ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಪೂರ್ವಭಾವಿ ಸಭೆ – ಆಮಂತ್ರಣ ಬಿಡುಗಡೆ

0

ಉಜಿರೆ: “ಸಮಾನ ಮನಸ್ಕರು, ಸಜ್ಜನರು ಸೇರಿ ಆರಂಭಿಸಿದ ಪಾದಯಾತ್ರೆ ಪರಂಪರೆ ಇಂದು ಸಂಸ್ಕೃತಿಯಾಗಿ ಬೆಳೆದಿದೆ. ಊರಿನ ಸೌಹಾರ್ದತೆ, ಸತ್ಯ, ಧರ್ಮ, ಪ್ರೀತಿ ಎತ್ತಿ ಹಿಡಿಯಲು ಪಾದಯಾತ್ರೆ ಸಹಕಾರಿಯಾಗಿದೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು. ಅವರು ನ.10ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾಭವನದಲ್ಲಿ ಜರಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. “ಪ್ರತಿ ವರ್ಷವೂ 10,000 ಕ್ಕಿಂತ ಅಧಿಕ ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದು ಉಜಿರೆ ಹಾಗೂ ಆಸುಪಾಸಿನ ಗ್ರಾಮಸ್ಥರಿಗೆ, ಊರವರಿಗೆ ಸರಿಯಾದ ವೇದಿಕೆ ಕಲ್ಪಿಸಿಕೊಟ್ಟಿದೆ. ಪಾದಯಾತ್ರೆಯ ಹಿಂದೆ ದೊಡ್ಡ ಶಕ್ತಿ ಇದೆ. ಎಲ್ಲರ ಸಹಭಾಗಿತ್ವ, ಮುಂದಾಳತ್ವದಲ್ಲಿ ಯಾವುದೇ ಕೊರತೆ ಇಲ್ಲದಂತೆ ಪಾದಯಾತ್ರೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಪಾದಯಾತ್ರೆಯಿಂದ ತೃಪ್ತಿ, ಶಕ್ತಿ , ಸ್ಪೂರ್ತಿ ಸಿಗುತ್ತದೆ ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮತ್ತು ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ “ಕೀರ್ತಿ ಶೇಷರಾದ ವಿಜಯ ರಾಘವ ಪಡುವೆಟ್ನಾಯ ಹಾಗೂ ಡಾ. ಯಶೋವರ್ಮ ಇವರಿಬ್ಬರು ಹಾಕಿಕೊಟ್ಟ ಪಾದಯಾತ್ರೆಯ ವೇದಿಕೆ ಬೆರಳೆಣಿಕೆ ಸಂಖ್ಯೆಯ ಅಭಿಮಾನಿಗಳಿಂದ ಆರಂಭವಾಗಿದ್ದು, ಇಂದು ನಾಡಿನಲ್ಲಿ ದೊಡ್ಡಮಟ್ಟದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯನ್ನು ಹುಟ್ಟು ಹಾಕಿದೆ. ನಶಿಸಿ ಹೋಗುತ್ತಿದ್ದ ಸಾತ್ವಿಕ ಶಕ್ತಿಗಳನ್ನು ಎತ್ತಿ ಹಿಡಿದಿದೆ” ಎಂದರು.

ಪಾದಯಾತ್ರೆಯ ಮಾರ್ಗದರ್ಶಕ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ “ಭಕ್ತಿ, ಶ್ರದ್ಧೆ, ಗೌರವ, ಪ್ರೀತಿಯ ಹೆಜ್ಜೆಯೊಂದಿಗೆ ಆರಂಭವಾದ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ಪಾದಯಾತ್ರೆಯಿಂದ ಶ್ರೀಕ್ಷೇತ್ರಕ್ಕೆ ಭಕ್ತರು ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಬಾರಿಯ ಪಾದಯಾತ್ರೆಗೆ ಬಿಳಿಯ ವಸ್ತ್ರ ಧರಿಸಿ ಬಂದರೆ ಉತ್ತಮ. ಪಾದಯಾತ್ರೆಯು ದೇವರ ನಾಮಸ್ಮರಣೆಯೊಂದಿಗೆ ನಿಧಾನವಾಗಿ ಸಾಗಬೇಕು. ಈ ಸಂದರ್ಭ ಅಲ್ಲಲ್ಲಿ ನೀರು ಮತ್ತು ಬೆಲ್ಲದ ವ್ಯವಸ್ಥೆ ಇರಲಿದೆ” ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗೇ ಗೌಡ ಮಾತನಾಡಿ ಪಾದಯಾತ್ರೆಯು ಧಾರ್ಮಿಕ, ಸಾಮಾಜಿಕ, ಮಾನಸಿಕ, ದೈಹಿಕವಾಗಿ ನೆಮ್ಮದಿ ನೀಡುತ್ತದೆ ಎಂದರು. ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ತಾಲೂಕು ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್., ಉಜಿರೆ ಎಸ್‌. ಡಿ.ಎಂ. ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ.ಎ. ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಯೋಜನೆಯ ಕೃಷಿ ನಿರ್ದೇಶಕ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ವಂದಿಸಿದರು.

ಕಳೆದ ವರ್ಷದ ಪಾದಯಾತ್ರೆ ಆಯ-ವ್ಯಯ ಮಂಡಿಸಲಾಯಿತು. ಯೋಜನೆಯ ಅಧಿಕಾರಿಗಳು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಜರಿದ್ದು, ಸಲಹೆ ಸೂಚನೆ ನೀಡಿದರು. ಇದೆ ಸಂದರ್ಭದಲ್ಲಿ ಈ ಬಾರಿಯ ಪಾದಯಾತ್ರೆಯ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ನ.26ರಂದು ಪಾದಯಾತ್ರೆ: ಈ ಬಾರಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪಾದಯಾತ್ರೆ ನ. 26ರಂದು ಮಧ್ಯಾಹ್ನ 3 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗೆ ನಡೆಯಲಿದೆ. ಇದು 12ನೇ ವರ್ಷದ ಪಾದಯಾತ್ರೆಯಾಗಿದ್ದು, ಇದರಲ್ಲಿ ಗಣ್ಯರ ಸಹಿತ ಅನೇಕ ಭಜನಾ ತಂಡಗಳು, ಭಕ್ತ ಬಾಂಧವರು ಭಾಗವಹಿಸಲಿದ್ದಾರೆ. ಶಿಸ್ತು, ಸ್ವಚ್ಛತೆಗೆ ಆದ್ಯತೆ ನೀಡುವ 9 ಈ ಪಾದಯಾತ್ರೆ ಲಕ್ಷದೀಪೋತ್ಸವದ ಪ್ರಾರಂಭದ ದಿನ ನಡೆಯುತ್ತಾ ಬಂದಿದೆ.

p>

LEAVE A REPLY

Please enter your comment!
Please enter your name here