ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್ ಗಳಿಗೆ ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕೆಂದು ನ.11ರಿಂದ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ಎದುರು ಬೆಳಗ್ಗೆ10.00 ಗಂಟೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದ್ದು, ಹಿಂದೂ ಬಾಂಧವರು ಇದನ್ನು ಬೆಂಬಲಿಸಬೇಕೆಂದು ಕೊಕ್ಕಡದ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಕೊಕ್ಕಡ ತಿಳಿಸಿದರು.
ಈ ಎಲ್ಲಾ ಪ್ರಕರಣಗಳನ್ನು ಸಮಗ್ರವಾದ ತನಿಖೆ ನಡೆಸಿ ದುರುದ್ದೇಶದಿಂದ ಅಕ್ರಮವಾಗಿ ರಚಿಸಿಕೊಂಡ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅನ್ನು ರದ್ದು ಪಡಿಸಿ, ಅದರ ಎಲ್ಲಾ ಆಸ್ತಿಯನ್ನು ಅದರ ನಿಜವಾದ ಮಾಲಕರಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು. ಟ್ರಸ್ಟ್ ಆದ ಬಳಿಕದಿಂದ ಇಂದಿನವರೆಗೆ ಆದ ಎಲ್ಲಾ ಆದಾಯಗಳ ಖರ್ಚುವೆಚ್ಚಗಳ ತನಿಖೆ ನಡೆಸಿ ಎಲ್ಲಾ ಆದಾಯಗಳನ್ನು ದೇವಾಲಯದ ಖಜಾನೆಗೆ ತುಂಬಿಸಲು ಆದೇಶಿಸಬೇಕು. ದೇವಾಲಯಕ್ಕೆಂದು ಭಕ್ತರ ದೇಣಿಗೆಯಿಂದ ಖರೀದಿಸಲಾದ ಒಟ್ಟು 3.46 ಎಕ್ರೆ ಸ್ಥಿರಾಸ್ತಿಯನ್ನು ದೇವಸ್ಥಾನದ ಹೆಸರಿಗೆ ಬರೆಸಿಕೊಳ್ಳಲು ಸೂಕ್ತ ಆದೇಶ ನೀಡಬೇಕೆಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದ್ದು, ಹಿಂದೂ ಬಾಂಧವರು, ಶ್ರೀ ಕ್ಷೇತ್ರದ ಭಕ್ತರು ಇದರಲ್ಲಿ ಭಾಗವಹಿಸಿ ದೇವರ ಪರವಾದ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.