ಬೆಳ್ತಂಗಡಿ: ನ.10 ಮೂಡಬಿದಿರೆಯಲ್ಲಿ ಕರಾವಳಿ ಮರಾಟಿ ಸಮಾವೇಶ 2024 “ಗದ್ದಿಗೆ”- ನ. 24 ಗುರುವಾಯನಕೆರೆಯಲ್ಲಿ ಮರಾಟಿ ವಧು-ವರರ ಸಮಾವೇಶ, ಸಾಧಕರಿಗೆ ಸನ್ಮಾನ – ಪತ್ರಿಕಾ ಗೋಷ್ಠಿ

0

ಬೆಳ್ತಂಗಡಿ: ಕರಾವಳಿ ಮರಾಟಿ ಸಮಾವೇಶ 2024 ” ಗದ್ದಿಗೆ “
ನ. 10ರಂದು ಮೂಡಬಿದಿರೆ ವಿದ್ಯಾಗಿರಿ ಆಳ್ವಾಸ್ ಕಾಲೇಜು ನುಡಿಸಿರಿ ಸಭಾಂಗಣದಲ್ಲಿ ನಡೆಯಲಿದೆ. ನ. 9 ರಂದು ಮರಾಟಿ ವಿದ್ಯಾವಂತ ಯುವಕ ಯುವತಿಯರಿಗಾಗಿ ಉದ್ಯೋಗ ಮೇಳ ಮತ್ತು ನ. 24 ರಂದು ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಗುರುವಾಯನಕೆರೆ ನಮ್ಮ ಮನೆ ಹವ್ಯಕ ಭವನದಲ್ಲಿ ಮರಾಟಿ ವಧು – ವರರ ಸಮಾವೇಶ, ಮರಾಟಿ ಪ್ರತಿಭಾ ಪುರಸ್ಕಾರ, ಮರಾಟಿ ಸಾಧನಾ ಪುರಸ್ಕಾರ, ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಸತೀಶ್ ಹೆಚ್. ಎಲ್. ಹೇಳಿದರು. ಅವರು ನ. 5 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು. ಮೂಡಬಿದಿರೆಯಲ್ಲಿ ನಡೆಯುವ ಕರಾವಳಿ ಮರಾಟಿ ಸಮಾವೇಶದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾವೇಶದ ಅಧ್ಯಕ್ಷ ಹೆಚ್. ರಾಜೇಶ್ ಪ್ರಸಾದ್ ಐಎಎಸ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸ್ಮರಣಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮೂಡಬಿದ್ರೆ ಶಾಸಕ ಉಮಾನಾಥ್ ಎ. ಕೋಟ್ಯಾನ್, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೆ. ಅಭಯಚಂದ್ರ ಜೈನ್ ಮತ್ತು ಇತರರು ಭಾಗವಹಿಸಲಿದ್ದಾರೆ. ಸಮಾವೇಶದ ಗೌರವಾಧ್ಯಕ್ಷ ಡಾ. ಕೆ. ಸುಂದರ ನಾಯ್ ಮರಾಟಿಗರ ಮನವಿ ಮಂಡನೆ ಮಾಡಲಿದ್ದಾರೆ.
ಈ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈಯವರನ್ನು ಸನ್ಮಾನಿಸಲಾಗುವುದು. ಅಪರಾಹ್ನ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ದ. ಕ.ಸಂಸದ ಕ್ಯಾ, ಬ್ರಿಜೇಶ್ ಚೌಟ, ಮಾಜಿ ಸಚಿವ ವಿ. ಸುನಿಲ್ ಕುಮಾರ್, ಶಾಸಕರುಗಳಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಬಂಟ್ವಾಳ, ಹರೀಶ್ ಪೂಂಜ ಬೆಳ್ತಂಗಡಿ , ವೇದವ್ಯಾಸ ಕಾಮತ್ ಮಂಗಳೂರು ದಕ್ಷಿಣ ,ಡಾ. ಭರತ್ ಶೆಟ್ಟಿ ವೈ.ಮಂಗಳೂರು ಉತ್ತರ , ಅಶೋಕ್ ಕುಮಾರ್ ರೈ ಪುತ್ತೂರು, ಭಾಗೀರಥಿ ಮುರುಳ್ಯ ಸುಳ್ಯ, ಗುರ್ಮೆ ಸುರೇಶ್ ಶೆಟ್ಟಿ ಕಾಪು, ಕಿರಣ್ ಕುಮಾರ್ ಕೂಡ್ಗಿ ಕುಂದಾಪುರ, ಗುರುರಾಜ್ ಗಂಟಿಹೊಳೆಬೈಂದೂರು, ಯಶ್ ಪಾಲ್ ಸುವರ್ಣ ಉಡುಪಿ, ಬೆಂಗಳೂರು ಕೆನರಾ ಬ್ಯಾಂಕ್ ಜನರಲ್ ಮೆನೇಜರ್ ರಾಮ ನಾಯ್ಕ ಭಾಗವಹಿಸಲಿದ್ದಾರೆ ಅಬಕಾರಿ ಇಲಾಖೆಯ ಜಂಟಿ ಆಯುಕ್ತರಾದ ಡಾ. ಬಾಲಕೃಷ್ಣ ಸಿ.ಎಚ್ ಸಮಾರೋಪ ಭಾಷಣ ಮಾಡಲಿದ್ದಾರೆ. ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.

