ಮೂಡುಬಿದಿರೆ: ರಶ್ಮಿತಾ ಜೈನ್ ಅವರಿಗೆ ದ.ಕ. ಜಿಲ್ಲಾ ಪ್ರಶಸ್ತಿ

0

ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ ಜೈನ್ ಅವರಿಗೆ 2024ನೇ ಸಾಲಿನ ದ.ಕ.ಜಿಲ್ಲಾ ಪ್ರಶಸ್ತಿ ಪ್ರಾಪ್ತವಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿಲಾಗಿದೆ. ನ.1ರಂದು ಕರ್ನಾಟಕ ರಾಜ್ಯೋತ್ಸವದ ಶುಭಾವಸರದಲ್ಲಿ ಮಂಗಳೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಈ ಪುರಸ್ಕಾರವನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಬ್ರಜೇಶ್ ಚೌಟ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ರಶ್ಮಿತಾ ಜೈನ್ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ತಮ್ಮ ಪತಿ ಯುವರಾಜ್ ಜೈನ್ ಅವರ ಜೊತೆಗೂಡಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಸಂಸ್ಥೆಯಲ್ಲಿ ಇಂದು ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗೆ ಒಟ್ಟು 3000ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಂಸ್ಥೆಯ ಮೂಲಕ ಈವರೆಗೆ ಹೊರಹೋದ ಸಾವಿರಾರು ವಿದ್ಯಾರ್ಥಿಗಳು ವೈದ್ಯರಾಗಿ, ಇಂಜಿನಿಯರ್‌ಗಳಾಗಿ, ವಿಜ್ಞಾನಿಗಳಾಗಿ, ಅಧ್ಯಾಪಕರಾಗಿ, ಆರ್ಥಿಕ ವಲಯದ ಅನೇಕ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾಗಿ ಯೋಗ್ಯ ಪ್ರಜೆಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ರಶ್ಮಿತಾ ಅವರು ತಮ್ಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಗುರುಕುಲ ಮಾದರಿಯ ಜೀವನಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಯೋಗ, ಧ್ಯಾನ, ಭಜನೆ ಮೊದಲಾದುವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದಾರೆ. ಗುರುಹಿರಿಯರು, ತಂದೆ-ತಾಯಿಗಳ ಬಗೆಗೆ ಗೌರವ, ರಾಷ್ಟ್ರೀಯತೆ, ಸಾಮಾಜಿಕ ಸನ್ನಡತೆ, ಭಾರತೀಯ ಸನಾತನ ಸಂಸ್ಕೃತಿಯ ಬಗೆಗೆ ಆದರ ಭಾವವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯೋಗ್ಯ ತರಬೇತಿಯನ್ನು ನಿರಂತರವಾಗಿ ನೀಡುತ್ತ ಬಂದಿದ್ದಾರೆ. ಸಂಸ್ಥೆಯ ಮೂಲಕ ಮೂಡುಬಿದಿರೆ ಪರಿಸರದ ಜೇಸಿ, ರೋಟರಿ, ಜೈನ್ ಮಿಲನ್ ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಅನೇಕ ಪರಿಸರ ಸಂಬಂಧಿ ಹಾಗೂ ಸಾಮಾಜಿಕ ಸೇವಾ ಕಾರ‍್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಅತ್ಯಂತ ಪ್ರಿಯವಾದ ‘ಸಸ್ಯಶ್ಯಾಮಲ’ ಕಾರ‍್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಒಂದು ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ. ಸಂಸ್ಥೆಯ ಆವರಣದಲ್ಲಿ ಹಸಿರು ಉಸಿರಾಡುವಂತೆ ಮಾಡಿ ಮಕ್ಕಳಿಗೆ ಪರಿಸರ ಪ್ರೀತಿಯನ್ನುಂಟುಮಾಡಿದ್ದಾರೆ. ಮೂಡುಬಿದಿರೆ ಪರಿಸರದಲ್ಲಿ ನಡೆಸಲಾದ ಬೃಹತ್ ಸ್ವಚ್ಛತಾ ಆಂದೋಲನ, ಕೊರೋನಾ ಸಂದರ್ಭದ ಅಶಕ್ತರಿಗೆ ದವಸಧಾನ್ಯಗಳ ಕಿಟ್ ವಿತರಣೆ ಹಾಗೂ ಉಚಿತ ಲಸಿಕೆ ಕಾರ‍್ಯಕ್ರಮಗಳು ಜನಮನ ತಲುಪಿವೆ. ಮನೆಯಿಲ್ಲದವರಿಗೆ ಮನೆಕಟ್ಟಿಕೊಟ್ಟಿದ್ದಾರೆ. ಹಲವು ಸಂಘ-ಸಂಸ್ಥೆಗಳಿಗೆ, ಸರ್ಕಾರಿ ಶಾಲೆಗಳಿಗೆ, ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಉಚಿತವಾಗಿ ಒದಗಿಸಿಕೊಟ್ಟಿದ್ದಾರೆ.

