ಬೆಳ್ತಂಗಡಿ: ಹೆಬ್ಬಾವನ್ನು ಸೆರೆ ಹಿಡಿದ ಮಹಿಳೆಯ ಸಾಹಸಮಯ ವಿಡಿಯೋ ನ.4ರಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಬಹುತೇಕ ಮಾಧ್ಯಮಗಳು ಮಹಿಳೆ ಯಾರೆಂದು ತಿಳಿಯದೆ, ಆ ಊರಿನವರು ಇರಬಹುದು, ಈ ಊರಿನವರು ಇರಬಹುದು ಎಂದೇ ಬರೆದಿದ್ದವು. ಆ ಮಹಿಳೆ ಬೇರೆ ಯಾರೂ ಅಲ್ಲ, ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿಯ ಶೋಭಾ!
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುರುವಾಯನಕೆರೆ ಕಚೇರಿ ವ್ಯಾಪ್ತಿಯ ತಣ್ಣೀರುಪಂತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಶೋಭಾ ಐದು ವರ್ಷಗಳಿಂದ ತಮ್ಮ ಊರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ೯೦೦ಕ್ಕೂ ಅಧಿಕ ಹಾವುಗಳನ್ನು ಹಿಡಿದು ರಕ್ಷಿಸಿದವರು.
ಮಹಿಳೆಯ ಸಾಹಸಕ್ಕೆ ಪ್ರಶಂಸೆ:
ಉರುವಾಲು ಗ್ರಾಮದ ಕುಪೆಟ್ಟಿ ಸಮೀಪದ ನೆಕ್ಕಿಲು ಜಾರಿಗೆದಡಿ ಎಂಬಲ್ಲಿ ನ.3ರಂದು ಬೆಕ್ಕೊಂದನ್ನು ಹೆಬ್ಬಾವು ಹಿಡಿದು ನುಂಗಲು ಯತ್ನಿಸುತ್ತಿತ್ತು. ಈ ವೇಳೆ ಬಂದ ಕರೆಗೆ ಸ್ಪಂದಿಸಿದ ಶೋಭಾ ಸ್ಥಳಕ್ಕೆ ಧಾವಿಸಿ, ಹೆಬ್ಬಾವಿನ ಹಿಡಿತದಿಂದ ಬೆಕ್ಕನ್ನು ರಕ್ಷಿಸಿದ್ದಲ್ಲದೆ, ಹೆಬ್ಬಾವನ್ನು ಸೆರೆ ಹಿಡಿದು ಗೋಣಿಚೀಲಕ್ಕೆ ತುಂಬಿಸಿದ್ದರು. ಇದನ್ನು ಸ್ಥಳದಲ್ಲಿದ್ದವರು ಯಾರೋ ವಿಡಿಯೋ ಮಾಡಿದ್ದರು. ಈ ಐದು ನಿಮಿಷದ ವಿಡಿಯೋ ಒಂದೇ ದಿನದಲ್ಲಿ ಭಾರಿ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಶೋಭಾ ದೊಡ್ಡ ಅಲೆ ಎಬ್ಬಿಸಿದ್ದಾರೆ.