ಮೂರು ಗೋಷ್ಠಿಗಳು: ಇದರೊಂದಿಗೆ ಶಿಕ್ಷಣ ಮತ್ತು ಯುವ ಜನತೆ ವಿಚಾರವಾಗಿ ಗೋಷ್ಠಿ, ಮರಾಟಿಗರ ಆಚಾರ ವಿಚಾರ ಮತ್ತು ಸಂಸ್ಕಾರ ಗೋಷ್ಠಿ, ಮರಾಟಿ ಭಾಷೆ ಉಳಿಸುವುದು ಮತ್ತು ಬೆಳೆಸುವುದು ವಿಚಾರವಾಗಿ ಉಪನ್ಯಾಸ, ಮರಾಟಿಗರ ಸಮಸ್ಯೆ ಮತ್ತು ಸವಾಲುಗಳು ವಿಚಾರವಾಗಿ ಗೋಷ್ಠಿ ನಡೆಯಲಿದೆ ಉಚ್ಚ ನ್ಯಾಯಾಲಯದ ನ್ಯಾಯವಾದಿ ಪ್ರವೀಣ್ ಕುಮಾರ್ ಮುಗುಳಿ ವಿಚಾರಗೋಷ್ಠಿ ನಡೆಸಲಿದ್ದಾರೆ. ವಿಚಾರಗೋಷ್ಠಿಯಲ್ಲಿ ಹಲವು ಗಣ್ಯರು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಇದರೊಂದಿಗೆ ವಿವಿಧ ಸಾಂಸ್ಕೃತಿಕ ತಂಡಗಳಿಂದ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪರಿಣತರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಖ್ಯ ವೇದಿಕೆಗಳಲ್ಲಿ ನಡೆಯಲಿದೆ. ಮಂಗಳೂರು, ಉಡುಪಿ, ಕಾಸರಗೋಡು, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮರಾಟಿ ಸಮಾಜ ಬಾಂಧವರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು. ನ. 24 ರಂದು ಗುರುವಾಯನಕೆರೆಯಲ್ಲಿ ನಡೆಯುವ ಮರಾಟಿ ವಧು ವರರ ಸಮಾವೇಶದಲ್ಲಿ ಮಾಜಿ ಸೈನಿಕರಾದ ಗಣೇಶ್ ಬಿ. ಎಲ್. ಲಾಯಿಲ, ಮಂಜುನಾಥ್ ನಾಯ್ಕ ಮದ್ದಡ್ಕ ಇವರಿಗೆ ಸನ್ಮಾನ, ಇತರ ಸಾಧಕರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಬೆಳ್ತಂಗಡಿ ತಾಲೂಕು ಸಂಘದ ಸ್ಥಾಪಕಾಧ್ಯಕ್ಷ, ಗೌರವ ಸಲಹೆಗಾರ ಜಿಲ್ಲಾ ಕೆಡಿಪಿ ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ತಾರಾನಾಥ ನಾಯ್ಕ, ಕಾರ್ಯದರ್ಶಿ ಪ್ರಸಾದ್ ನಾಯ್ಕ, ಕೋಶಾಧಿಕಾರಿ ಹರೀಶ್ ಪೆರಾಜೆ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here