಬೆಂಚುಗಳ ವಿತರಣೆ ನ. 12ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಘನತ್ಯಾಜ್ಯ ಘಟಕದ ಸಾಗಾಟ ವಾಹನ ಮತ್ತು ಯಂತ್ರೋಪಕರಣ ಹಸ್ತಾಂತರ ಮತ್ತು ಡೆಸ್ಕ್ ಬೆಂಚು ಮಂಜೂರಾತಿ ಪತ್ರ ವಿತರಿಸಿದರು. ಡಾ. ಹೇಮಾವತಿ ವಿ. ಹೆಗ್ಗಡೆ ಜ್ಞಾನದೀಪ ಶಿಕ್ಷಕರಿಗೆ ಆದೇಶ ಪತ್ರ ವಿತರಿಸಿದರು.
ದ. ಕ. ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ್ ಸುಬ್ರಾಯ ಪಟಗಾರ, ದ. ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಆನಂದ ಕೆ., ಬೆಳ್ತಂಗಡಿ ಪ್ರಭಾರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳಪುಲೆ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಭವಾನಿ ಶಂಕರ್, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್. ಪ್ರಸ್ತಾಪಿಸಿದರು. ಶುದ್ಧ ಗಂಗಾ ಯೋಜನೆಯ ನಿರ್ದೇಶಕ ಶಿವಾನಂದ ಆಚಾರ್ಯ ನಿರೂಪಿಸಿದರು. ಯೋಜನೆಯ ಮೂಲಕ ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಸುಧಾರಣೆಗಾಗಿ ಕಳೆದ 30 ವರ್ಷಗಳ ಹಿಂದೆ ‘ಜ್ಞಾನದೀಪ ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತಂದು ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರ ಕೊರತೆ ಇರುವ ಸರಕಾರಿ ಹಾಗೂ ಆಯ್ದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರನ್ನು ಒದಗಿಸಲಾಗುತ್ತಿದ್ದು, ಪ್ರಸ್ತುತ ವರ್ಷವೂ ಕೂಡ 1030 ಸ್ವಯಂಸೇವಕ ಶಿಕ್ಷಕ/ಶಿಕ್ಷಕಿಯರು ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣಮಟ್ಟ ಸುಧಾರಣೆ ಹಾಗೂ ಕಲಿಕಾ ವಾತಾವರಣ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರಂತೆ ಶಾಲಾ ಕೊಠಡಿ, ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ, ಶಾಲಾ ರಂಗಮಂದಿರ, ಶಾಲಾ ಆವರಣ, ಶಾಲಾ ಕಟ್ಟಡಗಳ ದುರಸ್ತಿ, ಶಾಲಾ ಕುಡಿಯುವ ನೀರು, ಶಾಲಾ ವಿದ್ಯುದ್ದೀಕರಣ ಶಾಲಾ ಮೂಲಭೂತ ಸೌಕರ್ಯಗಳಿಗಾಗಿ ಸಹಾಯಧನ ನೀಡಲಾಗುತ್ತಿದ್ದು, ಇದಕ್ಕಾಗಿ ಇದುವರೆಗೆ ಒಟ್ಟು ರೂ. 38.01 ಕೋಟಿ ಪೂರಕ ಅನುದಾನವನ್ನು ನೀಡಲಾಗಿದೆ.
ಯೋಜನೆಯ ಸ್ವ-ಸಹಾಯ ಸಂಘಗಳ ಬಡ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಯೋಜನೆಯ ವತಿಯಿಂದ ಸುಜ್ಞಾನನಿಧಿ ಶಿಷ್ಯವೇತನ ನೀಡಲಾಗುತ್ತಿದೆ. ಇದರಂತೆ ಇದುವರೆಗೆ ರಾಜ್ಯದ 96,894 ವಿದ್ಯಾರ್ಥಿಗಳಿಗಾಗಿ ರೂ. 114.50 ಕೋಟಿ ಮೊತ್ತದ ವಿದ್ಯಾರ್ಥಿವೇತನ ನೀಡಲಾಗಿದೆ. ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಪೀಠೋಪಕರಣಗಳ ಕೊರತೆಯಿರುವ ಗ್ರಾಮೀಣ ಸರಕಾರಿ ಶಾಲೆಗಳಿಗೆ ಡೆಸ್ಕ್-ಬೆಂಚ್‌ಗಳನ್ನು ಒದಗಿಸಲಾಗುತ್ತಿದೆ. ಇದರಂತೆ ಶಾಲೆಗಳಿಗೆ ಗರಿಷ್ಟ 10 ಜೊತೆ ಡೆಸ್ಕ್-ಬೆಂಚುಗಳನ್ನು ಒದಗಿಸಲಾಗುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದಲೇ ಶಾಲೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಶೇ. 20ರಷ್ಟು ಮೊತ್ತವನ್ನು ಶಾಲಾಭಿವೃದ್ಧಿ ಸಮಿತಿಗಳು ಭರಿಸಿದರೆ ಉಳಿದ ಶೇ. 80 ರಷ್ಟು ಮೊತ್ತವನ್ನು ಕ್ಷೇತ್ರದಿಂದ ಭರಿಸಲಾಗುತ್ತಿದೆ. ಪ್ರಸ್ತುತ ವರ್ಷ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ತಾಲೂಕುಗಳ 507 ಶಾಲೆಗಳಿಗೆ 4,044 ಜೊತೆ ಡೆಸ್ಟ್-ಬೆಂಚ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇದಕ್ಕಾಗಿ ಒಟ್ಟು ರೂ 2.75 ಕೋಟಿ ಮೊತ್ತ ವಿನಿಯೋಗಿಸಲಾಗುತ್ತಿದೆ. ಇದರಿಂದಾಗಿ ಸುಮಾರು 20,220 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಇದುವರೆಗೆ ರಾಜ್ಯದ ಒಟ್ಟು 11,000 ಶಾಲೆಗಳಿಗೆ 72,000 ಜೊತೆ ಡೆಸ್ಟ್-ಬೆಂಚ್ ಗಳನ್ನು ವಿತರಿಸಲಾಗಿದೆ. ಇದಕ್ಕಾಗಿ ರೂ. 26.00 ಕೋಟಿ ಅನುದಾನ ವಿನಿಯೋಗಿಸಲಾಗಿದೆ.