ನಾರಾವಿ: ಸಂತ ಅಂತೋನಿ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಅ.29ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಕಲಾ ಸಂಭ್ರಮ 2024’ ಎಂಬ ಅಂತರ್ ಶಾಲಾ ಸಾಂಸ್ಕ್ರತಿಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟರಾಗಿರುವ ತೆಲಿಕೆದ ತೆನಾಲಿ ಖ್ಯಾತಿಯ ಸುನೀಲ್ ನೆಲ್ಲಿಗುಡ್ಡೆ “ವಿದ್ಯಾರ್ಥಿಯಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಒಂದು ವೇದಿಕೆ ಎನ್ನುವುದು ಅಗತ್ಯ. ಅಂತಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವಲ್ಲಿ ಈ ಕಲಾ ಸಂಭ್ರಮ ಎಂಬ ವೇದಿಕೆಯು ಸಹಕಾರಿಯಾಗಲಿದೆ. ಒಬ್ಬ ವ್ಯಕ್ತಿಯಲ್ಲಿರುವ ಕಲೆ ಹಾಗೂ ಪ್ರತಿಭೆಯು ಮುಂದೊಂದು ದಿನ ಆತನನ್ನು ಕಲಾವಿದನನ್ನಾಗಿ ಮಾಡುತ್ತದೆ “ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ. ಸ್ವಾಮಿ ಜೆರೋಮ್ ಡಿ’ಸೋಜಾ ಸಾಧಿಸಲೇ ಬೇಕೆನ್ನುವ ಛಲವಿದ್ದ ಮನುಷ್ಯ ಸಿಕ್ಕ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಲಾರ ಎಂಬುದನ್ನು ನಿದರ್ಶನದ ಮೂಲಕ ಹೇಳಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾoಶುಪಾಲ ವo. ಡಾ. ಆಲ್ವಿನ್ ಸೆರಾವೋ, ಮುಖ್ಯ ಅತಿಥಿಗಳಾದ ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಮಿರಾಂದ ಹಾಗೂ ಎವ್ಜಿನ್ ರೋಡ್ರಿಗಸ್, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರುಗಳಾದ ಸಂತೋಷ್ ಸಲ್ಡಾನ ಹಾಗೂ ರಿಚರ್ಡ್ ಮೋರಸ್, ಕಾರ್ಯಕ್ರಮದ ಮುಖ್ಯ ಆಯೋಜಕರಾಗಿರುವ ಹಾಗೂ ಸಾಂಸ್ಕ್ರತಿಕ ಸಂಘದ ನಿರ್ದೇಶಕ ಅವಿಲ್ ಮೋರಸ್ ಹಾಗೂ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸೋನಿಯಾ ಡಿ’ಸೋಜಾ, ಪದವಿ ಕಾಲೇಜಿನ ವಾಣಿಜ್ಯ ಸಂಘದ ನಿರ್ದೇಶಕರಾಗಿರುವ ಸಂತೋಷ್ ಹಾಗೂ ಅವಿನಾಶ್ ಲೋಬೋ, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯರಾಗಿರುವ ಶರಣ್ಯ ಹಾಗೂ ಅಶ್ಮಿ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಶರಣ್ಯ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನ್ವಿತಾ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಸನ್ವಿತಾ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.