ರಶ್ಮಿತಾ ಅವರು ಅತ್ಯುತ್ತಮ ತರಬೇತುದಾರರು ಕೂಡ. ನೂರಾರು ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ವ್ಯಕ್ತಿತ್ವ ವಿಕಸನ, ಪರೀಕ್ಷಾ ತಯಾರಿ ಮೊದಲಾದ ವಿಷಯಗಳ ಕುರಿತು 200ಕ್ಕೂ ಹೆಚ್ಚಿನ ತರಬೇತಿಗಳನ್ನು ನೀಡಿದ್ದಾರೆ. ನೂರಾರು ಮಂದಿ ಸಾಧಕರನ್ನು, ನಿವೃತ್ತ ಶಿಕ್ಷಕರನ್ನು ಗುರುತಿಸಿ ಸಂಸ್ಥೆಗೆ ಆಹ್ವಾನಿಸಿ ಸನ್ಮಾನಿಸುವ ಸಹೃದಯತೆಯನ್ನು ಮರೆದಿದ್ದಾರೆ. ಇತಿಹಾಸ ಪ್ರಸಿದ್ಧ ತುಳುನಾಡಿನ ಹೆಮ್ಮೆಯ ರಾಣಿ ಅಬ್ಬಕ್ಕಳ ವಿಶೇಷ ಅಂಚೆ ಚೀಟಿಯನ್ನು ಭಾರತೀಯ ಅಂಚೆ ಇಲಾಖೆಯ ಮೂಲಕ ಮುದ್ರಿಸಿ ಲೋಕಾರ್ಪಣೆಗೊಳಿಸಿದ್ದಾರೆ. ರಾಜ್ಯಮಟ್ಟದ ಯುವಸಮ್ಮೇಳನಗಳನ್ನು ನಡೆಸಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಹಲವುಹತ್ತು ಸಾಹಿತ್ಯ, ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಸಂಸ್ಥೆಯ ಮೂಲಕ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ಸರ್ವಧರ್ಮ ಸಮನ್ವಯಭಾವ ಬೆಳೆಸಲು ಪ್ರತಿವರ್ಷ ‘ಸರ್ವಧರ್ಮ ಅರಿವು’ ಎಂಬ ಕಾರ‍್ಯಕ್ರಮವನ್ನು ಹಾಗೂ ಭಾರತೀಯ ಸಂಸ್ಕೃತಿಯ ಹಬ್ಬಗಳನ್ನು, ರಾಷ್ಟ್ರೀಯ ಹಬ್ಬಗಳನ್ನು ಅರ್ಥಪೂರ್ಣವಾಗಿ ಅಚರಿಸಿಕೊಂಡು ಬರಲಾಗಿದೆ. ಸಂಸ್ಥೆಗೆ ಹಲವು ಪೂಜ್ಯರನ್ನು, ಗಣ್ಯರನ್ನು, ವಿದ್ವಾಂಸರು, ವಿಜ್ಞಾನಿಗಳು, ಶಿಕ್ಷಣತಜ್ಞರು ಮೊದಲಾದವನ್ನು ಆಹ್ವಾನಿಸಿ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಅವರಿಗೆ ಸಂದ ಈ ಪುರಸ್ಕಾರಕ್ಕಾಗಿ ಗಣ್ಯರು ಹಾಗೂ ಹಿತೈಷಿಗಳು ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here